IND vs ENG: ಮತ್ತೆ ಬ್ಯಾಟ್ ಬೀಸಲಿದ್ದಾರೆ ರಿಷಭ್ ಪಂತ್..! ಅಧಿಕೃತ ಮಾಹಿತಿ ನೀಡಿದ ಬಿಸಿಸಿಐ

Rishabh Pant Injury Update: ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಗಾಯಗೊಂಡಿದ್ದಾರೆ. ಗಾಯದ ತೀವ್ರತೆಯಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಬಿಸಿಸಿಐ ತಿಳಿಸಿರುವಂತೆ ಪಂತ್ ಈ ಪಂದ್ಯದಲ್ಲಿ ಮುಂದುವರಿಯಲಿದ್ದಾರೆ. ಆದಾಗ್ಯೂ, ಅವರು ಬ್ಯಾಟಿಂಗ್ ಮಾತ್ರ ಮಾಡುತ್ತಾರೆ ಮತ್ತು ಧ್ರುವ್ ಜುರೇಲ್ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ. ಪಂತ್ ಇಡೀ ಸರಣಿಯಿಂದ ಹೊರಬೀಳುತ್ತಾರೆ ಎಂಬ ವದಂತಿಗಳನ್ನು ಬಿಸಿಸಿಐ ನಿರಾಕರಿಸಿದೆ.

IND vs ENG: ಮತ್ತೆ ಬ್ಯಾಟ್ ಬೀಸಲಿದ್ದಾರೆ ರಿಷಭ್ ಪಂತ್..! ಅಧಿಕೃತ ಮಾಹಿತಿ ನೀಡಿದ ಬಿಸಿಸಿಐ
Rishabh Pant

Updated on: Jul 24, 2025 | 4:56 PM

ಮ್ಯಾಂಚೆಸ್ಟರ್​ನಲ್ಲಿ (Manchester Test) ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟೆಸ್ಟ್​ ಪಂದ್ಯದ ಮೊದಲ ದಿನದಾಟದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant)​ ಬ್ಯಾಟಿಂಗ್ ಮಾಡುವ ವೇಳೆ ಗಾಯಕ್ಕೆ ತುತ್ತಾಗಿದ್ದರು. ಗಾಯದ ತೀವ್ರತೆ ಹೇಗಿತ್ತೆಂದರೆ, ಪಂತ್ ನಡೆಯುವುದಕ್ಕೂ ಸಾಧ್ಯವಾಗದೆ ಮೈದಾನದ ಆಂಬುಲೆನ್ಸ್ ಸಹಾಯದಿಂದ ಮೈದಾನದಿಂದ ಹೊರ ಹೋಗಿದ್ದರು. ಆ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿಯನ್ನು ಬಿಸಿಸಿಐ ನೀಡಿತ್ತು. ಈ ನಡುವೆ ರಿಷಭ್ ಪಂತ್ ಇಡೀ ಸರಣಿಯಿಂದಲೇ ಹೊರಬಿದ್ದಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಇದೀಗ ಪಂತ್ ಗಾಯದ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ (BCCI), ಈ ಪಂದ್ಯದಲ್ಲಿ ಅವರು ಮತ್ತೆ ಆಡುವುದನ್ನು ಖಚಿತಪಡಿಸಿದೆ. ಆದರೆ ಗಾಯದ ಕಾರಣದಿಂದಾಗಿ ಪಂತ್ ಬ್ಯಾಟಿಂಗ್‌ ಮಾತ್ರ ಮಾಡಲಿದ್ದು, ಧೃವ್ ಜುರೇಲ್ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಬಿಸಿಸಿಐ ನೀಡಿರುವ ಮಾಹಿತಿಯ ಪ್ರಕಾರ, ‘ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ಮೊದಲ ದಿನದಂದು ತಮ್ಮ ಬಲಗಾಲಿಗೆ ಗಾಯ ಮಾಡಿಕೊಂಡಿದ್ದ ರಿಷಭ್ ಪಂತ್ ಈ ಟೆಸ್ಟ್‌ನಲ್ಲಿ ವಿಕೆಟ್ ಕೀಪಿಂಗ್ ಮಾಡುವುದಿಲ್ಲ. ಹೀಗಾಗಿ ಅವರ ಬದಲಿಗೆ ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದಾರೆ. ಗಾಯದ ಹೊರತಾಗಿಯೂ, ಪಂತ್ ಎರಡನೇ ದಿನ ತಂಡವನ್ನು ಸೇರಿಕೊಂಡಿದ್ದು, ತಂಡದ ಅಗತ್ಯಕ್ಕೆ ಅನುಗುಣವಾಗಿ ಬ್ಯಾಟಿಂಗ್‌ಗೆ ಲಭ್ಯವಿರುತ್ತಾರೆ’ ಎಂದು ತಿಳಿಸಿದೆ.

ಬಿಸಿಸಿಐ ನೀಡಿದ ಮಾಹಿತಿ

ಪಂತ್ ಬಲಗಾಲಿಗೆ ಗಾಯ

ವಾಸ್ತವವಾಗಿ ಜುಲೈ 23 ರಂದು ಪ್ರಾರಂಭವಾದ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ಮೊದಲ ದಿನದ ಕೊನೆಯ ಸೆಷನ್​ ಸಮಯದಲ್ಲಿ, ಬೌಲರ್ ಕ್ರಿಸ್ ವೋಕ್ಸ್ ಎಸೆದ ಚೆಂಡಿನ ಮೇಲೆ ರಿವರ್ಸ್ ಸ್ವೀಪ್ ಆಡಲು ಪ್ರಯತ್ನಿಸುವಾಗ ಚೆಂಡು ಪಂತ್ ಅವರ ಬಲಗಾಲಿನ ಕಾಲ್ಬೆರಳಿನ ಬಳಿಗೆ ಬಡಿಯಿತು.ಹೀಗಾಗಿ ತೀವ್ರ ನೋವಿನಿಂದ ಬಳಲುತ್ತಿದ್ದ ಪಂತ್ ಅವರನ್ನು ಪರೀಕ್ಷಿಸಿದ ತಂಡದ ಪಿಸಿಯೋ ಆ ಬಳಿಕ ಅವರನ್ನು ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಿದ್ದರು. ಪಂತ್ ಗಾಯಗೊಂಡು ನಿವೃತ್ತಿ ಹೊಂದಿದರಿಂದಾಗಿ ರವೀಂದ್ರ ಜಡೇಜಾ ಬ್ಯಾಟಿಂಗ್​ಗೆ ಬರಬೇಕಾಯಿತು. ಇದೀಗ 2ನೇ ದಿನದಾಟದ ವೇಳೆ ಡಗೌಟ್​ನಲ್ಲಿ ರಿಷಭ್ ಪಂತ್ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಕೊಂಚ ನಿರಾಳತೆ ಮೂಡಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:25 pm, Thu, 24 July 25