
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನ ಮೊದಲ ದಿನದ ಆಟದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ್ದ ಭಾರತ (India vs England) ಇದೀಗ ಎರಡನೇ ದಿನವನ್ನು ಕೂಡ ಭರ್ಜರಿ ಆಗಿ ಆರಂಭಿಸಿದೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಕರ್ಷಕ ಶತಕ ಸಿಡಿಸಿ ಟೆಸ್ಟ್ ಕ್ರಿಕೆಟ್ನಲ್ಲಿ 12ನೇ ಸೆಂಚುರಿ ಪೂರೈಸಿದ್ದಾರೆ. ಹಾಗೆಯೆ ಶುಭ್ಮನ್ ಗಿಲ್ ಕೂಡ 4ನೇ ಶತಕ ಸಿಡಿಸಿದ್ದಾರೆ. ಇಂಗ್ಲೆಂಡ್ ಅನ್ನು 218 ರನ್‌ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಶುರುಮಾಡಿದ್ದ ಭಾರತ ನಿನ್ನೆ ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿತ್ತು.
ಇಂದು ಎರಡನೇ ದಿನದಾಟ ಆರಂಭಿಸಿದ ಭಾರತ ಬಿರುಸಿನ ಬ್ಯಾಟಿಂಗ್ ನಡೆಸುತ್ತಿದೆ. ರೋಹಿತ್ 154 ಎಸೆತಗಳಲ್ಲಿ 13 ಫೋರ್, 3 ಸಿಕ್ಸರ್ನೊಂದಿಗೆ ಶತಕ ಪೂರೈಸಿದರು. ಗಿಲ್ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿ 137 ಎಸೆತಗಳಲ್ಲಿ 10 ಫೋರ್, 5 ಸಿಕ್ಸರ್ನೊಂದಿಗೆ 100 ರನ್ ಗಳಿಸಿದರು. 250 ರನ್‌ಗಳ ಗಡಿ ದಾಟುವ ಮೂಲಕ ಭಾರತ ಉತ್ತಮ ಮುನ್ನಡೆ ಸಾಧಿಸುತ್ತಿದೆ. ಯಶಸ್ವಿ ಜೈಸ್ವಾಲ್ ಮೊದಲ ದಿನ 57 ರನ್ ಗಳಿಸಿ ಔಟ್ ಆಗಿದ್ದರು.
ಕುಲ್ದೀಪ್ ಯಾದವ್ಗೆ ಬಂಪರ್ ಗಿಫ್ಟ್: 1 ವಿಕೆಟ್ಗೆ 1 ಲಕ್ಷ ನೀಡಲಿದೆ ಬಿಸಿಸಿಐ
ಗುರುವಾರ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಕುಲ್ದೀಪ್ ಯಾದವ್ ಮತ್ತು ಆರ್ ಅಶ್ವಿನ್ ಸ್ಪಿನ್ ಜೋಡಿಯ ಮುಂದೆ ಮಂಡಿಯೂರಿತು. ಹೀಗಾಗಿ ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್ 218 ರನ್‌ಗಳಿಗೆ ಕೊನೆಗೊಂಡಿತು. ಇಂಗ್ಲೆಂಡ್ ತನ್ನ ಕೊನೆಯ 7 ವಿಕೆಟ್‌ಗಳನ್ನು ಕೇವಲ 43 ರನ್‌ಗಳಿಗೆ ಕಳೆದುಕೊಂಡಿತು.
ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್‌ನ ಆರಂಭ ಅದ್ಭುತವಾಗಿತ್ತು. ಬೆನ್ ಡಕೆಟ್ ಮತ್ತು ಝಾಕ್ ಕ್ರೌಲಿ ಇಬ್ಬರೂ 64 ರನ್‌ಗಳ ಆರಂಭಿಕ ಜೊತೆಯಾಟವನ್ನು ಹಂಚಿಕೊಂಡರು. ಈ ವೇಳೆ ಬೆನ್ ಡಕೆಟ್ 27 ರನ್ ಗಳಿಸಿ ಔಟಾದರು. ನಂತರ ಒಲಿ ಪೋಪ್ ರೂಪದಲ್ಲಿ ಇಂಗ್ಲೆಂಡ್ ಮತ್ತೊಂದು ವಿಕೆಟ್ ಕಳೆದುಕೊಂಡಿತು. ಅರ್ಧಶತಕ ಸಿಡಿಸಿದ್ದ ಝಾಕ್ ಕ್ರೌಲಿ ವಿಕೆಟ್ನೊಂದಿಗೆ ಇಂಗ್ಲೆಂಡ್ 3 ವಿಕೆಟ್ ನಷ್ಟಕ್ಕೆ 137 ರನ್ ಕಲೆಹಾಕಿತ್ತು.
ಇಂಗ್ಲೆಂಡ್ ಅನ್ನು ಆಲೌಟ್ ಮಾಡಿದ ಬಳಿಕ ಕುಲ್ದೀಪ್-ಅಶ್ವಿನ್ ನಡುವೆ ಜಗಳ: ವೈರಲ್ ವಿಡಿಯೋ
100ನೇ ಟೆಸ್ಟ್ ಪಂದ್ಯವನ್ನು ಆಡಿದ ಜಾನಿ ಬೈರ್ಸ್ಟೋವ್ 29, ಜೋ ರೂಟ್ 26, ಕ್ಯಾಪ್ಟನ್ ಬೆನ್ ಸ್ಟೋಕ್ಸ್ 0, ಟಾಮ್ ಹಾರ್ಟ್ಲಿ 6, ಮಾರ್ಕ್ ವುಡ್ 0, ಬೆನ್ ಫೋಕ್ಸ್ 24 ಮತ್ತು ಜೇಮ್ಸ್ ಆಂಡರ್ಸನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಶೋಯೆಬ್ ಬಶೀರ್ 11 ರನ್ ಗಳಿಸಿ ಅಜೇಯರಾಗಿ ಉಳಿದರು. ಕುಲ್ದೀಪ್ ಯಾದವ್ 5 ವಿಕೆಟ್ ಪಡೆದ ಸಾಧನೆ ಮಾಡಿದರೆ, ಅಶ್ವಿನ್ ಕೂಡ 4 ವಿಕೆಟ್ ಕಬಳಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ