Rohit Sharma: ಬ್ಯಾಟ್ಸ್​ಮನ್​ಗಳಿಗೆ ಮನಬಂದಂತೆ ಬೈದ ರೋಹಿತ್ ಶರ್ಮಾ: ಪಂದ್ಯದ ಬಳಿಕ ಏನಂದ್ರು ಕೇಳಿ

| Updated By: Vinay Bhat

Updated on: Apr 25, 2022 | 9:09 AM

LSG vs MI, IPL 2022: ಲಖನೌ ಸೂಪರ್ ಜೇಂಟ್ಸ್ ವಿರುದ್ಧದ ಪಂದ್ಯ ಮುಗಿದ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ (Rohit Sharma) ಸೋಲಿಗೆ ಬ್ಯಾಟ್ಸ್​ಮನ್​ಗಳೇ ನೇರ ಕಾರಣ ಎಂದು ದೂರಿದ್ದಾರೆ. ಅವರು ಏನು ಹೇಳಿದರು ಎಂಬುದನ್ನು ನೋಡಿ.

Rohit Sharma: ಬ್ಯಾಟ್ಸ್​ಮನ್​ಗಳಿಗೆ ಮನಬಂದಂತೆ ಬೈದ ರೋಹಿತ್ ಶರ್ಮಾ: ಪಂದ್ಯದ ಬಳಿಕ ಏನಂದ್ರು ಕೇಳಿ
Rohit Sharma in post-match presentation LSG vs MI
Follow us on

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಐಪಿಎಲ್ 2022 ರಲ್ಲಿ (IPL 2022) ಒಂದೂ ಗೆಲುವು ಕಾಣದೆ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದೆ. ಆಡಿದ ಎಂಟು ಪಂದ್ಯಗಳ ಪೈಕಿ ಎಂಟರಲ್ಲೂ ಸೋಲುಂಡಿರುವ ಮುಂಬೈ ಟೂರ್ನಿಯಿಂದ ಹೊರಬೀಳುವುದು ಬಹುತೇಕ ಖಚಿತವಾಗಿದೆ. ಭಾನುವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಲಖನೌ ತಂಡ ಕೆಎಲ್ ರಾಹುಲ್ (KL Rahul) ಅವರ ಅಜೇಯ 103 ರನ್​​ಗಳ ಏಕಾಂಗಿ ನಿರ್ವಹಣೆ ಫಲವಾಗಿ 6 ವಿಕೆಟ್‌ಗೆ 168 ರನ್ ಕಲೆಹಾಕಿತು. ಟಾರ್ಗೆಟ್ ಬೆನ್ನಟ್ಟುವಲ್ಲಿ ವಿಫಲವಾದ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್‌ಗೆ 132 ರನ್ ದಾಖಲಿಸಲಷ್ಟೇ ಶಕ್ತವಾಯಿತು. ರೋಹಿತ್ ಪಡೆ 36 ರನ್‌ಗಳಿಂದ ಸೋಲು ಕಂಡಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಮುಂಬೈ ನಾಯಕ ರೋಹಿತ್ ಶರ್ಮಾ (Rohit Sharma) ಸೋಲಿಗೆ ಬ್ಯಾಟ್ಸ್​ಮನ್​ಗಳೇ ನೇರ ಕಾರಣ ಎಂದು ದೂರಿದ್ದಾರೆ. ಅವರು ಏನು ಹೇಳಿದರು ಎಂಬುದನ್ನು ನೋಡಿ.

“ನನಗನಿಸುವ ಪ್ರಕಾರ ನಾವು ಉತ್ತಮ ಬೌಲಿಂಗ್ ಮಾಡಿದೆವು. ಈ ಪಿಚ್​ನಲ್ಲಿ ಚೆಂಡು ಬ್ಯಾಟ್​ಗೆ ಚೆನ್ನಾಗಿ ಬರುತ್ತಿತ್ತು. ಈರೀತಿಯ ಸಂದರ್ಭದಲ್ಲಿ ಬೌಲಿಂಗ್ ಮಾಡುವುದು ಸುಲಭವಲ್ಲ. ದೊಡ್ಡ ಮಟ್ಟದ ಅಥವಾ ಚೇಸ್ ಮಾಡಲು ಸಾಧ್ಯವಿರದ ಟಾರ್ಗೆಟ್ ನಮಗೆ ಇರಲಿಲ್ಲ. ಆದರೆ, ನಮ್ಮ ಬ್ಯಾಟಿಂಗ್ ಕೆಟ್ಟದಾಗಿತ್ತು. ಈರೀತಿಯ ಟಾರ್ಗೆಟ್ ಇದ್ದಾಗ ಜೊತೆಯಾಟ ಬಹಳ ಮುಖ್ಯ. ಆದರೆ, ನನ್ನನ್ನೂ ಸೇರಿಸಿ ಮಧ್ಯಮ ಕ್ರಮಾಂಕದಲ್ಲಿ ಆಯ್ಕೆ ಮಾಡಿದ ಕೆಲ ಅನಗತ್ಯ ಹೊಡೆತ ವಿಕೆಟ್ ಕಳೆದುಕೊಳ್ಳುವಂತಾಯಿತು.”

“ಈ ಟೂರ್ನಿಯಲ್ಲೇ ನಮ್ಮ ಬ್ಯಾಟಿಂಗ್ ವಿಭಾಗ ವೈಫಲ್ಯ ಅನುಭವಿಸಿದೆ. ಮಧ್ಯಮ ಕ್ರಮಾಂಕದಲ್ಲಿ ಯಾರು ಬ್ಯಾಟಿಂಗ್ ಮಾಡ್ತಾರೊ ಅವರು ಜವಾಬ್ದಾರಿಯಿಂದ ಆಡಬೇಕು. ಅವರು ಕೊನೆಯ ವರೆಗೆ ಕ್ರೀಸ್​ನಲ್ಲಿ ಇರಬೇಕು. ಕೆಲ ಎದುರಾಳಿ ತಂಡಗಳು ಆ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಅವರನ್ನು ನೋಡಿದಾಗ ನಮ್ಮಲ್ಲಿ ಹಾಗಿಲ್ಲವಲ್ಲ ಎಂದು ನೋವಾಗುತ್ತದೆ. ಓರ್ವ ಬ್ಯಾಟ್ಸ್​ಮನ್​ ದೊಡ್ಡ ಇನ್ನಿಂಗ್ಸ್ ಆಡುವುದು ಬಹುಮುಖ್ಯ,” ಎಂದು ತಂಡದ ಬ್ಯಾಟರ್​ಗಳೇ ಸೋಲಿಗೆ ಕಾರಣ ಎಂದಿದ್ದಾರೆ.

ಮಾತು ಮುಂದುವರೆಸಿದ ಅವರು “ನಾವು ಈ ಟೂರ್ನಮೆಂಟ್​ನಲ್ಲಿ ಹೇಗೆ ಸೋಲು ಕಂಡೆವು ಎಂದು ಎಲ್ಲರೂ ಚರ್ಚೆ ನಡೆಸುತ್ತಾರೆ. ನಾವು ಸೆಟಲ್ ಆದ ತಂಡವನ್ನು ಹೊಂದಿದ್ದೇವೆ ಮತ್ತು ಮಧ್ಯದಲ್ಲಿರುವ ಆಟಗಾರರಿಗೆ ನ್ಯಾಯಯುತ ಅವಕಾಶ ನೀಡುವುದನ್ನು ಖಚಿತಪಡಿಸಿಕೊಳ್ಳಬೇಕು. ಅವರು ದೇಶಕ್ಕಾಗಿ ಆಡುವಾಗ ಅವರ ಪಾತ್ರ ಬೇರೆಯಾಗಿರುತ್ತದೆ. ಇಲ್ಲಿ ಅದಕ್ಕಿಂತಲು ಮುಖ್ಯವಾಗಿ ಕೊಡುಗೆ ನೀಡಬೇಕು. ಉತ್ತಮ ಕಾಂಬಿನೇಷನ್​ನಲ್ಲಿ ಆಡಬೇಕು ಎಂಬ ಕಾರಣಕ್ಕೆ ನಾವು ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡಲು ಮುಂದಾಗಲಿಲ್ಲ. ಆದರೆ, ಪಂದ್ಯವನ್ನು ಸೋತಾಗ ಇದರ ಬಗ್ಗೆ ಚರ್ಚಿಸಬೇಕಿದೆ. ಒಬ್ಬ ಆಟಗಾರನಿಗೆ ತನ್ನ ಸಾಮರ್ಥ್ಯ ಸಾಭೀತು ಪಡಿಸಲು ನಾನು ಸಾಕಷ್ಟು ಅವಕಾಶ ನೀಡುತ್ತೇನೆ. ನಾವು ಅಂದುಕೊಂಡ ರೀತಿಯಲ್ಲಿ ಈ ಬಾರಿ ಟೂರ್ನಿ ಸಾಗಲಿಲ್ಲ. ಆದರೆ, ಕೆಲವು ಬಾರಿ ಹೀಗೆ ಆಗುತ್ತದೆ,” ಎಂಬುದು ರೋಹಿತ್ ಮಾತು.

ಗೆದ್ದ ತಂಡದ ನಾಯಕ ಹಾಗೂ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ ಕೆಎಲ್ ರಾಹುಲ್ ಮಾತನಾಡಿ, “ನಾನು ಸಂದರ್ಭಕ್ಕೆ ತಕ್ಕಂತೆ ಆಡಲು ಬಯಸಿದೆ. ನಾನು ಬ್ಯಾಟಿಂಗ್ ಮಾಡುವಾಗ ಸಂತಸ ಪಡುತ್ತೇನೆ. ನನಗೆ ನೀಡಿರುವ ಜವಾಬ್ದಾರಿಯಲ್ಲಿ ಎಂಜಾಯ್ ಮಾಡುತ್ತೇನೆ. ಪಿಚ್​ನ ಪರಿಸ್ಥಿತಿ ಅರಿತು ತಂಡಕ್ಕೆ ಏನು ಕೊಡುಗೆ ನೀಡಬೇಕು ಅದನ್ನು ಕೊಟ್ಟೆ. ನಮ್ಮ ಬ್ಯಾಟಿಂಗ್ ವಿಭಾಗ ಕೊನೆಯ ಹಂತದ ವರೆಗಿದೆ. ಹೀಗಾಗಿ ಒತ್ತಡವಿಲ್ಲದೆ ಕೊಂಚ ಆರಾಮವಾಗಿ ಆಡಲು ಸಾಧ್ಯವಾಗುತ್ತದೆ. ಈ ಪಂದ್ಯದ ಪವರ್ ಪ್ಲೇನಲ್ಲಿ ಮಧ್ಯಮ ಓವರ್ ಮತ್ತು ಡೆತ್ ಓವರ್​ನಲ್ಲಿ ನಮ್ಮ ಬೌಲರ್​ಗಳು ಅತ್ಯುತ್ತಮ ಪ್ರದರ್ಶನ ತೋರಿದರು,” ಎಂದು ರಾಹುಲ್ ಹೇಳಿದ್ದಾರೆ.

LSG vs MI: ಎಂಟನೇ ಪಂದ್ಯದಲ್ಲೂ ಸೋತು ಐಪಿಎಲ್ 2022 ಟೂರ್ನಿಯಿಂದ ಹೊರಬಿದ್ದ ಮುಂಬೈ ಇಂಡಿಯನ್ಸ್