Rishabb Pant: ಅಂಪೈರ್ ನೋ ಬಾಲ್ ಕೊಟ್ಟಿಲ್ಲ ಹೋಗಿ ಕೇಳೆಂದು ಕೋಚ್ ಅನ್ನೇ ಮೈದಾನಕ್ಕೆ ಅಟ್ಟಿದ ಪಂತ್

Rishabb Pant: ಅಂಪೈರ್ ನೋ ಬಾಲ್ ಕೊಟ್ಟಿಲ್ಲ ಹೋಗಿ ಕೇಳೆಂದು ಕೋಚ್ ಅನ್ನೇ ಮೈದಾನಕ್ಕೆ ಅಟ್ಟಿದ ಪಂತ್
Rishabh Pant No Ball DC vs RR

DC vs RR, IPL 2022: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅಂಪೈರ್ ನೀಡಿದ ತೀರ್ಪಿನಿಂದ ಸಿಟ್ಟಾಗಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ನಡೆದುಕೊಂಡ ರೀತಿ ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಲ್ಲದೆ ಇದನ್ನು ಐಪಿಎಲ್ 2022ರ ಮೊದಲ ವಿವಾದ ಎಂದು ಹೇಳಲಾಗುತ್ತಿದೆ.

TV9kannada Web Team

| Edited By: Vinay Bhat

Apr 23, 2022 | 7:47 AM

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯಲ್ಲಿ ಶುಕ್ರವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ (DC vs RR) ನಡುವೆ ನಡೆದ ಕದನ ರಣ ರೋಚಕವಾಗಿತ್ತು. ಕೊನೆಯ ಓವರ್ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿದ ಪಂದ್ಯದಲ್ಲಿ ಅಂತಿಮವಾಗಿ ಸಂಜು ಸ್ಯಾಮ್ಸನ್ ಪಡೆ 15 ರನ್​​ಗಳಿಂದ ಗೆದ್ದು ಬೀಗಿತು. ಅದರಲ್ಲೂ ಅಂತಿಮ 6 ಎಸೆಗಳಲ್ಲಿ ಡೆಲ್ಲಿಗೆ ಗೆಲ್ಲಲು 36 ರನ್​​ಗಳಿದ್ದಾಗ ಆ ಓವರ್​ನಲ್ಲಿ ಹೈ ಡ್ರಾಮವೇ ನಡೆದು ಹೋಯಿತು. ಅಂಪೈರ್ ನೀಡಿದ ತೀರ್ಪಿನಿಂದ ಸಿಟ್ಟಾಗಿ ಡೆಲ್ಲಿ ನಾಯಕ ರಿಷಭ್ ಪಂತ್ (Rishabh Pant) ನಡೆದುಕೊಂಡ ರೀತಿ ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಲ್ಲದೆ ಇದನ್ನು ಐಪಿಎಲ್ 2022ರ (IPL 2022) ಮೊದಲ ವಿವಾದ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಆ ಕೊನೆಯ ಓವರ್​​ನಲ್ಲಿ ನಡೆದಿದ್ದೇನು?, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ರಾಜಸ್ಥಾನ್ ರಾಯಲ್ಸ್ ನೀಡಿದ್ದ 223 ರನ್‌ಗಳ ಟಾರ್ಗೆಟ್ ಅನ್ನು ಬೆನ್ನಟ್ಟಲು ಹೊರಟ ಡೆಲ್ಲಿಗೆ ಗೆಲ್ಲಲು ಕೊನೇ ಓವರ್‌ನಲ್ಲಿ 36 ರನ್​​ಗಳು ಬೇಕಾಯಿತು. ಅಂದರೆ ಆರು ಬಾಲ್​ನಲ್ಲಿ 6 ಸಿಕ್ಸರ್. ಹೀಗಿದ್ದಾಗ ಶೇ. 90 ರಷ್ಟು ಗೆಲುವು ಬೌಲಿಂಗ್ ತಂಡಕ್ಕೆ ಎಂಬುದು ಗೊತ್ತಿರುವ ಸಂಗತಿ. ರಾಯಲ್ಸ್‌ ಪರ ಅಂತಿಮ ಓವರ್‌ ಎಸೆದ ಒಬೆಡ್‌ ಮೆಕಾಯ್‌ ಎದುರು ದಿಲ್ಲಿ ಬ್ಯಾಟರ್‌ ರೋವ್ಮನ್‌ ಪೊವೆಲ್‌ ಒಂದು ಕ್ಷಣ ಡೆಲ್ಲಿ ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿಸಿದರು. ಯಾಕೆಂದರೆ ಮೆಕಾಯ್‌ ಅವರ ಮೊದಲ ಮೂರು ಎಸೆತಗಳಲ್ಲಿ ಪೊವೆಲ್ ಸಿಕ್ಸರ್‌ ಬಾರಿಸಿದ್ದರು. ಮೊದಲ ಮೂರು ಎಸೆತಗಳಲ್ಲಿ ಲೀಲಾಜಾಲವಾಗಿ ಸಿಕ್ಸ್ ಸಿಡಿಸಿದ್ದ ಪೊವೆಲ್​ಗೆ ಮುಂದಿನ 3 ಎಸೆತಗಳಲ್ಲಿ ಸಿಕ್ಸ್ ಸಿಡಿಸುವುದು ದೊಡ್ಡ ಸವಾಲೇನು ಆಗಿರಲಿಲ್ಲ. ಆದರೆ, ಅಲ್ಲಿ ನಡೆದ ಹೈ ಡ್ರಾಮ್ ಇಡೀ ಚಿತ್ರಣವನ್ನೇ ಬದಲಾಯಿಸಿತು.

ಮೆಕಾಯ್‌ ಹಾಕಿದ 3ನೇ ಎಸೆತ ಫುಲ್ ಟಾಸ್‌ ಆಗಿದ್ದು ಇದನ್ನು ಕೂಡ ಪೊವೆಲ್ ಸಿಕ್ಸ್​​ಗೆ ಅಟ್ಟಿದ್ದರು. ಆದರೆ, ಇದು ಅವರ ಸೊಂಟದ ಭಾಗಕ್ಕಿಂತಲೂ ಮೇಲಿದೆ, ಅದು ನೋ-ಬಾಲ್ ಎಂದು ಡೆಲ್ಲಿ ವಾದಕ್ಕಿಳಿತು. ಆದರೆ, ಅಂಪೈರ್ ಇದು ನೋ ಬಾಲ್ ಅಲ್ಲ ಎಂದು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಇದರಿಂದ ಸಿಟ್ಟಾದ ಡೆಲ್ಲಿ ನಾಯಕ ರಿಷಭ್ ಪಂತ್ ಇದು ಅನ್ಯಾಯ ಎಂದು ಮೈದಾನದಲ್ಲಿದ್ದ ತಮ್ಮ ಬ್ಯಾಟರ್‌ಗಳಾದ ರೋವ್ಮನ್‌ ಪೊವೆಲ್‌ ಮತ್ತು ಕುಲ್ದೀಪ್‌ ಯಾದವ್‌ ಅವರನ್ನು ಪವಿಲಿಯನ್‌ಗೆ ಹಿಂದಿರುಗುವಂತೆ ಬೌಂಡರಿ ಗೆರೆ ಬಳಿ ನಿಂತು ಡಿಕ್ಲೇರ್ ಘೋಷಿಸಲು ಮುಂದಾದರು.

ಇದರ ಜೊತೆಗೆ ಪಂತ್ ತಮ್ಮ ತಂಡದ ಕೋಚ್ ಪ್ರವೀಣ್‌ ಆಮ್ರೆ ಅವರನ್ನು ಅಂಪೈರ್ ಬಳಿ ಚರ್ಚಿಸಲು ಮೈದಾನಕ್ಕೆ ಕಳುಹಿಸಿದರು. ಅಂಗಣಕ್ಕೆ ಧಾವಿಸಿ ಆನ್‌ ಫೀಲ್ಡ್‌ ಅಂಪೈರ್​ಗಳ ಜೊತೆಗೆ ಚರ್ಚಿಸಿ ಕನಿಷ್ಠ ಮೂರನೇ ಅಂಪೈರ್‌ಗೆ ಈ ನಿರ್ಧಾರ ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಆದರೆ, ಲೆಗ್‌ ಅಂಪೈರ್‌ ಅದು ನೋ-ಬಾಲ್‌ ಅಲ್ಲ ಎಂದು ತೀರ್ಪು ನೀಡಿದ್ದ ಕಾರಣ, ಅದೇ ತೀರ್ಪಿಗೆ ಬದ್ಧರಾಗಿ ನಿಂತು ಆಟ ಮುಂದುವರಿಸಲು ಆನ್‌ಫೀಲ್ಡ್‌ ಅಂಪೈರ್‌ಗಳು ತೀರ್ಮಾನಿಸಿದರು. ಅತ್ತ ಬೌಂಡರಿ ಗೆರೆ ಬಳಿಯಿದ್ದ ಆರ್ ಆರ್ ಬ್ಯಾಟರ್ ಜಾಸ್ ಬಟ್ಲರ್ ಜೊತೆಗೂ ಪಂತ್ ರೇಗಾಡಿದರು. ಹಿರಿಯ ಆಟಗಾರ ಶೇನ್ ವಾಟ್ಸನ್ ಮೇಲೂ ಕೋಪಗೊಂಡರು.

ಅಂತಿಮವಾಗಿ ಡೆಲ್ಲಿಗೆ ಕೊನೆಯ 3 ಎಸೆತಗಳಲ್ಲಿ ಗೆಲ್ಲಲು 18 ರನ್​ಗಳ ಅವಶ್ಯಕತೆಯಿತ್ತು. ಮೊದಲ ಮೂರೂ ಎಸೆಸತಗಳಲ್ಲಿ ಸಿಕ್ಸರ್‌ ಬಾರಿಸಿದ್ದ ಪೊವೆಲ್‌, ನಂತರದ ಮೂರು ಎಸೆಸತಗಳಲ್ಲಿ 1 ರನ್‌ ಕೂಡ ಗಳಿಸಲಿಲ್ಲ. 145 ಎಸೆತಗಲ್ಲಿ 36 ರನ್ ಗಳಿಸಿದ್ದ ಇವರು ಕೊನೇ ಎಸೆತದಲ್ಲಿ ಕೀಪರ್​ಗೆ ಕ್ಯಾಚಿತ್ತು ಔಟಾದರು. ಒಟ್ಟಾರೆ ಐಪಿಎಲ್ 2022ರ ಮೊದಲ ವಿವಾದಕ್ಕೆ ಡೆಲ್ಲಿ ಹಾಗೂ ರಾಜಸ್ಥಾನ್ ನಡುವಣ ಕದನ ಸಾಕ್ಷಿಯಾಯಿತು. ಇಲ್ಲಿ ಅಂಪೈರ್ ನಿರ್ಧಾರ ಹಾಗೂ ರಿಷಭ್ ಪಂತ್ ನಡೆ ಎಷ್ಟು ಸರಿ ಎಂಬ ಪ್ರಶ್ನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಕೊನೆಯ ಓವರ್​ನ ಸಂಪೂರ್ಣ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

RCB vs SRH Prediction Playing XI: ಆರ್​ಸಿಬಿಗೆ ಹೈದರಾಬಾದ್ ಸವಾಲು; ಉಭಯ ತಂಡಗಳ ಸಂಭಾವ್ಯ ಇಲೆವೆನ್

Follow us on

Related Stories

Most Read Stories

Click on your DTH Provider to Add TV9 Kannada