India vs West Indies: 1000ನೇ ಏಕದಿನ ಪಂದ್ಯದಲ್ಲಿ ಗೆದ್ದು ದಾಖಲೆ ಬರೆದ ಭಾರತ: ರೋಹಿತ್ ಪಡೆ ಭರ್ಜರಿ ಶುಭಾರಂಭ
IND vs WI, 1st ODI: ಈ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ಗೆ ಇಳಿದ ವೆಸ್ಟ್ ಇಂಡೀಸ್ ತಂಡ ಕೇವಲ 176 ರನ್‌ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾದ ಸ್ಪಿನ್ ಬೌಲಿಂಗ್ ದಾಳಿಗೆ ವಿಂಡೀಸ್ ದಾಂಡಿಗರು ಸಂಪೂರ್ಣವಾಗಿ ತತ್ತರಿಸಿದರು.
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ (India vs West Indies) ತಂಡ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ತಾನಾಡಿದ 1000ನೇ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ ಮೊದಲ ತಂಡ ಎಂಬ ಖ್ಯಾತಿಗೆ ಪಾತ್ರವಾಗಿದೆ. ಬ್ಯಾಟಿಂಗ್ – ಬೌಲಿಂಗ್ನಲ್ಲಿ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಿದ ಟೀಮ್ ಇಂಡಿಯಾ (Team India) ಈ ಜಯದೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ರೋಹಿತ್ ಶರ್ಮಾ (Rohit Sharma) ಪರಿಪೂರ್ಣ ನಾಯಕನಾಗಿ ಮುನ್ನಡೆಸಿದ ಮೊದಲ ಓಡಿಐ ಪಂದ್ಯದಲ್ಲೇ ಗೆಲುವಿನ ರುಚಿ ಸವಿದಿದ್ದಾರೆ. ರೋಹಿತ್ ನಾಯಕನ ಆಟವಾಡಿದರೆ ಮಾಜಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ನಲ್ಲಿ ವಿಫಲರಾದರು. ಪದಾರ್ಪಣೆ ಪಂದ್ಯವನ್ನಾಡಿದ ದೀಪಕ್ ಹೂಡ ಭರವಸೆ ಮೂಡಿಸಿದ್ದಾರೆ. ರಿಷಭ್ ಪಂತ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ನಿರಾಸೆ ಮೂಡಿಸಿದರು.
ಈ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ಗೆ ಇಳಿದ ವೆಸ್ಟ್ ಇಂಡೀಸ್ ತಂಡ ಕೇವಲ 176 ರನ್‌ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾದ ಸ್ಪಿನ್ ಬೌಲಿಂಗ್ ದಾಳಿಗೆ ವಿಂಡೀಸ್ ದಾಂಡಿಗರು ಸಂಪೂರ್ಣವಾಗಿ ತತ್ತರಿಸಿದರು. ವಾಶಿಂಗ್ಟನ್ ಸುಂದರ್ ಹಾಗೂ ಯುಜ್ವೇಂದ್ರ ಚಹಲ್ ಅದ್ಭುತ ದಾಳಿಯನ್ನು ಸಂಘಟಿಸಿದರ ಪರಿಣಾಮವಾಗಿ ವಿಂಡೀಸ್ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ನೆಲೆಯೂರಲು ಸಾಧ್ಯವಾಗಲೇ ಇಲ್ಲ. ಜೇಸನ್ ಹೋಲ್ಡರ್ ಹೊರತುಪಡಿಸಿ ಉಳಿದ ಯಾವ ಆಟಗಾರ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಫಲವಾಗಲಿಲ್ಲ.
ಹೋಲ್ಡರ್ 57 ರನ್ ಗಳಿಸಿದ್ದು ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಭಾರತದ ಬೌಲರ್‌ಗಳ ಸವಾಲನ್ನು ಮೆಟ್ಟಿ ನಿಲ್ಲಲಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ವಿಕೆಟ್ ಪಡೆಯಲು ಹೆಣಗಾಡಿದ್ದ ಚಹಲ್ ವೆಸ್ಟ್ ಇಂಡೀಸ್ ವಿರುದ್ಧ ಮೊದಲನೇ ಪಂದ್ಯದಲ್ಲಿ 4 ವಿಕೆಟ್ ಪಡೆಯುವ ಮೂಲಕ ತಮ್ಮ ಬೌಲಿಂಗ್ ಲಯಕ್ಕೆ ಮರಳಿದರು. ಚಹಲ್‌ಗೆ ಸಾಥ್ ನೀಡಿದ ವಾಷಿಂಗ್ಟನ್ ಸುಂದರ್ 3 ವಿಕೆಟ್ ಪಡೆದರೆ, ಪ್ರಸಿಧ್ ಕೃಷ್ಣ 2 ಮತ್ತು ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಕಬಳಸಿದರು.
ಭಾರತದ ಚೇಸಿಂಗ್ ನಲ್ಲಿ ನಾಯಕ ರೋಹಿತ್ ಶರ್ಮಾ 60 ರನ್ (51 ಎಸೆತ) ಆರಂಭಿಕ ಇಶಾನ್ ಕಿಶನ್ 28, ವಿರಾಟ್ ಕೊಹ್ಲಿ 8 ರನ್ ಗಳಿಸಿದರು. ಕೇವಲ 28 ಓವರ್‌ಗಳಲ್ಲಿ ಕಡಿಮೆ ಮೊತ್ತದ ಗುರಿಯನ್ನು ಬೆನ್ನಟ್ಟಿತು. ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡ ನಂತರ, ಸೂರ್ಯಕುಮಾರ್ ಯಾದವ್ ಮತ್ತು ಪದರ್ಪಣಾ ಪಂದ್ಯವಾಡಿದ ದೀಪಕ್ ಹೂಡಾ ಅಜೇಯರಾಗಿ ಉಳಿದು ಐದನೇ ವಿಕೆಟ್‌ಗೆ 62 ರನ್‌ಗಳನ್ನು ಸೇರಿಸುವ ಮೂಲಕ ಭಾರತಕ್ಕೆ ಗೆಲುವು ತಂದಿಟ್ಟರು. ಸೂರ್ಯಕುಮಾರ್ 36 ಎಸೆತಗಳಲ್ಲಿ 34 ರನ್ ಗಳಿಸಿದರೆ ಹೂಡ 32 ಎಸೆತಗಳಲ್ಲಿ 26 ರನ್ ಬಾರಿಸಿದರು.
6 ವಿಕೆಟ್ಗಳ ಜಯದೊಂದಿಗೆ ಭಾರತ ಏಕದಿನ ಸರಣಿಯನ್ನು ಭರ್ಜರಿ ಆಗಿ ಶುಭಾರಂಭ ಮಾಡಿದೆ. ಕೆರಿಬಿಯನ್ನರಿಗೆ ಮಾರಕವಾಗಿ ಪರಿಣಮಿಸಿದ ಚಹಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು. ಮುಂದಿನ ಎರಡನೇ ಏಕದಿನ ಪಂದ್ಯ ಫೆ. 9 ಬುಧವಾರದಂದು ಇದೇ ಮೈದಾನದಲ್ಲಿ ನಡೆಯಲಿದೆ.