ಐಸಿಸಿ ಟಿ20 ವಿಶ್ವಕಪ್ 2022 ರಲ್ಲಿ (T20 World Cup) ಹ್ಯಾಟ್ರಿಕ್ ಗೆಲುವು ಸಾಧಿಸಲು ವಿಫಲವಾದ ಭಾರತ ಇದೀಗ ಮುಂದಿನ ಪಂದ್ಯಕ್ಕೆ ಸಜ್ಜಾಗುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಪರ್ತ್ ಸ್ಟೇಡಿಯಂನಲ್ಲಿ ಸೋಲು ಕಂಡ ಬಳಿಕ ಇದೀಗ ಬಾಂಗ್ಲಾದೇಶ (India vs Bangladesh) ವಿರುದ್ಧದ ಗೆಲ್ಲಲೇ ಬೇಕಾದ ಪಂದ್ಯಕ್ಕೆ ಅಡಿಲೇಡ್ಗೆ ಬಂದಿದೆ. ಟೀಮ್ ಇಂಡಿಯಾ ಆಟಗಾರರು ವಿಮಾನದ ಮೂಲಕ ಅಡಿಲೇಡ್ಗೆ (Adelaide) ತಲುಪಿದ ವಿಡಿಯೋವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಅಡಿಲೇಡ್ ಹೋಟೆಲ್ಗೆ ತೆರಳುವ ಸಂದರ್ಭ ಮಳೆರಾಯ ಕೂಡ ಆಗಮಿಸಿದ. ಕಳೆದ ಕೆಲವು ದಿನಗಳಿಂದ ಅಡಿಲೇಡ್ನಲ್ಲಿ ಜೋರಾಗಿ ಮಳೆ ಸುರಿಯುತ್ತಿದೆ. ಭಾರತ- ಬಾಂಗ್ಲಾದೇಶ ಪಂದ್ಯಕ್ಕೆ ಕೂಡ ವರುಣ ಅಡ್ಡಿಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಇದು ನವೆಂಬರ್ 2 ರಂದು ಅಡಿಲೇಡ್ನ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1:30ಕ್ಕೆ ಶುರುವಾಗಲಿದೆ. ಸೋಮವಾರ ದೀರ್ಘ ಪ್ರಯಾಣದ ಬಳಿಕ ಅಡಿಲೇಡ್ಗೆ ತಲುಪಿದ ಟೀಮ್ ಇಂಡಿಯಾ ಆಟಗಾರರು ಸಂಪೂರ್ಣ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಬ್ಯಾಟಿಂಗ್ ಪ್ರಿಯರ ನೆಚ್ಚಿನ ಪಿಚ್ ಆಗಿರುವ ಅಡಿಲೇಡ್ನಲ್ಲಿ ಮಂಗಳವಾರ ಅಭ್ಯಾಸ ಸೆಷನ್ ಏರ್ಪಡಿಸಲಾಗಿದೆ. ಆದರೆ, ನಿರಂತರವಾಗಿ ಸುರಿಯುತ್ತಿರುವ ಮಳೆ ಅಭ್ಯಾಸಕ್ಕೆ ತೊಂದರೆ ಕೊಡುತ್ತಿದೆ.
Touchdown Adelaide ? #TeamIndia | #T20WorldCup pic.twitter.com/l6GalMP0TI
— BCCI (@BCCI) October 31, 2022
ಇಂದು ಮಂಗಳವಾರ ಬೆಳಗಿನ ಜಾವದಿಂದಲೂ ಅಡಿಲೇಡ್ನಲ್ಲಿ ಎಡೆಬಿಡದೆ ಮಳೆ ಆಗುತ್ತಿದೆ. ಆಟಗಾರರಿಗೆ ಹೋಟೆಲ್ನಿಂದ ಹೊರಗಡೆ ಕಾಲಿಡಲು ಸಾಧ್ಯವಾಗುತ್ತಿಲ್ಲ. ಹವಾಮಾನ ವರದಿಯ ಪ್ರಕಾರ ಪಂದ್ಯದ ದಿನ ಬುಧವಾರ ಕೂಡ ಅಡಿಲೇಡ್ನಲ್ಲಿ ಮಳೆ ಸುರಿಯಲಿದೆ. ದ. ಆಫ್ರಿಕಾ ವಿರುದ್ಧದ ಸೋಲಿನ ಮೂಲಕ ಪಾಯಿಂಟ್ ಟೇಬಲ್ನಲ್ಲಿ ಕೂಡ ಭಾರತ ಎರಡನೇ ಸ್ಥಾನಕ್ಕೆ ಕುಸಿದಿದೆ. ಹೀಗಾಗಿ ಮುಂಬರುವ ಪಂದ್ಯಗಳು ರೋಹಿತ್ ಪಡೆಗೆ ಮುಖ್ಯವಾಗಿದೆ. ಸೆಮಿ ಫೈನಲ್ಗೆ ಕಠಿಣ ಪೈಪೋಟಿ ಇರುವ ಕಾರಣ ರನ್ರೇಟ್ ಹಾಗೂ ಗೆಲುವಿನ ಅಂಕ ಟೀಮ್ ಇಂಡಿಯಾ ಮೇಲೆ ಪರಿಣಾಮ ಬೇಳಲಿದೆ. ಮಳೆಯಿಂದ ಪಂದ್ಯ ರದ್ದಾದರೆ ಇದು ಭಾರತಕ್ಕೆ ಹಿನ್ನಡೆ ಆಗುವುದು ಖಚಿತ.
ಭಾನುವಾರ ಪರ್ತ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ನ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ಸೋಲು ಕಂಡಿತು. ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ನೀಡಿದ ಕಳಪೆ ಫೀಲ್ಡಿಂಗ್ ಸೋಲಿಗೆ ಮುಖ್ಯ ಕಾರಣವಾಯಿತು. ನಾಯಕ ರೋಹಿತ್ ಶರ್ಮಾ ಕೂಡ ತಂಡ ಸೋಲಲು ನಾವು ಪ್ರದರ್ಶಿಸಿದ ಕೆಟ್ಟ ಫೀಲ್ಡಿಂಗ್ ಕಾರಣ ಎಂದು ಹೇಳಿದರು. 5 ವಿಕೆಟ್ಗಳ ಗೆಲುವಿನ ಮೂಲಕ ಉತ್ತಮ ರನ್ರೇಟ್ ಹಾಗೂ 2 ಅಂಕ ಸಂಪಾದಿಸಿ ದಕ್ಷಿಣ ಆಫ್ರಿಕಾ ಟೇಬಲ್ ಟಾಪರ್ ಆಗಿದೆ. ಸೆಮಿ ಫೈನಲ್ಗೇರಲು ಮುಂದಿನ ಎರಡು ಪಂದ್ಯ ಟೀಮ್ ಇಂಡಿಯಾಕ್ಕೆ ಬಹುಮುಖ್ಯವಾಗಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರಿಷಭ್ ಪಂತ್(ವಿಕೆಟ್ ಕೀಪರ್), ಹರ್ಷಲ್ ಪಟೇಲ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್.
ಬಾಂಗ್ಲಾದೇಶ ತಂಡ: ನಜ್ಮುಲ್ ಹೊಸೈನ್ ಶಾಂಟೊ, ಸೌಮ್ಯ ಸರ್ಕಾರ್, ಲಿಟ್ಟನ್ ದಾಸ್, ಶಾಕಿಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ನೂರುಲ್ ಹಸನ್ (ವಿಕೆಟ್ ಕೀಪರ್), ಮೊಸದ್ದೆಕ್ ಹೊಸೈನ್, ತಸ್ಕಿನ್ ಅಹ್ಮದ್, ಹಸನ್ ಮಹ್ಮದ್, ಎಬಾಡೋತ್ ಇಸ್ಲಾಮ್, ಇಬಾಡೋತ್ ಇಸ್ಲಾಮಿನ್, ಮುಸ್ತಫಿಜುರ್ ರೆಹಮಾನ್, ಯಾಸಿರ್ ಅಲಿ.
Published On - 9:26 am, Tue, 1 November 22