13 ಬೌಂಡರಿ, 13 ಸಿಕ್ಸರ್, 57 ಎಸೆತಗಳಲ್ಲಿ 162 ರನ್..! ಟಿ20 ಕ್ರಿಕೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ ‘ಬೇಬಿ ಎಬಿ’
Dewald Brevis: ಕೇವಲ 35 ಎಸೆತಗಳಲ್ಲಿ ತಮ್ಮ ಚೊಚ್ಚಲ ಶತಕ ಪೂರೈಸಿದ ಡೆವಾಲ್ಡ್ ಬ್ರೆವಿಸ್ ಬಿರುಸಿನ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಮತ್ತು 13 ಸಿಕ್ಸರ್‌ಗಳು ಸಹ ಸೇರಿದ್ದವು.
‘ಬೇಬಿ ಎಬಿ’ (Baby AB) ಎಂದೇ ಜನಪ್ರಿಯವಾಗಿರುವ ದಕ್ಷಿಣ ಆಫ್ರಿಕಾದ ಯುವ ಬಿರುಸಿನ ಬ್ಯಾಟ್ಸ್‌ಮನ್ ಡೆವಲ್ಡ್ ಬ್ರೆವಿಸ್ (Dewald Brevis) ಬಿರುಸಿನ ಶತಕ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಸದ್ಯ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಟಿ20 ಚಾಲೆಂಜ್‌ನಲ್ಲಿ (CSA T20 Challenge) ಬ್ರೆವಿಸ್, ಕೇವಲ ಬೌಂಡರಿ ಮತ್ತು ಸಿಕ್ಸರ್‌ಗಳಿಂದಲೇ 130 ರನ್ ಕಲೆಹಾಕಿದ್ದಾರೆ. ಟಿ20 ಚಾಲೆಂಜ್‌ನಲ್ಲಿ ಟೈಟಾನ್ಸ್ ಹಾಗೂ ನೈಟ್ಟ್ ನಡುವೆ ನಡೆದ ಈ ಪಂದ್ಯದಲ್ಲಿ ಟೈಟಾನ್ಸ್ ತಂಡದ ಪರ ಆಡುತ್ತಿರುವ ಬ್ರೆವಿಸ್ ನೈಟ್ಸ್ ತಂಡದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ, ಕೇವಲ 57 ಎಸೆತಗಳಲ್ಲಿ 162 ರನ್‌ಗಳ ಬಿರುಗಾಳಿಯ ಇನ್ನಿಂಗ್ಸ್ ಆಡಿದ್ದಾರೆ. ಇದು ಟಿ20 ಕ್ರಿಕೆಟ್‌ನಲ್ಲಿ ಬ್ರೆವಿಸ್ ಅವರ ಮೊದಲ ಶತಕವಾಗಿದ್ದು, ಅವರು ಕೇವಲ 35 ಎಸೆತಗಳಲ್ಲಿ ತಮ್ಮ ಚೊಚ್ಚಲ ಶತಕ ಪೂರೈಸಿದರು. ಅವರ ಬಿರುಸಿನ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಮತ್ತು 13 ಸಿಕ್ಸರ್‌ಗಳು ಸೇರಿದ್ದವು.
ಬೇಬಿ ಎಬಿ ಬಿರುಗಾಳಿ ಬ್ಯಾಟಿಂಗ್ ಆಧಾರದ ಮೇಲೆ ಮೊದಲು ಬ್ಯಾಟ್ ಮಾಡಿದ ಟೈಟಾನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 271 ರನ್ ಗಳಿಸಿತು. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದರ ಮೂರನೇ ವೈಯಕ್ತಿಕ ಸ್ಕೋರ್ ಆಗಿದೆ. ಟಿ20 ಕ್ರಿಕೆಟ್‌ನಲ್ಲಿ ಬ್ರೆವಿಸ್ ಹೊರತಾಗಿ, ಈ ಹಿಂದೆ ಹ್ಯಾಮಿಲ್ಟನ್ ಮಸ್ಕಡ್ಜಾ ಮತ್ತು ಹಜರತುಲ್ಲಾ ಝಜೈ ಕೂಡ 162 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.
Dewald Brevis 35 balls hundred.#CSAT20Challenge#DewaldBrevispic.twitter.com/gAlXLu7lFh
— Cricket Videos? (@Crickket__Video) October 31, 2022
ಮೂರನೇ ಅತ್ಯಧಿಕ ಸ್ಕೋರ್
ಕ್ರಿಸ್ ಗೇಲ್ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಮಾಡಿದ ದಾಖಲೆ ಹೊಂದಿದ್ದು, ಅವರು 2013 ರಲ್ಲಿ ನಡೆದ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಪುಣೆ ವಾರಿಯರ್ಸ್ ತಂಡದ ವಿರುದ್ಧ ಅಜೇಯ 175 ರನ್ ಗಳಿಸಿದ್ದರು. ಈ ಪಟ್ಟಿಯ ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಆರೋನ್ ಫಿಂಚ್, 2018 ರಲ್ಲಿ ಜಿಂಬಾಬ್ವೆ ವಿರುದ್ಧ 76 ಎಸೆತಗಳಲ್ಲಿ 172 ರನ್‌ಗಳ ಬಿಗ್ ಇನ್ನಿಂಗ್ಸ್ ಆಡಿದ್ದಾರೆ.
ಇದನ್ನೂ ಓದಿ: ಟಿ20 ವಿಶ್ವಕಪ್ ಇತಿಹಾಸದಲ್ಲಿ 11 ಬಾರಿ ಬಲಿಷ್ಠ ತಂಡಗಳಿಗೆ ಸೋಲಿನ ಶಾಕ್ ನೀಡಿದ ದುರ್ಬಲ ತಂಡಗಳು..!
ಹೊಗಳಿದ ಡಿವಿಲಿಯರ್ಸ್
ಬ್ರೆವಿಸ್ ಅವರ ಬಿರುಗಾಳಿಯ ಇನ್ನಿಂಗ್ಸ್ ಕಂಡ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್, ತಮ್ಮ ಟ್ವಿಟರ್ ಖಾತೆಯಲ್ಲಿ ಬೇಬಿ ಎಬಿಯನ್ನು ಹೊಗಳಿದ್ದು, ‘ಡೆವಲ್ಡ್ ಬ್ರೆವಿಸ್. ಹೆಚ್ಚಿಗೆ ಹೇಳುವ ಅಗತ್ಯವಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಬ್ರೆವಿಸ್ ಕೂಡ ಡಿವಿಲಿಯರ್ಸ್ ಅವರ ದೊಡ್ಡ ಅಭಿಮಾನಿಯಾಗಿದ್ದು, ತಾನು ಡಿವಿಲಿಯರ್ಸ್ ಅವರ ಬ್ಯಾಟಿಂಗ್‌ನ ವೀಡಿಯೊಗಳನ್ನು ಯಾವಾಗಲೂ ನೋಡುವುದಾಗಿ, ಬಳಿಕ ಬ್ಯಾಟಿಂಗ್‌ಗೆ ಹೋದಾಗ ಅದನ್ನು ನೆನಪಿಸಿಕೊಳ್ಳುವುದಾಗಿ ಈ ಹಿಂದೆ ಹೇಳಿಕೊಂಡಿದ್ದರು.
Dewald Brevis. No need to say more
— AB de Villiers (@ABdeVilliers17) October 31, 2022
ಮುಂಬೈ ಇಂಡಿಯನ್ಸ್ ತಂಡಕ್ಕೆ ಆನೆ ಬಲ
19 ವರ್ಷದ ಬ್ರೆವಿಸ್ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡವಾದ ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದಾರೆ. 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ತಮ್ಮ ಬಲವನ್ನು ಪ್ರದರ್ಶಿಸಿದ ನಂತರ ಮುಂಬೈ ಅವರನ್ನು 3 ಕೋಟಿ ರೂ.ಗೆ ಖರೀದಿಸಿತು. ಅವರನ್ನು ಕ್ರಿಕೆಟ್ ಲೋಕದಲ್ಲಿ ಹೆಚ್ಚಾಗಿ ಡಿವಿಲಿಯರ್ಸ್‌ಗೆ ಹೋಲಿಸಲಾಗುತ್ತದೆ. ಮುಂಬೈ ಪರ ಇದುವರೆಗೆ 7 ಪಂದ್ಯಗಳನ್ನು ಆಡಿರುವ ಬ್ರೆವಿಸ್ 161 ರನ್ ಗಳಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:39 am, Tue, 1 November 22