ಇಂದಿನಿಂದ ಆರಂಭವಾಗುತ್ತಿರುವ ಏಷ್ಯಾಕಪ್‌ಗೆ (Asia Cup 2023) ಟೀಂ ಇಂಡಿಯಾ ಕರ್ನಾಟಕದ ಆಲೂರಿನಲ್ಲಿ ಭರ್ಜರಿ ತಯಾರಿ ನಡೆಸಿತ್ತು. ಐದು ದಿನಗಳ ಕಾಲ ನಡೆದ ಈ ಅಭ್ಯಾಸ ಶಿಬಿರದಿಂದ ಇದೀಗ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಏಷ್ಯಾಕಪ್‌ನಲ್ಲಿ ಆರಂಭಿಕ ಸ್ಥಾನ ಬಿಟ್ಟು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ರೋಹಿತ್ ಶರ್ಮಾ (Rohit Sharma) ಚಿಂತನೆ ನಡೆಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಟೀಂ ಇಂಡಿಯಾದ (Team India) ಅಭ್ಯಾಸ ಶಿಬಿರದಲ್ಲೂ ಈ ಸುದ್ದಿಗೆ ಪುಷ್ಠಿ ಸಿಗುವಂತಹ ಘಟನೆಗಳು ನಡೆದಿರುವುದು ಈ ವದಂತಿಗೆ ಇನ್ನಷ್ಟು ರೆಕ್ಕೆ ಪುಕ್ಕ ಬರುವಂತೆ ಮಾಡಿದೆ. ವಾಸ್ತವವಾಗಿ, ಆಲೂರಿನಲ್ಲಿ ನಡೆದ ಅಭ್ಯಾಸ ಶಿಬಿರದಲ್ಲಿ, ನಾಯಕ ರೋಹಿತ್, ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ (Shreyas Iyer) ಅವರೊಂದಿಗೆ ಬ್ಯಾಟಿಂಗ್ ಅಭ್ಯಾಸ ಮಾಡಿದರು. ಹೀಗಾಗಿ ಹಿಟ್ಮ್ಯಾನ್ ಆರಂಭಿಕ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಟ್ಟು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ವಾಸ್ತವವಾಗಿ ಗಾಯದ ಕಾರಣದಿಂದ ಕೆಎಲ್ ರಾಹುಲ್ ಏಷ್ಯಾಕಪ್‌ನ ಮೊದಲ ಎರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ. ಈ ಬಗ್ಗೆ ಸ್ವತಃ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ರಾಹುಲ್ ನಿರ್ಗಮನ ಎಂದರೆ ಇಶಾನ್ ಕಿಶನ್ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ ಎಂದರ್ಥ. ಆದರೆ ಅವರು ಎಲ್ಲಿ ಬ್ಯಾಟ್ ಮಾಡುತ್ತಾರೆ ಎಂಬುದು ಪ್ರಶ್ನೆ. ಇಶಾನ್ ಕಿಶನ್ ಆರಂಭಿಕರಾಗಿದ್ದು, ಈ ಕ್ರಮಾಂಕದಲ್ಲಿ ಅವರು ಏಕದಿನ ಪಂದ್ಯದಲ್ಲಿ ದ್ವಿಶತಕ ಕೂಡ ಸಿಡಿಸಿದ್ದಾರೆ. ಹಾಗಾಗಿ ಆರಂಭಿಕ ಸ್ಥಾನವನ್ನು ಕಿಶನ್ಗೆ ಬಿಟ್ಟುಕೊಟ್ಟು ನಾಯಕ ರೋಹಿತ್ ಶರ್ಮಾ ಮಧ್ಯಮ ಕ್ರಮಾಂಕಕ್ಕೆ ತೆರಳುವ ಚಿಂತನೆಯಲ್ಲಿದ್ದಾರೆ ಎಂದು ವರದಿಯಾಗಿದೆ.
ಟೀಂ ಇಂಡಿಯಾ ಏಷ್ಯಾಕಪ್ ಗೆಲ್ಲುತ್ತದೆ ಎಂದ ನಾಯಕ ರೋಹಿತ್ ಶರ್ಮಾ; ವಿಡಿಯೋ ನೋಡಿ
ರೋಹಿತ್ ಶರ್ಮಾ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದರೆ, ಟೀಂ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕದಲ್ಲಿ ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ಆರಂಭಿಕರಾಗುವ ಸಾಧತೆಗಳಿವೆ. ವಿರಾಟ್ 3ನೇ ಕ್ರಮಾಂಕದಲ್ಲಿ ಮತ್ತು ರೋಹಿತ್ ಶರ್ಮಾ 4ನೇ ಕ್ರಮಾಂಕದಲ್ಲಿ ಆಡಬಹುದಾಗಿದೆ. ಶ್ರೇಯಸ್ ಅಯ್ಯರ್ 5ನೇ ಸ್ಥಾನದಲ್ಲಿ ಕಣಕ್ಕಿಳಿಯಲ್ಲಿದ್ದಾರೆ.
ರೋಹಿತ್ ಶರ್ಮಾ 4ನೇ ಕ್ರಮಾಂಕದಲ್ಲಿ ಆಡಿದರೆ ಅದು ಟೀಂ ಇಂಡಿಯಾ ಮತ್ತು ಅವರಿಗೆ ಸಾಕಷ್ಟು ಹಿನ್ನಡೆಯನ್ನುಂಟು ಮಾಡಲಿದೆ. ಏಕೆಂದರೆ ಈ ಸ್ಥಾನದಲ್ಲಿ ರೋಹಿತ್ ಅವರ ಬ್ಯಾಟಿಂಗ್ ಸರಾಸರಿ ತುಂಬಾ ಕೆಟ್ಟದಾಗಿದೆ. ಈ ಕ್ರಮಾಂಕದಲ್ಲಿ ರೋಹಿತ್ 31.08ರ ಸರಾಸರಿಯಲ್ಲಿ ಕೇವಲ 715 ರನ್ ಕಲೆ ಹಾಕಿದ್ದಾರೆ. ಈ ಸ್ಥಾನದಲ್ಲಿ ರೋಹಿತ್ ಅವರ ಸ್ಟ್ರೈಕ್ ರೇಟ್ ಕೇವಲ 78 ಆಗಿದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ.