Robin Uthappa: ಈ ಸಮಸ್ಯೆಗೆ ಹೆದರಿ ಭಾರತವನ್ನು ತೊರೆದಿರುವ ಕನ್ನಡಿಗ ರಾಬಿನ್ ಉತ್ತಪ್ಪ

|

Updated on: Nov 28, 2024 | 6:00 PM

Robin Uthappa Dubai Move: ಟೀಂ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅವರು ದುಬೈನಲ್ಲಿ ನೆಲೆಸಿರುವುದಕ್ಕೆ ಕಾರಣ ತಿಳಿಸಿದ್ದಾರೆ. ತಮ್ಮ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಟ್ರಾಫಿಕ್ ಜಾಮ್‌ನಿಂದ ತಪ್ಪಿಸಿಕೊಳ್ಳಲು ದುಬೈಗೆ ಸ್ಥಳಾಂತರಗೊಂಡಿರುವುದಾಗಿ ಉತ್ತಪ್ಪ ಹೇಳಿದ್ದಾರೆ. ವಿರಾಟ್ ಕೊಹ್ಲಿ ಕೂಡ ಇದೇ ರೀತಿಯ ಕಾರಣಗಳಿಗಾಗಿ ಲಂಡನ್‌ನಲ್ಲಿ ನೆಲೆಸಿದ್ದಾರೆ.

Robin Uthappa: ಈ ಸಮಸ್ಯೆಗೆ ಹೆದರಿ ಭಾರತವನ್ನು ತೊರೆದಿರುವ ಕನ್ನಡಿಗ ರಾಬಿನ್ ಉತ್ತಪ್ಪ
ರಾಬಿನ್ ಉತ್ತಪ್ಪ
Follow us on

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ವರ್ಷಗಳೆ ಕಳೆದಿವೆ. 2006 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಉತ್ತಪ್ಪ, 2015 ರಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾದಲ್ಲಿ ಆಡಿದ್ದರು. ಆ ಬಳಿಕ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ.ಆದಾಗ್ಯೂ ಐಪಿಎಲ್​ನಲ್ಲಿ ಆಡುವುದನ್ನು ಮುಂದುವರೆಸಿದ್ದ ಉತ್ತಪ್ಪ 2022 ರ ಸೆಪ್ಟೆಂಬರ್​ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಬಳಿಕ ವೀಕ್ಷಕ ವಿವರಣೆಗಾರರಾಗಿ ಉತ್ತಪ್ಪ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಪಾಡ್‌ಕ್ಯಾಸ್ಟ್‌ವೊಂದರಲ್ಲಿ ಮಾತನಾಡಿರುವ ಉತ್ತಪ್ಪ ತಾನ್ಯಾಕೆ ಭಾರತವನ್ನು ತೊರೆದು ದುಬೈನಲ್ಲಿ ನೆಲೆಸಿದ್ದೇನೆ ಎಂಬುದಕ್ಕೆ ಕಾರಣ ತಿಳಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ರಾಬಿನ್ ಉತ್ತಪ್ಪ ತನ್ನ ಕುಟುಂಬದೊಂದಿಗೆ ಕಳೆದೊಂದು ವರ್ಷದಿಂದ ಖಾಯಂ ಆಗಿ ದುಬೈನಲ್ಲಿ ನೆಲೆಸಿದ್ದಾರೆ. ಆದಾಗ್ಯೂ ಭಾರತದ ನಂಟನ್ನು ಉತ್ತಪ್ಪ ಸಂಪೂರ್ಣವಾಗಿ ಖಡಿದುಕೊಂಡಿಲ್ಲ. ದೇಶದಲ್ಲಿ ಆಗಾಗ್ಗೆ ನಡೆಯುವ ವಿವಿದ ಲೀಗ್​ಗಳಲ್ಲಿ ಉತ್ತಪ್ಪ ಪಾಲ್ಗೋಳುತ್ತಾರೆ. ಇದರ ಜೊತೆಗೆ ಕ್ರೀಡಾ ವಾಹಿನಿಗಳಲ್ಲೂ ವೀಕ್ಷಕ ವಿವರಣೆಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಟ್ರಾಫಿಕ್‌ನಲ್ಲಿ ಅರ್ಧದಷ್ಟು ಜೀವನ

ಈ ನಡುವೆ ಪಾಡ್‌ಕ್ಯಾಸ್ಟ್‌ವೊಂದರಲ್ಲಿ ಮಾತನಾಡಿರುವ ಉತ್ತಪ್ಪ ಕುಟುಂಬ ಸಮೇತರಾಗಿ ದುಬೈನಲ್ಲಿ ನೆಲೆಸಿರುವುದಕ್ಕೆ ಕಾರಣ ತಿಳಿಸಿದ್ದಾರೆ. ‘ತಮ್ಮ ಮಕ್ಕಳು ಇಲ್ಲಿನ ಟ್ರಾಫಿಕ್‌ನಲ್ಲಿ ಕಷ್ಟಪಡಬಾರದು ಎಂದು ಬೆಂಗಳೂರಿನಿಂದ ದುಬೈನಲ್ಲಿ ನೆಲೆಸಿದ್ದೇನೆ ಎಂದು ರಾಬಿನ್ ಉತ್ತಪ್ಪ ಪಾಡ್‌ಕಾಸ್ಟ್‌ನಲ್ಲಿ ತಿಳಿಸಿದ್ದಾರೆ. ಟ್ರಾಫಿಕ್‌ನಲ್ಲಿ ಅರ್ಧದಷ್ಟು ಜೀವನವನ್ನು ಕಳೆಯುವ ಜಾಗದಲ್ಲಿ ನನ್ನ ಮಕ್ಕಳನ್ನು ಇರಿಸುವುದು ಸರಿಯಲ್ಲ ಎಂದು ನಾನು ನನ್ನ ಪ್ರೀತಿಯ ನಗರವಾದ ಬೆಂಗಳೂರನ್ನು ತೊರೆದಿದ್ದೇನೆ. ಇದೇ ನಿಜವಾದ ಕಾರಣ ಎಂದು ಉತ್ತಪ್ಪ ಹೇಳಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನ ಟ್ರಾಫಿಕ್ ಜಾಮ್‌ನಲ್ಲಿ ನಾನು ಮತ್ತು ತನ್ನ ಕುಟುಂಬ ನಾಲ್ಕೂವರೆ ಗಂಟೆಗಳ ಕಾಲ ಸಿಲುಕಿಕೊಂಡಿದ್ದನ್ನು ರಾಬಿನ್ ಉತ್ತಪ್ಪ ಇಲ್ಲಿ ಉಲ್ಲೇಖಿಸಿದ್ದಾರೆ.

ಟ್ರಾಫಿಕ್ ಜಾಮ್‌ ದೊಡ್ಡ ಸಮಸ್ಯೆಯಾಗಿತ್ತು

ಮಗಳು ಟ್ರಿನಿಟಿ ಜನಿಸಿದಾಗ, ಅವಳ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಅವಳ ಚಿಕಿತ್ಸೆಗಾಗಿ ನಾನು ನನ್ನ ಮನೆಯಿಂದ 3.5 ಕಿಮೀ ದೂರದಲ್ಲಿರುವ ಹತ್ತಿರದ ಕ್ಲಿನಿಕ್‌ಗೆ ಹೋಗಬೇಕಾಯಿತು. ಆದರೆ ಕೇವಲ 3.5 ಕಿಮೀ ಪ್ರಯಾಣಿಸಲು ಬರೋಬ್ಬರಿ 45 ನಿಮಿಷ ಸಮಯ ತೆಗೆದುಕೊಳ್ಳುತ್ತಿತ್ತು. ಮತ್ತೆ ಅಲ್ಲಿಂದ ಮನೆಗೆ ಮರಳಲು ನಾಲ್ಕೂವರೆ ಗಂಟೆಗಳು ತೆಗೆದುಕೊಳ್ಳುತ್ತಿತ್ತು. ಈ ದೀರ್ಘ ಪ್ರಯಾಣವನ್ನು ಗಮನದಲ್ಲಿಟ್ಟುಕೊಂಡು ನಾನು ಕಾರಿನಲ್ಲಿ ಮಗಳಿಗೆ ಹಾಲು ಮತ್ತು ಆಹಾರವನ್ನು ಇಟ್ಟುಕೊಳ್ಳುತ್ತಿದ್ದೆ. ಟ್ರಾಫಿಕ್​ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದ ನಾನು ಬೇಸತ್ತು, ಅಂತಿಮವಾಗಿ ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ದೇಶ ಬಿಡಲು ನಿರ್ಧರಿಸಿದೆ ಎಂದಿದ್ದಾರೆ.

ಲಂಡನ್​ನಲ್ಲಿ ಕೊಹ್ಲಿ ವಾಸಿ

ವಾಸ್ತವವಾಗಿ ರಾಬಿನ್ ಉತ್ತಪ್ಪ ಅವರಂತೆಯೇ ವಿರಾಟ್ ಕೊಹ್ಲಿ ಕೂಡ ಇದೇ ರೀತಿಯ ವೈಯಕ್ತಿಕ ಕಾರಣಗಳಿಗಾಗಿ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚೆಗಷ್ಟೇ ವಾಸಿಂ ಅಕ್ರಮ್ ಅವರು ಜೊತೆ ಈ ಬಗ್ಗೆ ಮಾತನಾಡಿದ್ದ ವಿರಾಟ್, ನಾನು ಲಂಡನ್​ನ ಬೀದಿಗಳಲ್ಲಿ ಆರಾಮಾಗಿ ಓಡಾಡಬಹುದು. ಅಲ್ಲದೆ ನೀವು ನಿಮ್ಮ ಕುಟುಂಬದೊಂದಿಗೆ ಸ್ವಾತಂತ್ರವಾಗಿ ಪ್ರಯಾಣಿಸಬಹುದು. ಆದರೆ ಇದೆಲ್ಲ ಭಾರತದಲ್ಲಿ ಸಾಧ್ಯವಿಲ್ಲ ಎಂದು ಕೊಹ್ಲಿ ಹೇಳಿದ್ದರು. ಬಹುಶಃ ಇದೇ ಕಾರಣಕ್ಕೆ ವಿರಾಟ್ ಕೊಹ್ಲಿ ಈಗ ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ