ಕ್ಯಾಚ್ ಬಿಟ್ಟ ಸರ್ಫರಾಝ್ ಖಾನ್ಗೆ ಪಂಚ್ ಕೊಟ್ಟ ರೋಹಿತ್ ಶರ್ಮಾ
Australia vs India: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ನಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಇದೀಗ ಉಭಯ ತಂಡಗಳು ಅಡಿಲೇಡ್ನಲ್ಲಿ ನಡೆಯಲಿರುವ ಎರಡನೇ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಈ ಪಂದ್ಯವು ಡಿಸೆಂಬರ್ 6 ರಿಂದ ಶುರುವಾಗಲಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ದ್ವಿತೀಯ ಟೆಸ್ಟ್ ಪಂದ್ಯವು ಡಿಸೆಂಬರ್ 6 ರಿಂದ ಶುರುವಾಗಲಿದೆ. ಪಿಂಕ್ ಬಾಲ್ನಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಕ್ಯಾನ್ಬೆರಾದಲ್ಲಿ ಅಭ್ಯಾಸ ಪಂದ್ಯವನ್ನಾಡಿತ್ತು. ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ವಿರುದ್ಧ ನಡೆದ ಈ ಅಭ್ಯಾಸ ಪಂದ್ಯದ ವೇಳೆ ಸ್ವಾರಸ್ಯಕರ ಘಟನೆಯೊಂದು ನಡೆದಿತ್ತು.
ಈ ಪಂದ್ಯದಲ್ಲಿ ರಿಷಭ್ ಪಂತ್ ಬದಲಿಗೆ ವಿಕೆಟ್ ಕೀಪರ್ ಆಗಿ ಸರ್ಫರಾಝ್ ಖಾನ್ ಕಾಣಿಸಿಕೊಂಡಿದ್ದರು. ಅತ್ತ ಟೀಮ್ ಇಂಡಿಯಾ ಬೌಲರ್ಗಳು ಸತತ ಬೌನ್ಸರ್ ಎಸೆಯುತ್ತಿದ್ದರೆ, ಇತ್ತ ಸರ್ಫರಾಝ್ ಚೆಂಡು ಹಿಡಿಯಲು ಪರದಾಡಿದರು.
ಅದರಲ್ಲೂ 23ನೇ ಓವರ್‌ನಲ್ಲಿ ಆಲಿವರ್ ಡೇವಿಸ್‌ಗೆ ಹರ್ಷಿತ್ ರಾಣಾ ಬೌನ್ಸರ್ ಎಸೆದರು. ಆದರೆ ಈ ಎಸೆತವನ್ನು ಹಿಡಿಯುವಲ್ಲಿಯೂ ಸರ್ಫರಾಝ್ ಖಾನ್ ವಿಫಲರಾದರು. ಅತ್ತ ವಿಕೆಟ್ ಕೀಪರ್ ಕ್ಯಾಚ್ಗಾಗಿ ಮನವಿ ಸಲ್ಲಿಸಲು ರೆಡಿಯಾಗಿದ್ದ ಟೀಮ್ ಇಂಡಿಯಾ ರೋಹಿತ್ ಶರ್ಮಾ ಸಿಟ್ಟುಕೊಂಡರು.
ಇದಾಗ್ಯೂ ತಮ್ಮ ಕೋಪವನ್ನು ನಿಯಂತ್ರಿಸಿಕೊಂಡ ರೋಹಿತ್ ಶರ್ಮಾ ಸರ್ಫರಾಝ್ ಖಾನ್ ಅವರ ಬೆನ್ನಿಗೊಂದು ಗುದ್ದು ನೀಡಿದರು. ಇದೀಗ ಹಿಟ್ಮ್ಯಾನ್ ಗುದ್ದಾಟದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಈ ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ತಂಡವು ನಿಗದಿತ 46 ಓವರ್ಗಳಲ್ಲಿ 240 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಟೀಮ್ ಇಂಡಿಯಾ 46 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 257 ರನ್ ಕಲೆಹಾಕಿದೆ. ಈ ಮೂಲಕ ಭಾರತ ತಂಡವು ಈ ಪಂದ್ಯವನ್ನು 6 ವಿಕೆಟ್ಗಳಿಂದ ಗೆದ್ದುಕೊಂಡಿದೆ.