
ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ವಿಕೆಟ್ ಕೀಪರ್ ಬ್ಯಾಟರ್ ಆಗಿ ರಿಷಭ್ ಪಂತ್ ಕಣಕ್ಕಿಳಿಯಲಿದ್ದಾರೆ ಎಂದು ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ಖಚಿತಪಡಿಸಿದ್ದಾರೆ. ಮ್ಯಾಚೆಂಸ್ಟರ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಿಲ್, ರಿಷಭ್ ಅವರು ಸಂಪೂರ್ಣ ಫಿಟ್ನೆಸ್ ಸಾಧಿಸಿದ್ದು, ಹೀಗಾಗಿ ನಾಲ್ಕನೇ ಟೆಸ್ಟ್ನಲ್ಲಿ ವಿಕೆಟ್ ಕೀಪಿಂಗ್ ಕರ್ತವ್ಯವನ್ನು ಪುನರಾರಂಭಿಸಲಿದ್ದಾರೆ ತಿಳಿಸಿದ್ದಾರೆ.
ಇದಕ್ಕೂ ಮುನ್ನ ನಡೆದ ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ಚೆಂಡು ಹಿಡಿಯುವ ಯತ್ನದಲ್ಲಿ ರಿಷಭ್ ಪಂತ್ ಅವರ ಬೆರಳಿಗೆ ಗಾಯವಾಗಿತ್ತು. ಹೀಗಾಗಿ ಅವರು ಅರ್ಧದಲ್ಲೇ ಮೈದಾನ ತೊರೆದಿದ್ದರು. ಆ ಬಳಿಕ ಟೀಮ್ ಇಂಡಿಯಾ ಪರ ಧ್ರುವ್ ಜುರೇಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಿದ್ದರು. ಇದೇ ಕಾರಣದಿಂದಾಗಿ ಮ್ಯಾಂಚೆಸ್ಟರ್ನಲ್ಲಿ ರಿಷಭ್ ಪಂತ್ ಅವರನ್ನು ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಸಲು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಚಿಂತಿಸಿದ್ದರು.
ಆದರೀಗ ರಿಷಭ್ ಪಂತ್ ಸಂಪೂರ್ಣ ಫಿಟ್ ಆಗಿರುವ ಕಾರಣ ಅವರು ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ವಿಕೆಟ್ ಕೀಪಿಂಗ್ ಜವವಾಬ್ದಾರಿ ನಿರ್ವಹಿಸುವುದು ಖಚಿತವಾಗಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಣ ನಾಲ್ಕನೇ ಪಂದ್ಯದಲ್ಲಿ ಕರುಣ್ ನಾಯರ್ಗೆ ಚಾನ್ಸ್ ಸಿಗುವುದು ಅನುಮಾನ. ಪ್ರಸ್ತುತ ಮಾಹಿತಿ ಪ್ರಕಾರ, ಕರುಣ್ ಸ್ಥಾನದಲ್ಲಿ ಮೂರನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಹೀಗಾಗಿ ಕಳೆದ ಮೂರು ಪಂದ್ಯಗಳನ್ನಾಡಿದ್ದ ಕರುಣ್ ನಾಯರ್ ಪ್ಲೇಯಿಂಗ್ ಇಲೆವೆನ್ನಿಂದ ಹೊರಬೀಳುವುದು ಬಹುತೇಕ ಖಚಿತ.
ಇದಕ್ಕೆ ಮುಖ್ಯ ಕಾರಣ ಕರುಣ್ ನಾಯರ್ ಅವರ ಕಳಪೆ ಪ್ರದರ್ಶನ. ಏಕೆಂದರೆ ಈ ಬಾರಿಯ ಸರಣಿಯಲ್ಲಿ ಒಟ್ಟು 6 ಇನಿಂಗ್ಸ್ ಆಡಿರುವ ಕರುಣ್ ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. ಅಲ್ಲದೆ ಈವರೆಗೆ ಕಲೆಹಾಕಿರುವುದು ಕೇವಲ 131 ರನ್ಗಳು ಮಾತ್ರ. ಅತ್ತ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಸಾಯಿ ಸುದರ್ಶನ್ 2 ಇನಿಂಗ್ಸ್ಗಳ ಮೂಲಕ 30 ರನ್ ಗಳಿಸಿದ್ದರು.
ಇದೀಗ ಮತ್ತೊಮ್ಮೆ ಸಾಯಿ ಸುದರ್ಶನ್ಗೆ ಮೂರನೇ ಕ್ರಮಾಂಕದಲ್ಲಿ ಅವಕಾಶ ನೀಡಲು ನಿರ್ಧರಿಸಿದ್ದಾರೆ. ಹೀಗಾಗಿ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಿಂದ ಕರುಣ್ ನಾಯರ್ ಹೊರಬೀಳುವುದು ಬಹುತೇಕ ಖಚಿತ ಎನ್ನಬಹುದು.
ಹಾಗೆಯೇ ರಿಷಭ್ ಪಂತ್ ಸಂಪೂರ್ಣ ಫಿಟ್ ಆಗಿರುವ ಕಾರಣ ಧ್ರುವ್ ಜುರೇಲ್ಗೆ ಅವಕಾಶ ಸಿಗುವ ಸಾಧ್ಯತೆಯಿಲ್ಲ. ಇದಾಗ್ಯೂ ಗಾಯಗೊಂಡು ಸರಣಿಯಿಂದ ಹೊರಬಿದ್ದಿರುವ ನಿತೀಶ್ ಕುಮಾರ್ ರೆಡ್ಡಿ ಸ್ಥಾನದಲ್ಲಿ ಕಣಕ್ಕಿಳಿಯುವವರು ಯಾರು ಎಂಬುದೇ ಸದ್ಯದ ಪ್ರಶ್ನೆ.
ಇದನ್ನೂ ಓದಿ: ಹದಿನೈದಕ್ಕೆ ಐದು… ಅತ್ಯಂತ ಹೀನಾಯ ದಾಖಲೆ ಬರೆದ ಪಾಕಿಸ್ತಾನ್