ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ (Rishabh Pant) ರಸ್ತೆ ಅಪಘಾತಕ್ಕೀಡಾಗಿರುವುದು ಗೊತ್ತೇ ಇದೆ. ಶುಕ್ರವಾರ ಬೆಳಗ್ಗೆ ದೆಹಲಿಯಿಂದ ರೂರ್ಕಿಗೆ ಪ್ರಯಾಣಿಸುತ್ತಿದ್ದಾಗ ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ತಕ್ಷಣ ಪಂತ್ ಅವರನ್ನು ಡೆಹ್ರಾಡೂನ್‌ನ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೂಡ ನೀಡಲಾಗಿದೆ. ಇತ್ತೀಚೆಗಷ್ಟೇ ಪಂತ್ ಅವರ ಆರೋಗ್ಯ ಸ್ಥಿತಿ ಕುರಿತು ಬಿಸಿಸಿಐ ಹೇಳಿಕೆ ಬಿಡುಗಡೆ ಮಾಡಿದೆ. ಬಿಸಿಸಿಐ (BCCI) ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ‘ಪಂತ್ ಅವರ ಹಣೆಗೆ ಪೆಟ್ಟು ಬಿದ್ದಿದ್ದು, ಬೆಂಕಿಯಿಂದ ಬೆನ್ನಿನಲ್ಲಿ ಸುಟ್ಟ ಗಾಯಗಳಾಗಿವೆ. ಅಲ್ಲದೆ ಬಲ ಮೊಣಕಾಲಿನ ಅಸ್ಥಿರಜ್ಜು ಪಲ್ಲಟಗೊಂಡಿರುವುದು ಎಕ್ಸ್-ರೇಗಳಿಂದ (x-ray report) ತಿಳಿದುಬಂದಿದೆ. ಹಿಮ್ಮಡಿ ಮತ್ತು ಕಾಲ್ಬೆರಳುಗಳ ಮೇಲೂ ಗಾಯಗಳಾಗಿವೆ. ಆದರೆ, ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಜೀವಕ್ಕೆ ಯಾವುದೇ ಅಪಾಯವಿಲ್ಲ’ ಎಂಬುದು ಹೇಳಿಕೆಯಲ್ಲಿ ಉಲ್ಲೇಖವಾಗಿದೆ.
ಪಂತ್ ಅವರ ಸ್ಥಿತಿ ಈಗ ಉತ್ತಮವಾಗಿದೆ, ಇತರ ಪರೀಕ್ಷೆಗಳು ಮತ್ತು ಸ್ಕ್ಯಾನ್‌ಗಳು ನಡೆಯುತ್ತಿವೆ ಎಂದು ಬಿಸಿಸಿಐ ಕಾರ್ಯದರ್ಶಿ ಜೈಶಾ ಹೇಳಿದ್ದಾರೆ. ಶಾ ತಮ್ಮ ಹೇಳಿಕೆಯಲ್ಲಿ, ‘ಪಂತ್ ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಪಂತ್ ಅವರ ಆರೋಗ್ಯ ಸ್ಥಿತಿಯನ್ನು ಕಾಲಕಾಲಕ್ಕೆ ಗಮನಿಸಲಾಗುತ್ತಿದ್ದು, ಯಾವುದೇ ರೀತಿಯ ನೆರವು ನೀಡಲು ಸಿದ್ಧ ಎಂದು ಹೇಳಿದ್ದಾರೆ. ಅಲ್ಲದೆ ಪಂತ್ ಅವರ ಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
Media Statement – Rishabh Pant
The BCCI will see to it that Rishabh receives the best possible medical care and gets all the support he needs to come out of this traumatic phase.
Details here ??https://t.co/NFv6QbdwBD
— BCCI (@BCCI) December 30, 2022
ಆದರೆ ಈ ಅಪಘಾತಕ್ಕೆ ಕಾರಣವೇನು? ಅತೀ ವೇಗದಿಂದ ಈ ಅಪಘಾತ ಸಂಭವಿಸಿದೇಯಾ? ಅತಿ ವೇಗದಿಂದ ಕಾರು ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆಯಿತಾ..? ಅಥವಾ ನಿದ್ರೆಯಲ್ಲಿ ಈ ಅವಘಡ ಸಂಭವಿಸಿದೆಯಾ? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಅಪಘಾತದ ಸಮಯದಲ್ಲಿ ಪಂತ್ ಸೀಟ್ ಬೆಲ್ಟ್ ಧರಿಸಿದ್ರಾ ಎಂಬುದು ಸ್ಪಷ್ಟವಾಗಿಲ್ಲ.
Rishabh Pant accident: ರಿಷಬ್ ಪಂತ್ ಚೇತರಿಕೆಗಾಗಿ ಪ್ರಾರ್ಥಿಸಿದ ಪಾಕಿಸ್ತಾನ್ ಕ್ರಿಕೆಟಿಗರು
ಈ ಅವಘಡ ಸಂಭವಿಸುವ ವೇಳೆ ರಿಷಬ್ ಪಂತ್ ಮಾತ್ರ ಕಾರಿನಲ್ಲಿದ್ದು, ಅವರೇ ಕಾರನ್ನು ಓಡಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹೊತ್ತಿ ಉರಿಯುತ್ತಿದ್ದ ಕಾರಿನ ಗಾಜುಗಳನ್ನು ಒಡೆದು ರಿಷಬ್ ಪಂತ್ ಹೊರಗೆ ಬಂದಿದ್ದಾರೆ ಎನ್ನಲಾಗಿದೆ. ರಾತ್ರಿ ಪ್ರಯಾಣದ ಕಾರಣ ಕೊಂಚ ತೂಕಡಿಕೆಯಾಗಿದ್ದು, ಕ್ಷಣಾರ್ಧದಲ್ಲಿ ಅಪಘಾತ ಸಂಭವಿಸಿದೆ ಎಂದು ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ಹೇಳಿಕೆ ನೀಡಿದ್ದಾರೆ. ಅಪಘಾತದಿಂದ ರಿಷಬ್ ಪಂತ್ ಶೀಘ್ರ ಗುಣಮುಖರಾಗಲಿ ಎಂದು ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:59 pm, Fri, 30 December 22