ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL) ಅತ್ಯಂತ ಯಶಸ್ವಿ ತಂಡಗಳ ಪೈಕಿ ಮುಂಬೈ ಇಂಡಿಯನ್ಸ್ (Mumbai Indians) ಹೆಸರು ಅಗ್ರಸ್ಥಾನದಲ್ಲಿ ಕೇಳಿಬರುತ್ತದೆ. ಏಕೆಂದರೆ ಈ ತಂಡವು ಐದು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ. ಅದರಲ್ಲೂ ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿಯೇ ಈ ಐದು ಪ್ರಶಸ್ತಿಗಳನ್ನು ಗೆದ್ದಿರುವುದು ವಿಶೇಷ. ರೋಹಿತ್ ನಾಯಕನಾಗುವ ಮೊದಲು ಮುಂಬೈ ಒಂದೇ ಒಂದು ಐಪಿಎಲ್ ಪ್ರಶಸ್ತಿಯನ್ನು ಗೆದ್ದಿರಲಿಲ್ಲ. ಆದರೆ ನಾಯಕನಾದ ಬಳಿಕ ಅದ್ಭುತಗಳನ್ನು ಮಾಡಿದ ರೋಹಿತ್ ಶರ್ಮಾ, ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾದರು. ಇದೀಗ ಅಂದರೆ ಜನವರಿ 8, 2023ಕ್ಕೆ ರೋಹಿತ್ ಈ ಫ್ರಾಂಚೈಸಿಯೊಂದಿಗೆ ಆಡಲು ಆರಂಭಿಸಿ ಭರ್ತಿ 12 ವರ್ಷಗಳು ತುಂಬಿವೆ.
ವಾಸ್ತವವಾಗಿ ಮುಂಬೈ ಇಂಡಿಯನ್ಸ್ ರೋಹಿತ್ ಅವರ ಎರಡನೇ ಫ್ರಾಂಚೈಸಿ. ಈ ಫ್ರಾಂಚೈಸಿಗೂ ಮೊದಲು ರೋಹಿತ್ ಡೆಕ್ಕನ್ ಚಾರ್ಜರ್ಸ್ ತಂಡದ ಪರ ಆಡುತ್ತಿದ್ದರು. ರೋಹಿತ್ ಇದೇ ತಂಡದ ಪರ ಆಡುವಾಗಲೇ ತಂಡ 2009 ರಲ್ಲಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿತ್ತು. ಬಳಿಕ 2011 ರ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಅವರನ್ನು ಖರೀದಿಸಿತ್ತು. ಅಂದಿನಿಂದ ರೋಹಿತ್ ಈ ತಂಡದಲ್ಲಿದ್ದಾರೆ. ಈಗ ರೋಹಿತ್ ಇಲ್ಲದೆ ಮುಂಬೈ ಇಂಡಿಯನ್ಸ್ ತಂಡವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂಬಂತಾಗಿದೆ.
IND vs SL: ರೋಹಿತ್ಗೆ ಫಿಟ್ನೆಸ್ನದ್ದೇ ಚಿಂತೆ; ಏಕದಿನ ಸರಣಿಗೂ ಮುನ್ನ ಜಿಮ್ನಲ್ಲಿ ಬೆವರು ಹರಿಸಿದ ಹಿಟ್ಮ್ಯಾನ್
ಮುಂಬೈ ಇಂಡಿಯನ್ಸ್‌ನೊಂದಿಗೆ ರೋಹಿತ್‌ನ 12 ವರ್ಷಗಳನ್ನು ಪೂರ್ಣಗೊಳಿಸಿದ್ದನ್ನು ವಿಶೇಷವಾಗಿ ಸ್ಮರಿಸಿಕೊಂಡಿರುವ ಫ್ರಾಂಚೈಸ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದೆ. ಈ ವಿಡಿಯೋದಲ್ಲಿ ಫ್ರಾಂಚೈಸಿ, ರೋಹಿತ್ ಅವರ 12 ವರ್ಷಗಳ ಪ್ರಯಾಣವನ್ನು ವಿವರಿಸಿದೆ. ಇದರಲ್ಲಿ ರೋಹಿತ್ ಅವರ ಮೊದಲ ಶತಕ, ಮೊದಲ ಪ್ರಶಸ್ತಿ, ಇದೆಲ್ಲವನ್ನೂ ಫ್ರಾಂಚೈಸಿ ಈ ವೀಡಿಯೊದಲ್ಲಿ ಸೇರಿಸಿದೆ. 2013ರಲ್ಲಿ ರೋಹಿತ್ ನಾಯಕತ್ವದಲ್ಲಿ ಫ್ರಾಂಚೈಸಿ ಮೊದಲ ಪ್ರಶಸ್ತಿ ಗೆದ್ದಿತ್ತು. ಇದರ ನಂತರ ತಂಡವು 2015, 2017, 2019 ಮತ್ತು 2020 ರಲ್ಲಿ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ರೋಹಿತ್, ಮುಂಬೈ ಇಂಡಿಯನ್ಸ್‌ನಲ್ಲಿ 12 ವರ್ಷಗಳು ಪೂರ್ಣಗೊಂಡಿವೆ ಎಂದು ನನಗೆ ನಂಬಲಾಗುತ್ತಿಲ್ಲ. ಇದು ತುಂಬಾ ಆಸಕ್ತಿದಾಯಕ ಮತ್ತು ಭಾವನಾತ್ಮಕ ಪ್ರಯಾಣವಾಗಿದೆ. ನಾವು ಅನೇಕ ಅನುಭವಿಗಳು, ಯುವಕರೊಂದಿಗೆ ಸಾಕಷ್ಟು ಸಾಧಿಸಿದ್ದೇವೆ. ಮುಂಬೈ ಇಂಡಿಯನ್ಸ್ ನನ್ನ ಕುಟುಂಬ. ನನ್ನ ಫಾಲೋವರ್ಸ್, ಅಭಿಮಾನಿಗಳು ಮತ್ತು ಮ್ಯಾನೇಜ್‌ಮೆಂಟ್ ಅವರ ಪ್ರೀತಿಗಾಗಿ ನಾನು ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ ಎಂದಿದ್ದಾರೆ.
ಆದಾಗ್ಯೂ, ಮುಂಬೈನ ಕೊನೆಯ ಸೀಸನ್ ತುಂಬಾ ಕೆಟ್ಟದಾಗಿತ್ತು. ಕಳೆದ ವರ್ಷದಿಂದ ಐಪಿಎಲ್ 10 ತಂಡಗಳ ಲೀಗ್ ಆಗಿದ್ದು, ಮುಂಬೈ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿತ್ತು. ಹೀಗಾಗಿ ಈ ಬಾರಿ ರೋಹಿತ್ ಮತ್ತೊಮ್ಮೆ ತಂಡಕ್ಕೆ ಪ್ರಶಸ್ತಿ ತಂದುಕೊಡಲು ಪ್ರಯತ್ನಿಸಲಿದ್ದಾರೆ. ಮುಂಬೈ ಕೂಡ ಐಪಿಎಲ್-2023ಕ್ಕೆ ಸಿದ್ಧತೆ ನಡೆಸಿದ್ದು, ಅದರ ಸಲುವಾಗಿ ಈ ಬಾರಿಯ ಮಿನಿ ಹರಾಜಿನಲ್ಲಿ 17.50 ಕೋಟಿಗೆ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಖರೀದಿಸಿದೆ. ಅವರನ್ನು ಕೀರಾನ್ ಪೊಲಾರ್ಡ್‌ಗೆ ಪರ್ಯಾಯವಾಗಿ ನೋಡಲಾಗುತ್ತಿದ್ದು, ಮುಂಬೈ ತಂಡಕ್ಕೆ ಗ್ರೀನ್ ಯಾವ ರೀತಿ ನೆರವಾಗುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಅತಿ ಹೆಚ್ಚು ಬಾರಿ ಚಾಂಪಿಯನ್ ಪಟ್ಟಕ್ಕೇರಿದ ತಂಡಗಳ ಪೈಕಿ ಮುಂಬೈ ನಂತರ ಚೆನ್ನೈ ಸೂಪರ್ ಕಿಂಗ್ಸ್ ಇದೆ. ಇದುವರೆಗೆ ಚೆನ್ನೈ ನಾಲ್ಕು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ಈ ಎರಡು ತಂಡಗಳು ಫೈನಲ್‌ನಲ್ಲಿ ಆಗಾಗ್ಗೆ ಮುಖಾಮುಖಿಯಾಗುತ್ತವೆ. 2013ರಲ್ಲಿ ಚೆನ್ನೈ ತಂಡವನ್ನು ಸೋಲಿಸಿ ಮುಂಬೈ ಮೊದಲ ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿತ್ತು. ನಂತರ 2015ರಲ್ಲೂ ಮುಂಬೈ ಚೆನ್ನೈ ತಂಡವನ್ನು ಸೋಲಿಸಿ ಎರಡನೇ ಐಪಿಎಲ್ ಪ್ರಶಸ್ತಿ ಗೆದ್ದಿತ್ತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:51 am, Mon, 9 January 23