ಒಂದೆಡೆ ಟೀಂ ಇಂಡಿಯಾ ಸತತ ಸೋಲುಗಳಿಂದ ಕಂಗೆಟ್ಟಿದ್ದರೆ, ಇನ್ನೊಂದೆಡೆ ತಂಡದ ಹಲವು ಹಿರಿಯ ಆಟಗಾರರ ನಿವೃತ್ತಿಯ ಪರ್ವ ಆರಂಭವಾಗಿದೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಮಧ್ಯದಲ್ಲಿ ತಂಡದ ಸ್ಟಾರ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ಹಠಾತ್ ನಿವೃತ್ತಿ ಘೋಷಿಸಿದ್ದರು. ಆ ಬಳಿಕ ಆಸ್ಟ್ರೇಲಿಯ ಪ್ರವಾಸದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಮಾದರಿಗೆ ವಿದಾಯ ಘೋಷಿಸಬೇಕು ಎಂಬ ಕೂಗು ಎಲ್ಲೆಡೆ ಜೋರಾಗಿ ಕೇಳಲಾರಂಭಿಸಿತ್ತು. ಆದರೆ ಇವರಿಬ್ಬರಿಗೂ ಮುನ್ನವೇ ಟೀಂ ಇಂಡಿಯಾದ ಮಾಜಿ ವೇಗಿ ರಿಷಿ ಧವನ್ ಸೀಮಿತ ಓವರ್‌ಗಳ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ಹಿಮಾಚಲ ಪ್ರದೇಶ ಕ್ರಿಕೆಟ್ ತಂಡದ ನಾಯಕ ಮತ್ತು ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ರಿಷಿ ಧವನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ನಿವೃತ್ತಿಯ ನಿರ್ಧಾರವನ್ನು ತಿಳಿಸಿದ್ದಾರೆ. 34 ವರ್ಷದ ಧವನ್, ತಮ್ಮ ನಿವೃತ್ತಿಯ ಪೋಸ್ಟ್‌ನಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಸೀಮಿತ ಓವರ್‌ಗಳ ಸ್ವರೂಪದಿಂದ ನಿವೃತ್ತಿ ಹೊಂದುವುದಾಗಿ ತಿಳಿಸಿದ್ದಾರೆ. ಇದರರ್ಥ ಅವರು ಈಗ ವಿಜಯ್ ಹಜಾರೆ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವುದಿಲ್ಲ. ಆದಾಗ್ಯೂ, ಅವರು ಪ್ರಥಮ ದರ್ಜೆಯಲ್ಲಿ ಅಂದರೆ ರಣಜಿ ಟ್ರೋಫಿಯಲ್ಲಿ ಆಡುವುದನ್ನು ಮುಂದುವರಿಸುತ್ತಾರೆ.
ವಾಸ್ತವವಾಗಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಹಿಮಾಚಲ ಪ್ರದೇಶ ತಂಡವನ್ನು ಮುನ್ನಡೆಸುತ್ತಿರುವ ರಿಷಿ ಧವನ್, ಇಂದಿನ ಪಂದ್ಯದಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ಬಳಿಕ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇಂದು ನಡೆದ ಪಂದ್ಯದಲ್ಲಿ ಧವನ್ ನಾಯಕತ್ವದ ಹಿಮಾಚಲ ಪ್ರದೇಶ ತಂಡವು, ಆಂಧ್ರಪ್ರದೇಶ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವಿನಲ್ಲಿ ಸ್ವತಃ ಧವನ್ ಪ್ರಮುಖ ಪಾತ್ರ ವಹಿಸಿದ್ದರು. ಬೌಲಿಂಗ್‌ಲ್ಲಿ 2 ವಿಕೆಟ್ ಉರುಳಿಸಿದ್ದ ರಿಷಿ, ಆ ಬಳಿಕ ಬ್ಯಾಟಿಂಗ್ನಲ್ಲಿ 45 ರನ್ಗಳ ಅಜೇಯ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಧವನ್ ನಾಯಕತ್ವದಲ್ಲಿ ಹಿಮಾಚಲ ತಂಡ 3 ಸೀಸನ್‌ಗಳ ಹಿಂದೆ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿತ್ತು.
ರಿಷಿ ಧವನ್ ತಮ್ಮ ಪೋಸ್ಟ್‌ನಲ್ಲಿ ಬಿಸಿಸಿಐ, ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ, ತಮ್ಮ ಸಹ ಆಟಗಾರರು ಮತ್ತು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಅವರು ಐಪಿಎಲ್‌ನಲ್ಲಿ ಭಾಗವಹಿಸಿದ ಫ್ರಾಂಚೈಸಿಗಳಾದ ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್‌ಗೂ ಧನ್ಯವಾದ ಹೇಳಿದ್ದಾರೆ. ಧವನ್ ಕೊನೆಯ ಬಾರಿಗೆ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ಆದರೆ ಈ ಬಾರಿ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿಲ್ಲ.
ಟೀಂ ಇಂಡಿಯಾದಲ್ಲಿ ರಿಷ ಧವನ್ಗೆ ಖಾಯಂ ಸ್ಥಾನ ಎಂಬುದು ಸಿಗಲಿಲ್ಲ. 2015 ರಲ್ಲಿ ಏಕದಿನ ಮತ್ತು ಟಿ20 ಮಾದರಿಗಳಲ್ಲಿ ಟೀಮ್ ಇಂಡಿಯಾಗೆ ಧವನ್ ಪಾದಾರ್ಪಣೆ ಮಾಡಿದರು. ಜನವರಿ 2016 ರಲ್ಲಿ, ಆಸ್ಟ್ರೇಲಿಯಾ ಪ್ರವಾಸದಲ್ಲಿ 3 ಏಕದಿನ ಪಂದ್ಯಗಳನ್ನಾಡಿದ ಅವರು ಕೇವಲ 1 ವಿಕೆಟ್ ಪಡೆಯಲಷ್ಟೇ ಶಕ್ತರಾದರು. ಅದೇ ವರ್ಷ ಜಿಂಬಾಬ್ವೆ ವಿರುದ್ಧ ತಮ್ಮ ಏಕೈಕ ಟಿ20 ಪಂದ್ಯವನ್ನಾಡಿದ ಅವರು 1 ವಿಕೆಟ್ ಪಡೆದಿದ್ದರು. ತಮ್ಮ ಲಿಸ್ಟ್ ಎ ವೃತ್ತಿಜೀವನದಲ್ಲಿ, ಧವನ್ 134 ಪಂದ್ಯಗಳನ್ನಾಡಿದ್ದು, ಇದರಲ್ಲಿ ಅವರು 2906 ರನ್ ಮತ್ತು 186 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೆಯೇ 135 ಟಿ 20 ಪಂದ್ಯಗಳಲ್ಲಿ 1740 ರನ್ ಮತ್ತು 118 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ