IND vs WI: 8 ಪಂದ್ಯಗಳಲ್ಲಿ 458 ರನ್, 17 ವಿಕೆಟ್: 6 ವರ್ಷಗಳ ಬಳಿಕ ಸಿಗಲಿದೆಯಾ ಟೀಮ್ ಇಂಡಿಯಾದಲ್ಲಿ ಸ್ಥಾನ?

| Updated By: ಝಾಹಿರ್ ಯೂಸುಫ್

Updated on: Jan 26, 2022 | 4:28 PM

Rishi Dhawan: ಒಂದು ವೇಳೆ ರಿಷಿ ಧವನ್ ಟೀಮ್ ಇಂಡಿಯಾಕ್ಕೆ ಆಯ್ಕೆಯಾದರೆ ಆರು ವರ್ಷಗಳ ನಂತರ ತಂಡಕ್ಕೆ ಮರಳಲಿದ್ದಾರೆ. ಅವರು ಕೊನೆಯ ಬಾರಿಗೆ ಟೀಮ್ ಇಂಡಿಯಾದ ಜೆರ್ಸಿಯನ್ನು ಜನವರಿ 2016 ರಲ್ಲಿ ಧರಿಸಿದ್ದರು. ಅದು ಅವರ ಚೊಚ್ಚಲ ಅಂತಾರಾಷ್ಟ್ರೀಯ ಸರಣಿ ಕೂಡ ಆಗಿತ್ತು.

IND vs WI: 8 ಪಂದ್ಯಗಳಲ್ಲಿ 458 ರನ್, 17 ವಿಕೆಟ್: 6 ವರ್ಷಗಳ ಬಳಿಕ ಸಿಗಲಿದೆಯಾ ಟೀಮ್ ಇಂಡಿಯಾದಲ್ಲಿ ಸ್ಥಾನ?
Rishi Dhawan
Follow us on

ವೆಸ್ಟ್ ಇಂಡೀಸ್ ವಿರುದ್ದದ ಸರಣಿಗಾಗಿ (India vs West Indies) ಟೀಮ್ ಇಂಡಿಯಾದಲ್ಲಿ (Team India) ಪ್ರಮುಖ ಬದಲಾವಣೆಯಾಗಲಿದೆ. ಅದರಲ್ಲೂ ತಂಡದಲ್ಲಿ ಆಲ್​ರೌಂಡರ್​ ಆಯ್ಕೆ ಬಗ್ಗೆ ಬಿಸಿಸಿಐ (BCCI) ಆಯ್ಕೆ ಸಮಿತಿ ಹೆಚ್ಚಿನ ಒತ್ತು ನೀಡಲಿದೆ. ಏಕೆಂದರೆ ತಂಡದ ಸ್ಟಾರ್ ಆಲ್​ರೌಂಡರ್ ಆಗಿ ಕಾಣಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ (Hardik Pandya) ಈಗಾಗಲೇ ಟೀಮ್​ನಿಂದ ಹೊರಬಿದ್ದಿದ್ದಾರೆ. ಇನ್ನು ರವೀಂದ್ರ ಜಡೇಜಾ (Ravindra Jadeja) ಕೂಡ ಗಾಯದಿಂದ ಚೇತರಿಸಿಕೊಂಡಿಲ್ಲ. ಇತ್ತ ದಕ್ಷಿಣ ಆಫ್ರಿಕಾ ಸರಣಿಗೆ ಆಯ್ಕೆ ಮಾಡಲಾದ ವೆಂಕಟೇಶ್ ಅಯ್ಯರ್​ನಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. ಹೀಗಾಗಿಯೇ ಪರ್ಯಾಯ ಆಲ್​ರೌಂಡರ್ ಅನ್ನು ಆಯ್ಕೆ ಮಾಡಲು ಬಿಸಿಸಿಐ ಮುಂದಾಗಿದೆ. ಈ ಪಟ್ಟಿಯಲ್ಲಿ ಹಿಮಾಚಲ ಪ್ರದೇಶದ ಬಲಿಷ್ಠ ಆಟಗಾರ ರಿಷಿ ಧವನ್ (Rishi Dhawan) ಹೆಸರು ಕೂಡ ಇರುವುದು ವಿಶೇಷ. ಏಕೆಂದರೆ ರಿಷಿ ಧನವ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು. ಅಷ್ಟೇ ಅಲ್ಲದೆ 2021 ರ ವಿಜಯ್ ಹಜಾರೆ ಟ್ರೋಫಿ ಗೆದ್ದ ಹಿಮಾಚಲ ಪ್ರದೇಶ ತಂಡದ ನಾಯಕರಾಗಿದ್ದರು. ಭರ್ಜರಿ ಆಲ್​ರೌಂಡರ್ ಪ್ರದರ್ಶನ ನೀಡಿದ್ದ ರಿಷಿಗೆ ಈ ಬಾರಿ ಮತ್ತೆ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ಅವಕಾಶ ಸಿಗಲಿದೆ ಎಂದು ವರದಿಯಾಗಿದೆ.

ರಿಷಿ ಧವನ್ ಈ ಹಿಂದೆ ಭಾರತ ಪರ ಆಡಿದ್ದರು. 2016 ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಪರ ಏಕದಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಆದರೆ ಆ ಬಳಿಕ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. ಇದೀಗ ಮತ್ತೊಮ್ಮೆ ಟೀಮ್ ಇಂಡಿಯಾ ಏಕದಿನ ತಂಡದಲ್ಲಿ ರಿಷಿ ಧವನ್​ಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಏಕೆಂದರೆ ಹಿಮಾಚಲ ಪ್ರದೇಶ ವಿಜಯ್ ಹಜಾರೆ ಟ್ರೋಫಿ ಗೆಲ್ಲುವಲ್ಲಿ ಧವನ್ ಪ್ರಮುಖ ಪಾತ್ರ ವಹಿಸಿದ್ದರು.

8 ಪಂದ್ಯಗಳಲ್ಲಿ 17 ವಿಕೆಟ್ ಕಬಳಿಸಿ ಮಿಂಚಿದ್ದರು. ಅಷ್ಟೇ ಅಲ್ಲದೆ ಬ್ಯಾಟಿಂಗ್​ನಲ್ಲಿ 458 ರನ್ ಬಾರಿಸಿದ್ದರು. ಈ ಮೂಲಕ ಸಂಪೂರ್ಣ ಆಲ್​ರೌಂಡರ್ ಪ್ರದರ್ಶನ ನೀಡಿ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದರು. ಅದರಲ್ಲೂ ಹಲವು ಪಂದ್ಯಗಳಲ್ಲಿ ಮ್ಯಾಚ್ ಫಿನಿಶರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ 6 ವರ್ಷಗಳ ಬಳಿಕ ಮತ್ತೊಮ್ಮೆ ರಿಷಿ ಧವನ್​ಗೆ ಟೀಮ್ ಇಂಡಿಯಾದಿಂದ ಬುಲಾವ್ ಸಿಗಲಿದೆ ಎಂದು ಹೇಳಲಾಗುತ್ತಿದೆ.

ರಿಷಿ ಧವನ್ ಕಂಪ್ಲೀಟ್ ಆಲ್​ರೌಂಡರ್:
31 ವರ್ಷದ ರಿಷಿ ಧವನ್ ಬಲಗೈ ಬ್ಯಾಟರ್​ ಮತ್ತು ಮಧ್ಯಮ ವೇಗಿ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಇದುವರೆಗೆ 109 ಪಂದ್ಯಗಳನ್ನಾಡಿರುವ ರಿಷಿ 2385 ರನ್ ಗಳಿಸಿದ್ದಾರೆ. 2021 ರ ವಿಜಯ್ ಹಜಾರೆ ಟ್ರೋಫಿಯಲ್ಲಿ 127.22 ಸ್ಟ್ರೈಕ್ ರೇಟ್ ಮತ್ತು 73.33 ಸರಾಸರಿಯಲ್ಲಿ ರನ್ ಗಳಿಸಿದ್ದರು. ಎಂಟು ಇನ್ನಿಂಗ್ಸ್‌ಗಳಲ್ಲಿ ಐದರಲ್ಲಿ ಅರ್ಧಶತಕಗಳನ್ನು ಬಾರಿಸಿದ್ದರು.

6 ವರ್ಷಗಳ ನಂತರ ಕಂಬ್ಯಾಕ್?
ಒಂದು ವೇಳೆ ರಿಷಿ ಧವನ್ ಟೀಮ್ ಇಂಡಿಯಾಕ್ಕೆ ಆಯ್ಕೆಯಾದರೆ ಆರು ವರ್ಷಗಳ ನಂತರ ತಂಡಕ್ಕೆ ಮರಳಲಿದ್ದಾರೆ. ಅವರು ಕೊನೆಯ ಬಾರಿಗೆ ಟೀಮ್ ಇಂಡಿಯಾದ ಜೆರ್ಸಿಯನ್ನು ಜನವರಿ 2016 ರಲ್ಲಿ ಧರಿಸಿದ್ದರು. ಅದು ಅವರ ಚೊಚ್ಚಲ ಅಂತಾರಾಷ್ಟ್ರೀಯ ಸರಣಿ ಕೂಡ ಆಗಿತ್ತು. ಈ ಸರಣಿಯಲ್ಲಿ 3 ಪಂದ್ಯಗಳನ್ನಾಡಿದ ರಿಷಿ ಧವನ್ 12 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು. ಈ ಸರಣಿಯ ನಂತರ ಅವರನ್ನು ಟೀಮ್ ಇಂಡಿಯಾದಿಂದ ಕೈಬಿಡಲಾಗಿತ್ತು. ಆದಾಗ್ಯೂ, ಜೂನ್ 2016 ರಲ್ಲಿ, ಅವರು ಜಿಂಬಾಬ್ವೆ ಪ್ರವಾಸದಲ್ಲಿ ಒಂದು T20 ಆಡಿದ್ದರು. ಈ ಪಂದ್ಯದಲ್ಲಿ 1 ವಿಕೆಟ್ ಪಡೆದಿದ್ದ ಧವನ್ ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ವಿಫಲರಾಗಿದ್ದರು.

ಆ ಬಳಿಕ ಅವರಿಗೆ ಟೀಮ್ ಇಂಡಿಯಾದಲ್ಲಿ ಚಾನ್ಸ್​ ಸಿಕ್ಕಿರಲಿಲ್ಲ. ಇದೀಗ ವಿಜಯ್ ಹಜಾರೆ ಟೂರ್ನಿಯಲ್ಲಿ 8 ಪಂದ್ಯಗಳಲ್ಲಿ 458 ರನ್, 17 ವಿಕೆಟ್ ಕಬಳಿಸುವ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾರೆ. ಈ ಮೂಲಕ ಮತ್ತೊಮ್ಮೆ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ ರಿಷಿ ಧವನ್.

ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ

ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್

(Rishi Dhawan likely to include in Indian cricket team for West Indies ODI series)

Published On - 4:23 pm, Wed, 26 January 22