ಸೆಪ್ಟೆಂಬರ್ 2022 ರ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ( ICC Player of the Month awards) ವಿಜೇತರ ಪಟ್ಟಿಯನ್ನು ಐಸಿಸಿ ಇಂದು ಪ್ರಕಟಿಸಿದ್ದು, ಪುರುಷರ ವಿಭಾಗದಲ್ಲಿ ಪಾಕಿಸ್ತಾನ ತಂಡದ ಸ್ಟಾರ್ ಓಪನರ್ ಮೊಹಮ್ಮದ್ ರಿಜ್ವಾನ್ (Mohammad Rizwan) ತಿಂಗಳ ಆಟಗಾರ ಪ್ರಶಸ್ತಿಯನ್ನು ಪಡೆದರೆ, ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಐಸಿಸಿ ತಿಂಗಳ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ (ICC Women’s Player of the Month award) ಭಾಜನರಾಗಿದ್ದಾರೆ. ಪುರುಷರ ವಿಭಾಗದಲ್ಲಿ ಮೊದಲ ಬಾರಿಗೆ ಈ ಪ್ರಶ್ತಿ ಗೆದ್ದ ರಿಜ್ವಾನ್ ಜೊತೆಗೆ ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ಹಾಗೂ ಭಾರತದ ಅಕ್ಷರ್ ಪಟೇಲ್ ಕೂಡ ನಾಮನಿರ್ದೇಶಿತರಾಗಿದ್ದರು. ಪಾಕಿಸ್ತಾನ ಪರ ಏಕದಿನ ಹಾಗೂ ಟಿ20 ಕ್ರಿಕೆಟ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ರಿಜ್ವಾನ್ ಹಲವಾರು ಪಂದ್ಯಗಳನ್ನು ಏಕಾಂಗಿಯಾಗಿ ನಿಂತು ಗೆಲ್ಲಿಸಿದ್ದಾರೆ. ಅಲ್ಲದೆ ಇತ್ತೀಚಿಗೆ ಪ್ರಕಟವಾದ ಟಿ20 ರ್ಯಾಂಕಿಂಗ್ನಲ್ಲಿ ರಿಜ್ವಾನ್ ನಂ.1 ಪಟ್ಟವನ್ನು ಅಲಂಕರಿಸಿದ್ದಾರೆ.
ಒಟ್ಟು ಸೆಪ್ಟೆಂಬರ್ ತಿಂಗಳಿನ್ನಲ್ಲಿ ಟಿ20 ಕ್ರಿಕೆಟ್ನಲ್ಲಿ 10 ಪಂದ್ಯಗಳನ್ನಾಡಿರುವ ರಿಜ್ವಾನ್, 69.12 ರ ಬ್ಯಾಟಿಂಗ್ ಸರಾಸರಿಯಲ್ಲಿ ಬರೋಬ್ಬರಿ 553 ರನ್ ಗಳಿಸಿದ್ದರು. ಕಳೆದ ತಿಂಗಳು ಮುಕ್ತಾಯಗೊಂಡ ಏಷ್ಯಾಕಪ್ ಹಾಗೂ ಇತ್ತೀಚೆಗೆ ಮುಗಿದ ಇಂಗ್ಲೆಂಡ್ ವಿರುದ್ಧದ 7 ಪಂದ್ಯಗಳ ಟಿ20 ಸರಣಿಯಲ್ಲಿ ರಿಜ್ವಾನ್ ಅದ್ಭುತ ಪ್ರದರ್ಶನ ನೀಡಿದ್ದರು.
ಪಾಕ್ ತಂಡವನ್ನು ಏಷ್ಯಾಕಪ್ ಫೈನಲ್ಗೆ ಕೊಂಡೊಯ್ಯುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದ ರಿಜ್ವಾನ್, ಕೊನೆಯ 3 ಪಂದ್ಯಗಳಲ್ಲಿ ಭರ್ಜರಿ ಅರ್ಧಶತಕ ಸಿಡಿಸಿ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದ್ದರು. ಅದರಲ್ಲೂ ಪ್ರಮುಖವಾಗಿ ಟೀಂ ಇಂಡಿಯಾ ವಿರುದ್ಧ 71 ರನ್ ಬಾರಿಸಿದ್ದ ರಿಜ್ವಾನ್, ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 55 ರನ್ ಚಚ್ಚರಿದ್ದರು. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿದ್ದ ರಿಜ್ವಾನ್, ಒಟ್ಟು 7 ಪಂದ್ಯಗಳ ಸರಣಿಯಲ್ಲಿ ನಾಲ್ಕು ಅರ್ಧ ಶತಕಗಳನ್ನು ಬಾರಿಸಿದ್ದರು.
ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಬಂದಿದ್ದಕ್ಕೆ ಪ್ರತಿಕ್ರಿಯಿಸಿದ ರಿಜ್ವಾನ್, “ನಾನು ಸರ್ವಶಕ್ತನಾದ ಅಲ್ಲಾಗೆ ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ಈ ಪ್ರಶಸ್ತಿಯನ್ನು ಸಾಧಿಸಲು ನನಗೆ ಸಹಾಯ ಮಾಡಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ವಂದನೆಗಳನ್ನು ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.
ಇತ್ತ ಮಹಿಳಾ ಆಟಗಾರ್ತಿಯರ ವಿಭಾಗದಲ್ಲಿ ಪ್ರಶಸ್ತಿ ಪಡೆದ ಹರ್ಮನ್‌ಪ್ರೀತ್ ಕೌರ್, 1999 ರ ಬಳಿಕ ಇಂಗ್ಲೆಂಡ್ ನೆಲದಲ್ಲಿ ಟೀಂ ಇಂಡಿಯಾ ಮೊದಲ ಬಾರಿಗೆ ಏಕದಿನ ಸರಣಿ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಜೊತೆಗೆ ಆ ಸರಣಿಯಲ್ಲಿ ಅದ್ಭುತ 143 ರನ್ಗಳ ಇನ್ನಿಂಗ್ಸ್ ಕೂಡ ಆಡಿದ್ದರು. ಈ ಪ್ರದರ್ಶನದ ಆದಾರದ ಮೇಲೆ ತಿಂಗಳ ಆಟಗಾರ್ತಿ ಪ್ರಶಸ್ತಿಯನ್ನು ಪಡೆಯುವುದರೊಂದಿಗೆ ಈ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಕೌರ್ ಪಾತ್ರರಾಗಿದ್ದಾರೆ.
ಇಂಗ್ಲೆಂಡ್ನಲ್ಲಿ ನಡೆದ ಮೂರು ಏಕದಿನ ಪಂದ್ಯಗಳಲ್ಲಿ 103.47 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದ ಕೌರ್, ಒಟ್ಟ 221 ರನ್ ಗಳಿಸಿದ್ದರು. ಅಲ್ಲದೆ ಹೋವ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 228 ರನ್ಗಳನ್ನು ಭಾರತ 7 ವಿಕೆಟ್ಗಳಿಂದ ಬೆನ್ನಟ್ಟಿತ್ತು. ಈ ಜಯದಲ್ಲಿ ತಂಡದ ನಾಯಕಿ ಕೌರ್, ಔಟಾಗದೆ 74 ರನ್ಗಳ ನಿರ್ಧಾರಕ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.
ಬಳಿಕ ಎರಡನೇ ಏಕದಿನ ಪಂದ್ಯದಲ್ಲಿ ಅಕ್ಷರಶಃ ರೌದ್ರಾವತಾರ ತಾಳಿದ ಕೌರ್, ಕೇವಲ 111 ಎಸೆತಗಳನ್ನು ಎದುರಿಸಿ ಔಟಾಗದೆ 143 ರನ್ ಚಚ್ಚಿದ್ದರು. ಈ ಸ್ಫೋಟಕ ಇನ್ನಿಂಗ್ಸ್ನಲ್ಲಿ ಕೌರ್, 18 ಬೌಂಡರಿ ಮತ್ತು ನಾಲ್ಕು ಸಿಕ್ಸರ್ಗಳನ್ನು ಬಾರಿಸಿದ್ದರು. ಇವರ ಈ ಆಟದಿಂದಾಗಿ ಟೀಂ ಇಂಡಿಯಾ, ಇಂಗ್ಲೆಂಡ್ ತಂಡಕ್ಕೆ 334 ರನ್ಗಳ ಬೃಹತ್ ಟಾರ್ಗೆಟ್ ನೀಡಿ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಬರೋಬ್ಬರಿ 23 ವರ್ಷಗಳ ಬಳಿಕ ಇಂಗ್ಲೆಂಡ್ ನೆಲದಲ್ಲಿ ಏಕದಿನ ಸರಣಿ ಗೆದ್ದ ಸಾಧನೆ ಮಾಡಿತ್ತು.
ಐಸಿಸಿ ತಿಂಗಳ ಆಟಗಾರ್ತಿ ಪ್ರಶಸ್ತಿ ಗೆದ್ದಿರುವ ಹರ್ಮನ್‌ಪ್ರೀತ್ ಕೌರ್ ಪ್ರತಿಸ್ಪರ್ಧಿಯಾಗಿ ಸಹ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಬಾಂಗ್ಲಾದೇಶದ ನಾಯಕಿ ನಿಗರ್ ಸುಲ್ತಾನಾ ನಾಮನಿರ್ದೇಶನಗೊಂಡಿದ್ದರು. ಆದರೆ ಈ ಇಬ್ಬರನ್ನು ಹಿಂದಿಕ್ಕಿ ಪ್ರಶಸ್ತಿ ಗೆಲ್ಲುವಲ್ಲಿ ಕೌರ್ ಯಶಸ್ವಿಯಾಗಿದ್ದಾರೆ. ಪ್ರಶಸ್ತಿ ಬಂದಿದಕ್ಕೆ ಪ್ರತಿಕ್ರಿಯಿಸಿದ ಕೌರ್, ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದು ಅದ್ಭುತವಾದ ವಿಚಾರವಾಗಿತ್ತು. ಅದರಲ್ಲೂ ದೇಶವಾಸಿ ಸ್ಮೃತಿ ಮತ್ತು ನಿಗರ್ ಜೊತೆಗೆ ನಾಮನಿರ್ದೇಶನಗೊಂಡು ವಿಜೇತರಾಗಿರುವುದು ಸಂತಸದ ವಿಚಾರವಾಗಿದೆ ಎಂದಿದ್ದಾರೆ.
Published On - 2:33 pm, Mon, 10 October 22