ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. 5 ಪಂದ್ಯಗಳ ಈ ಸರಣಿಯಲ್ಲಿ ಟೀಮ್ ಇಂಡಿಯಾ 4-0 ಅಂತರದಿಂದ ಗೆಲ್ಲಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಈ ಸರಣಿಯಲ್ಲಿ ಅಮೋಘ ಗೆಲುವು ದಾಖಲಿಸಿದರೆ ಮಾತ್ರ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಲ್ಲಿ ನೇರವಾಗಿ ಫೈನಲ್‌ಗೇರಬಹುದು. ಆದರೆ ಅಂತಹದೊಂದು ಅಮೋಘ ಗೆಲುವು ಸಿಗಬೇಕಿದ್ದರೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮಿಂಚಲೇಬೇಕು.
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಳೆದ 7 ವರ್ಷಗಳಿಂದ ಭಾರತದ ಪರ ಶತಕದ ಜೊತೆಯಾಟವನ್ನೇ ಆಡಿಲ್ಲ. ಕೊಹ್ಲಿ ಮತ್ತು ರೋಹಿತ್ ಒಂದು ದಶಕಕ್ಕೂ ಹೆಚ್ಚು ಕಾಲ ಟೀಮ್ ಇಂಡಿಯಾದ ಭಾಗವಾಗಿದ್ದಾರೆ. ಎಲ್ಲಾ ಮೂರು ಫಾರ್ಮ್ಯಾಟ್‌ಗಳಲ್ಲಿ ಭಾರತ ತಂಡದ ಬ್ಯಾಟಿಂಗ್ ಶಕ್ತಿಯಾಗಿ ಕಾಣಿಸಿಕೊಂಡಿದ್ದಾರೆ.
ODI ಮತ್ತು T20 ನಲ್ಲಿ, ರೋಹಿತ್ ಮತ್ತು ವಿರಾಟ್ ಒಟ್ಟಿಗೆ ಅನೇಕ ಶತಕಗಳ ಜೊತೆಯಾಟವನ್ನು ಸಹ ಆಡಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್ ವಿಷಯಕ್ಕೆ ಬಂದಾಗ, ಈ ಜೋಡಿಯು ಸಂಪೂರ್ಣ ವಿಫಲರಾಗಿದ್ದಾರೆ. ಏಕೆಂದರೆ ಕಳೆದ 7 ವರ್ಷಗಳಿಂದ ವಿರಾಟ್-ರೋಹಿತ್ ಜೋಡಿ ದೊಡ್ಡ ಪಾಲುದಾರಿಕೆಯ ಇನಿಂಗ್ಸ್ ಆಡಿಲ್ಲ.
ಅಂಕಿಅಂಶಗಳ ಪ್ರಕಾರ ಜನವರಿ 1, 2018 ರಿಂದ, ಕೊಹ್ಲಿ ಮತ್ತು ರೋಹಿತ್ 34 ಟೆಸ್ಟ್ ಪಂದ್ಯಗಳ 12 ಇನ್ನಿಂಗ್ಸ್‌ಗಳಲ್ಲಿ ಒಟ್ಟಿಗೆ ಬ್ಯಾಟಿಂಗ್ ಮಾಡಿದ್ದಾರೆ. ಆದರೆ ಈ ಅವಧಿಯಲ್ಲಿ ಅವರು ಒಂದು ಬಾರಿಯೂ ಶತಕದ ಜೊತೆಯಾಟ ಆಡಿಲ್ಲ. ಈ ಶತಕದ ಜೊತೆಯಾಟವನ್ನು ಮರೆತುಬಿಡಿ, ಈ 12 ಇನ್ನಿಂಗ್ಸ್‌ಗಳಲ್ಲಿ ಇಬ್ಬರ ನಡುವೆ ಕೇವಲ ಒಂದು ಅರ್ಧಶತಕದ ಜೊತೆಯಾಟವಿದೆ. ಅದು ಕೂಡ 64 ರನ್ ಗಳ ಪಾಲುದಾರಿಕೆ.
32, 25, 23, 1, 0, 64, 1, 17, 16, 2, 18, 23.
ಕಳೆದ 7 ವರ್ಷಗಳಲ್ಲಿ ಭಾರತ ತಂಡದಲ್ಲಿ ಅನುಭವಿಗಳಾಗಿ ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರಾ, ಹನುಮ ವಿಹಾರಿಯಂತಹ ಆಟಗಾರರಿದ್ದರು. ಹೀಗಾಗಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ವೈಫಲ್ಯ ಎದ್ದು ಕಾಣುತ್ತಿರಲಿಲ್ಲ. ಇದೀಗ ಇವರೇ ತಂಡದ ಅನುಭವಿ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿಯೇ ಯುವ ಬ್ಯಾಟರ್ ಗಳ ಎಡೆಯಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಇನಿಂಗ್ಸ್ ಆಡುವುದು ಅನಿವಾರ್ಯವಾಗಿದೆ.
ಇದನ್ನೂ ಓದಿ: ಹುಡುಗಿಯಾಗಿ ಬದಲಾದ ಟೀಮ್ ಇಂಡಿಯಾ ಕ್ರಿಕೆಟಿಗನ ಪುತ್ರ
ಅದರಲ್ಲೂ ಆಸ್ಟ್ರೇಲಿಯಾದಂತಹ ಪಿಚ್‌ನಲ್ಲಿ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ – ರೋಹಿತ್ ಶರ್ಮಾ ದೊಡ್ಡ ಇನಿಂಗ್ಸ್ ಆಡಲೇಬೇಕು. ಒಂದು ವೇಳೆ ಈ ಸರಣಿಯಲ್ಲೂ ದಿಗ್ಗಜರಿಬ್ಬರು ವಿಫಲರಾದರೆ, ಟೆಸ್ಟ್ ಕೆರಿಯರ್ ಅಂತ್ಯವಾಗುವ ಸಾಧ್ಯತೆಯನ್ನು ಸಹ ತಳ್ಳಿ ಹಾಕುವಂತಿಲ್ಲ.