Riyan Parag: 8 ಎಸೆತಗಳಲ್ಲಿ ಟೀಕಾಗಾರರ ಬಾಯಿ ಮುಚ್ಚಿಸಿದ ರಿಯಾನ್ ಪರಾಗ್

|

Updated on: Jul 28, 2024 | 12:52 PM

Riyan Parag: ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ರಿಯಾನ್ ಪರಾಗ್ ಅವರನ್ನು ಆಯ್ಕೆ ಮಾಡಿದ್ದಕ್ಕೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು. ಅದರಲ್ಲೂ ಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಶಿವಂ ದುಬೆಯ ಬದಲಿಗೆ ಪರಾಗ್​ಗೆ ಚಾನ್ಸ್ ನೀಡಲಾಗಿತ್ತು. ಇದರ ಬೆನ್ನಲ್ಲೇ ಪರಾಗ್ ಆಯ್ಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಟೀಕಿಸಲಾಗಿತ್ತು. ಆದರೆ ಭರ್ಜರಿ ಪ್ರದರ್ಶನದ ಮೂಲಕ ರಿಯಾನ್ ಪರಾಗ್ ಟೀಕಾಗಾರರಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ.

ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರುವಾರಿಗಳಲ್ಲಿ ರಿಯಾನ್ ಪರಾಗ್ ಕೂಡ ಒಬ್ಬರು. ಏಕೆಂದರೆ ಭಾರತ ತಂಡ ನೀಡಿದ 213 ರನ್​ಗಳ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡವು 14 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 140 ರನ್​ ಬಾರಿಸಿ ಸುಸ್ಥಿತಿಯಲ್ಲಿತ್ತು. ಹೀಗಾಗಿ ಟೀಮ್ ಇಂಡಿಯಾ ಪಾಲಿಗೆ ಕೊನೆಯ 6 ಓವರ್​ಗಳು ನಿರ್ಣಾಯಕವಾಗಿತ್ತು. ಈ ಹಂತದಲ್ಲಿ 15ನೇ ಓವರ್​ ಎಸೆದ ಅಕ್ಷರ್ ಪಟೇಲ್ 2 ವಿಕೆಟ್ ಕಬಳಿಸಿದರು. ಆ ಬಳಿಕ 16ನೇ ಓವರ್​ನಲ್ಲಿ ರವಿ ಬಿಷ್ಣೋಯ್ 1 ವಿಕೆಟ್ ಪಡೆದರು.

ಇನ್ನು 17ನೇ ಓವರ್​ ಮೂಲಕ ಚೊಚ್ಚಲ ವಿಕೆಟ್ ಪಡೆದ ರಿಯಾನ್ ಪರಾಗ್ ಹಿಂತಿರುಗಿ ನೋಡಿಲ್ಲ. ತಮ್ಮ ಮೊದಲ ಓವರ್​ನಲ್ಲಿ ಕೇವಲ 5 ರನ್ ನೀಡಿ 1 ವಿಕೆಟ್ ಪಡೆದ ರಿಯಾನ್ ಬಳಿಕ ಬ್ಯಾಕ್ ಟು ಬ್ಯಾಕ್ 2 ವಿಕೆಟ್ ಕಬಳಿಸಿದರು. ಈ ಮೂಲಕ ಕೇವಲ 8 ಎಸೆತಗಳಲ್ಲಿ 5 ರನ್ ನೀಡಿ 3 ವಿಕೆಟ್​ಗಳನ್ನು ತಮ್ಮದಾಗಿಸಿಕೊಂಡರು.

ಈ ಮೂಲಕ ಶಿವಂ ದುಬೆ ಬದಲಿಗೆ ರಿಯಾನ್ ಪರಾಗ್ ಅವರನ್ನು ಆಯ್ಕೆ ಮಾಡಿದ್ದೇಕೆ ಎಂಬ ಟೀಕೆಗೆ ರಿಯಾನ್ ಪರಾಗ್ ಬೌಲಿಂಗ್ ಮೂಲಕವೇ ಉತ್ತರ ನೀಡಿದ್ದಾರೆ. ಅಲ್ಲದೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿರುವ ರವೀಂದ್ರ ಜಡೇಜಾ ಅವರ ಸ್ಥಾನಕ್ಕೆ ತಾನು ಪ್ರಬಲ ಆಕಾಂಕ್ಷಿ ಎಂಬುದನ್ನು ರಿಯಾನ್ ಪರಾಗ್ ತಮ್ಮ ಆಲ್​ರೌಂಡರ್ ಪ್ರದರ್ಶನದ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಹೀಗಾಗಿ ಲಂಕಾ ವಿರುದ್ಧದ ಮುಂಬರುವ ಪಂದ್ಯಗಳಲ್ಲೂ ರಿಯಾನ್ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

 

Follow us on