AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LSG vs MI: ಎಂಟನೇ ಪಂದ್ಯದಲ್ಲೂ ಸೋತು ಐಪಿಎಲ್ 2022 ಟೂರ್ನಿಯಿಂದ ಹೊರಬಿದ್ದ ಮುಂಬೈ ಇಂಡಿಯನ್ಸ್

Mumbai Indians: ಐಪಿಎಲ್ ಇತಿಹಾಸದಲ್ಲಿಯೇ ಇದುವರೆಗೆ ಯಾವೊಂದು ತಂಡ ನೀಡಿರದ ಅತ್ಯಂತ ಕಳಪೆ ಆಟ ಆಡಿರುವ ರೋಹಿತ್ ಶರ್ಮಾ (Rohit Sharma) ಬಳಗ ಆಡಿರುವ ಎಂಟು ಪಂದ್ಯಗಳ ಪೈಕಿ ಎಂಟರಲ್ಲೂ ಸೋಲು ಕಂಡಿದೆ.

LSG vs MI: ಎಂಟನೇ ಪಂದ್ಯದಲ್ಲೂ ಸೋತು ಐಪಿಎಲ್ 2022 ಟೂರ್ನಿಯಿಂದ ಹೊರಬಿದ್ದ ಮುಂಬೈ ಇಂಡಿಯನ್ಸ್
Mumbai Indians
TV9 Web
| Updated By: Vinay Bhat|

Updated on: Apr 25, 2022 | 7:47 AM

Share

15ನ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಮುಂಬೈ ಇಂಡಿಯನ್ಸ್ ತಂಡ ಮೊದಲ ತಂಡವಾಗಿ ಹೊರಬೀಳುವುದು ಬಹುತೇಕ ಖಚಿತವಾಗಿದೆ. ಐಪಿಎಲ್ ಇತಿಹಾಸದಲ್ಲಿಯೇ ಇದುವರೆಗೆ ಯಾವೊಂದು ತಂಡ ನೀಡಿರದ ಅತ್ಯಂತ ಕಳಪೆ ಆಟ ಆಡಿರುವ ರೋಹಿತ್ ಶರ್ಮಾ (Rohit Sharma) ಬಳಗ ಆಡಿರುವ ಎಂಟು ಪಂದ್ಯಗಳ ಪೈಕಿ ಎಂಟರಲ್ಲೂ ಸೋಲು ಕಂಡಿದೆ. ಭಾನುವಾರ ಲಖನೌ ಸೂಪರ್ ಜೇಂಟ್ಸ್ (LSG vs MI) ವಿರುದ್ಧದ ಪಂದ್ಯದಲ್ಲಿ ಸಾಧಾರಣ ಮೊತ್ತವನ್ನೂ ಬೆನ್ನಟ್ಟಲು ಸಾಧ್ಯವಾಗದೆ ಎಂಐ ಸೋಲುಂಡಿತು. ಈ ಮೂಲಕ ಐಪಿಎಲ್ (IPL) ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಂಡವೊಂದು ಸತತ ಎಂಟು ಪಂದ್ಯಗಳನ್ನು ಸೋತಿರುವ ಕುಖ್ಯಾತಿಗೆ ಮುಂಬೈ ಇಂಡಿಯನ್ಸ್ ಪಾತ್ರವಾಗಿದೆ. ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿರುವ ಲಖನೌ, ಎಂಟು ಪಂದ್ಯಗಳಲ್ಲಿ ಐದನೇ ಗೆಲುವಿನೊಂದಿಗೆ ಒಟ್ಟು 10 ಅಂಕ ಸಂಪಾದಿಸಿದ್ದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಖನೌ ತಂಡದ ಪರ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ 10 ರನ್‌ಗೆ ಜಸ್ಪ್ರೀತ್‌ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಬಳಿಕ ಎರಡನೇ ವಿಕೆಟ್‌ಗೆ ಜೊತೆಯಾದ ನಾಯಕ ಕೆ.ಎಲ್ ರಾಹುಲ್ ಮತ್ತು ಮನೀಶ್ ಪಾಂಡೆಗೆ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದರು. ರಾಹುಲ್ ಅಬ್ಬರದ ಆಟವಾಡಿದರೆ, ಮನೀಶ್ ಪಾಂಡೆ 22 ಎಸೆತಗಳಲ್ಲಿ 22 ರನ್ ಕಲೆಹಾಕಿ ಔಟಾದರು. ಇದರ ಬೆನ್ನಲ್ಲೇ ಲಕ್ನೋ ಎರಡು ಪ್ರಮುಖ ವಿಕೆಟ್ ಲಖನೌ ಕಳೆದುಕೊಂಡಿತು. ಮಾರ್ಕಸ್ ಸ್ಟೋಯ್ನಿಸ್ ಸೊನ್ನೆ ಸುತ್ತಿದರೆ ಕೃನಾಲ್‌ ಪಾಂಡ್ಯ 1 ರನ್‌ಗೆ ನಿರ್ಗಮಿಸಿದರು. ದೀಪಕ್ ಹೂಡ ಆಟ ಕೂಡ 10 ರನ್‌ಗೆ ಮುಕ್ತಾಯವಾಯಿತು.

ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ ಇತ್ತ ಕೆಎಲ್ ರಾಹುಲ್ ನಾಯಕನ ಆಟವಾಡುವ ಮೂಲಕ ಅಬ್ಬರಿಸಿದರು. ಕೇವಲ 61 ಎಸೆತಗಳಲ್ಲಿ ರಾಹುಲ್ ಪ್ರಸಕ್ತ ಸೀಸನ್‌ನಲ್ಲಿ ಎರಡನೇ ಶತಕ ಹಾಗೂ ಒಟ್ಟಾರೆ ಐಪಿಎಲ್‌ನಲ್ಲಿ ನಾಲ್ಕನೇ ಶತಕ ಸಿಡಿಸಿದ ಸಾಧನೆ ಮಾಡಿದರು. ವಿಶೇಷ ಎಂದರೆ ಮುಂಬೈ ಇಂಡಿಯನ್ಸ್ ವಿರುದ್ಧವೇ ರಾಹುಲ್ ಎರಡನೇ ಶತಕ ದಾಖಲಿಸಿದರು. ಕೊನೆಯಲ್ಲಿ ಯುವ ಬ್ಯಾಟರ್ ಆಯುಷ್ ಬದೋನಿ 14 ರನ್‌ಗಳ ಕೊಡುಗೆ ಜೊತೆಗೆ ರಾಹುಲ್ 62 ಎಸೆತಗಳಲ್ಲಿ ಅಜೇಯ 103 ರನ್ ಕಲೆಹಾಕಿದರು. ಇವರ ಖಾತೆಯಿಂದ 12 ಬೌಂಡರಿ ಮತ್ತು 4 ಸಿಕ್ಸರ್ ಬಂದವು. ಸೂಪರ್ ಜೈಂಟ್ಸ್‌ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್ ಕಲೆಹಾಕಿತು.

ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಉತ್ತಮ ಆರಂಭವೊದಗಿಸಿದರು. ಆದರೆ ಇಶಾನ್ ಕಿಶನ್ ಅವರಿಂದ ತಕ್ಕ ಸಾಥ್ ದೊರಕಲಿಲ್ಲ. 20 ಎಸೆತಗಳಲ್ಲಿ 8 ರನ್ ಗಳಿಸಿ ಔಟ್ ಆದರು. ಯುವ ಪ್ರತಿಭಾವಂತ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ (3) ಈ ಭಾರಿ ವಿಫಲರಾದರು. ಇನ್ನೊಂದೆಡೆ ಉತ್ತಮವಾಗಿ ಆಡುತ್ತಿದ್ದ ರೋಹಿತ್ ಆಟಕ್ಕೆ ಪಾಂಡ್ಯ ವಿರಾಮ ಹಾಕಿದರು. 31 ಎಸೆತಗಳನ್ನು ಎದುರಿಸಿದ ರೋಹಿತ್ 39 ರನ್ (5 ಬೌಂಡರಿ, 1 ಸಿಕ್ಸರ್) ಗಳಿಸಿದರು. ಉತ್ತಮ ಲಯದಲ್ಲಿದ್ದ ಸೂರ್ಯಕುಮಾರ್ ಯಾದವ್ (7) ಔಟ್ ಆಗುವುದರೊಂದಿಗೆ ಮುಂಬೈ ಸೋಲಿನ ಭೀತಿಗೊಳಗಾಯಿತು.

ಈ ಹಂತದಲ್ಲಿ ಜೊತೆಗೂಡಿದ ತಿಲಕ್ ವರ್ಮಾ ಹಾಗೂ ಕೀರನ್ ಪೊಲಾರ್ಡ್ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದರು. ಪೊಲಾರ್ಡ್ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರೆ ತಿಲಕ್, ಆಕ್ರಮಣಕಾರಿ ಆಟವಾಡಿದರು. ಅಂತಿಮ 5 ಓವರ್‌ಗಳಲ್ಲಿ ಗೆಲುವಿಗೆ 71 ರನ್ ಬೇಕಾಗಿತ್ತು. ಆದರೆ ತಿಲಕ್ ಹಾಗೂ ಪೊಲಾರ್ಡ್ ವಿಕೆಟ್ ಪತನದೊಂದಿಗೆ ಮುಂಬೈ ಸೋಲಿಗೆ ಶರಣಾಯಿತು. ತಿಲಕ್ 38 (27 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ಪೊಲಾರ್ಡ್ 19 ರನ್ ಗಳಿಸಿದರು. ಲಖನೌ ಪರ ಕೃನಾಲ್ ಪಾಂಡ್ಯ ಮೂರು ವಿಕೆಟ್ ಕಬಳಿಸಿದರು. ಲಖನೌ 36 ರನ್​ಗಳ ಭರ್ಜರಿ ಗೆಲುವು ಸಾಧಿಸಿತು. ಕೆಎಲ್ ರಾಹುಲ್ ಪಂದ್ಯಶ್ರೇಷ್ಠ ಬಾಜಿಕೊಂಡರು.

PBKS vs CSK Live Streaming: ಚೆನ್ನೈ-ಪಂಜಾಬ್ ಮುಖಾಮುಖಿಯಲ್ಲಿ ಗೆಲುವು ಯಾರಿಗೆ? ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ