Rohit Sharma
ಏಷ್ಯಾಕಪ್ನ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಪಂದ್ಯದ ಮೂಲಕ ಹಿಟ್ಮ್ಯಾನ್ 250 ಏಕದಿನ ಪಂದ್ಯಗಳನ್ನಾಡಿದ ಸಾಧನೆ ಮಾಡಿದರು.
ಈ ಮೂಲಕ ಟೀಮ್ ಇಂಡಿಯಾ ಪರ 250 ಏಕದಿನ ಪಂದ್ಯಗಳನ್ನಾಡಿದ ವಿಶೇಷ ಸಾಧಕರ ಪಟ್ಟಿಗೆ ರೋಹಿತ್ ಶರ್ಮಾ ಸೇರ್ಪಡೆಯಾದರು. ಇದಕ್ಕೂ ಮುನ್ನ ಕೇವಲ 8 ಭಾರತೀಯ ಆಟಗಾರರು ಮಾತ್ರ ಈ ಸಾಧನೆ ಮಾಡಿದ್ದರು.
250 ಪಂದ್ಯಗಳನ್ನಾಡಿದ ಭಾರತೀಯರು:
ಟೀಮ್ ಇಂಡಿಯಾ ಪರ ಅತ್ಯಧಿಕ ಏಕದಿನ ಪಂದ್ಯಗಳನ್ನಾಡಿದ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಇದೀಗ 250+ ಪಂದ್ಯಗಳನ್ನಾಡಿದ ಸಾಧಕರ ಪಟ್ಟಿಯಲ್ಲಿ ಹಿಟ್ಮ್ಯಾನ್ 9ನೇ ಭಾರತೀಯ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿರುವ ಟೀಮ್ ಇಂಡಿಯಾ ಆಟಗಾರರೆಂದರೆ..
- ಸಚಿನ್ ತೆಂಡೂಲ್ಕರ್ (463)
- ಎಂಎಸ್ ಧೋನಿ (347)
- ರಾಹುಲ್ ದ್ರಾವಿಡ್ (340)
- ಮೊಹಮ್ಮದ್ ಅಝರುದ್ದೀನ್ (334)
- ಸೌರವ್ ಗಂಗೂಲಿ (308)
- ಯುವರಾಜ್ ಸಿಂಗ್ (301)
- ವಿರಾಟ್ ಕೊಹ್ಲಿ (280)
- ಅನಿಲ್ ಕುಂಬ್ಳೆ (269)
- ರೋಹಿತ್ ಶರ್ಮಾ (250)
250 ಏಕದಿನ ಪಂದ್ಯಗಳಲ್ಲಿ ಹಿಟ್ಮ್ಯಾನ್ ಸಾಧನೆ ಹೇಗಿದೆ?
- 250 ಏಕದಿನ ಪಂದ್ಯಗಳ ಮೂಲಕ ರೋಹಿತ್ ಶರ್ಮಾ 10 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ಈ ಸಾಧನೆ ಮಾಡಿದ 6ನೇ ಭಾರತೀಯ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ (18,426), ವಿರಾಟ್ ಕೊಹ್ಲಿ (13,027), ಸೌರವ್ ಗಂಗೂಲಿ (11,363), ರಾಹುಲ್ ದ್ರಾವಿಡ್ (10,889), ಮತ್ತು ಎಂಎಸ್ ಧೋನಿ (10,773) ಈ ಸಾಧನೆ ಮಾಡಿದ್ದರು.
- 250 ಏಕದಿನ ಪಂದ್ಯಗಳ ಮೂಲಕ ಅತೀ ವೇಗವಾಗಿ 10 ಸಾವಿರ ರನ್ ಪೂರೈಸಿದ 2ನೇ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಹಿಟ್ಮ್ಯಾನ್ ತಮ್ಮದಾಗಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ 205 ಇನಿಂಗ್ಸ್ಗಳ ಮೂಲಕ 10 ಸಾವಿರ ರನ್ ಪೂರೈಸಿದ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದೀಗ 250 ಪಂದ್ಯಗಳಲ್ಲಿ 241 ಇನಿಂಗ್ಸ್ ಆಡಿರುವ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.
- 250 ಏಕದಿನ ಪಂದ್ಯಗಳಲ್ಲಿ ಅತ್ಯಧಿಕ ಶತಕ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ (49) ಹಾಗೂ ವಿರಾಟ್ ಕೊಹ್ಲಿ (47) ಮೊದಲೆರಡು ಸ್ಥಾನಗಳಲಿದ್ದಾರೆ.
- 250 ಏಕದಿನ ಪಂದ್ಯಗಳಲ್ಲಿ ಅತ್ಯಧಿಕ ದ್ವಿಶತಕ ಸಿಡಿಸಿದ ವಿಶ್ವ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಹಿಟ್ಮ್ಯಾನ್ ಒಟ್ಟು 3 ಬಾರಿ ಡಬಲ್ ಸೆಂಚುರಿ ಸಿಡಿಸಿದ್ದರು.
- 250 ಏಕದಿನ ಪಂದ್ಯಗಳಲ್ಲಿ ಅತ್ಯಧಿಕ ಸಿಕ್ಸ್ಗಳನ್ನು ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ಕೂಡ ರೋಹಿತ್ ಶರ್ಮಾ ಹೆಸರಿನಲ್ಲಿರುವುದು ವಿಶೇಷ. ಹಿಟ್ಮ್ಯಾನ್ ಇದುವರೆಗೆ 286 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.
ಇದನ್ನೂ ಓದಿ: ರೋಹಿತ್ ಶರ್ಮಾ ಸಿಡಿಲಬ್ಬರಕ್ಕೆ ಶಾಹಿದ್ ಅಫ್ರಿದಿ ದಾಖಲೆ ಧೂಳೀಪಟ
- ಏಕದಿನ ಕ್ರಿಕೆಟ್ನ ಮೂರನೇ ಸಿಕ್ಸರ್ ಕಿಂಗ್ ಎಂಬ ವಿಶ್ವ ದಾಖಲೆ ಕೂಡ ಹಿಟ್ಮ್ಯಾನ್ ಹೆಸರಿನಲ್ಲಿದೆ. ಈ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ (331) ಮತ್ತು ಪಾಕಿಸ್ತಾನದ ಶಾಹಿದ್ ಅಫ್ರಿದಿ (351) ಮೊದಲೆರಡು ಸ್ಥಾನಗಳಲ್ಲಿದ್ದು, 286 ಸಿಕ್ಸ್ಗಳೊಂದಿಗೆ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ.