Rohit Sharma’s Test Retirement: ವೃತ್ತಿಜೀವನದ ಕೊನೆಯ ಟೆಸ್ಟ್ ಆಡಲಿದ್ದಾರಾ ನಾಯಕ ರೋಹಿತ್ ಶರ್ಮಾ?

|

Updated on: Dec 30, 2024 | 3:34 PM

Rohit Sharma's Test Retirement: ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಸೋಲಿನ ನಂತರ, ರೋಹಿತ್ ಶರ್ಮಾ ಅವರ ಟೆಸ್ಟ್ ಕ್ರಿಕೆಟ್ ನಿವೃತ್ತಿಯ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಸಿಡ್ನಿ ಟೆಸ್ಟ್‌ನಲ್ಲಿ ಅವರ ಸಂಭಾವ್ಯ ಅಂತಿಮ ಪಂದ್ಯದ ಬಗ್ಗೆ ವರದಿಗಳು ಹರಿದಾಡುತ್ತಿದ್ದು, ಬಿಸಿಸಿಐ ಮತ್ತು ಆಯ್ಕೆಗಾರರು ಈ ವಿಷಯದ ಕುರಿತು ಚರ್ಚಿಸುತ್ತಿದ್ದಾರೆ ಎನ್ನಲಾಗುತ್ತಿದೆ. ರೋಹಿತ್ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಲು ಬಯಸುತ್ತಾರೆ ಎಂದು ಹೇಳಲಾಗಿದೆ, ಆದರೆ ತಂಡದ ಫೈನಲ್‌ಗೆ ಅರ್ಹತೆ ಪಡೆಯುವ ಸಾಧ್ಯತೆ ಕಡಿಮೆಯಿದ್ದು, ಸಿಡ್ನಿ ಟೆಸ್ಟ್ ಅವರ ಕೊನೆಯ ಪಂದ್ಯವಾಗಬಹುದು.

Rohit Sharmas Test Retirement: ವೃತ್ತಿಜೀವನದ ಕೊನೆಯ ಟೆಸ್ಟ್ ಆಡಲಿದ್ದಾರಾ ನಾಯಕ ರೋಹಿತ್ ಶರ್ಮಾ?
ರೋಹಿತ್ ಶರ್ಮಾ
Follow us on

ಮೆಲ್ಬೋರ್ನ್​ನಲ್ಲಿ ನಡೆದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಸೋಲಿನ ಬಳಿಕ ಟೀಂ ಇಂಡಿಯಾ ಪಾಳಯದಿಂದ ಬಿಗ್ ನ್ಯೂಸ್ ಹೊರಬರುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ರೋಹಿತ್ ಶರ್ಮಾ ಶೀಘ್ರದಲ್ಲೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ. ಸಿಡ್ನಿ ಟೆಸ್ಟ್ ಬಳಿಕ ರೋಹಿತ್ ಶರ್ಮಾ ನಿವೃತ್ತಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಜನವರಿ 3 ರಿಂದ ಸಿಡ್ನಿ ಟೆಸ್ಟ್ ಆರಂಭವಾಗಲಿದ್ದು, ಈ ಪಂದ್ಯ ಐದು ದಿನಗಳ ಕಾಲ ಮುಂದುವರಿದರೆ, ಜನವರಿ 7 ರೋಹಿತ್ ಶರ್ಮಾ ಅವರ ಟೆಸ್ಟ್ ವೃತ್ತಿಜೀವನದ ಕೊನೆಯ ದಿನವಾಗಬಹುದು ಎಂದು ಹೇಳಲಾಗುತ್ತಿದೆ.

ಸಿಡ್ನಿಯಲ್ಲಿ ರೋಹಿತ್ ಕೊನೆಯ ಟೆಸ್ಟ್?

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಬಿಸಿಸಿಐ ಮತ್ತು ಆಯ್ಕೆಗಾರರು ರೋಹಿತ್ ಶರ್ಮಾ ನಿವೃತ್ತಿಯ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ. ಆದರೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಯ್ಕೆಗಾರರ ​​ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ರೋಹಿತ್ ಶರ್ಮಾ ವಾಸ್ತವವಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡಲು ಬಯಸುತ್ತಾರೆ. ಒಂದು ವೇಳೆ ಟೀಂ ಇಂಡಿಯಾ ಡಬ್ಲ್ಯುಟಿಸಿ ಫೈನಲ್​ಗೆ ಅರ್ಹತೆ ಪಡೆದರೆ ಆ ಪಂದ್ಯದ ಬಳಿಕ ರೋಹಿತ್ ಶರ್ಮಾ ನಿವೃತ್ತಿ ಘೋಷಿಸುವುದು ಖಚಿತವಾಗಿದೆ. ಆದರೆ ಟೀಂ ಇಂಡಿಯಾ ಫೈನಲ್​ಗೇರುವ ಸಾಧ್ಯತೆ ತೀರ ಕಡಿಮೆ ಇರುವ ಕಾರಣ ಸಿಡ್ನಿ ಟೆಸ್ಟ್ ರೋಹಿತ್ ಅವರ ಕೊನೆಯ ಟೆಸ್ಟ್ ಪಂದ್ಯವಾಗಬಹುದು.

ಮೆಲ್ಬೋರ್ನ್ ಟೆಸ್ಟ್ ಸೋಲಿನ ಬೆನ್ನಲ್ಲೇ ರೋಹಿತ್ ಶರ್ಮಾ ಕುರಿತು ಈ ವರದಿ ಬಂದಿರುವುದು ದೊಡ್ಡ ವಿಷಯ. ಮೆಲ್ಬೋರ್ನ್ ಟೆಸ್ಟ್​ನಲ್ಲಿ ಟೀಂ ಇಂಡಿಯಾ 184 ರನ್​ಗಳ ಸೋಲು ಕಂಡಿದೆ. ವಾಸ್ತವವಾಗಿ ಟೀಂ ಇಂಡಿಯಾಕ್ಕೆ ಈ ಟೆಸ್ಟ್ ಅನ್ನು ಡ್ರಾ ಮಾಡಿಕೊಳ್ಳಲು ಸಾಕಷ್ಟು ಅವಕಾಶವಿತ್ತು. ಟೀ ವಿರಾಮದವರೆಗೂ ಭಾರತ ತಂಡ ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಇದಾದ ನಂತರ ರಿಷಬ್ ಪಂತ್ ಕೆಟ್ಟ ಹೊಡೆತವನ್ನು ಆಡಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಾಲಂಗೋಚಿಗಳ ಪೆವಿಲಿಯನ್ ಪರೇಡ್ ಆರಂಭವಾದ ಕಾರಣ ತಂಡ 155 ರನ್​ಗಳಿಗೆ ಆಲೌಟ್ ಆಯಿತು. ತಂಡದ ಪರ ಯಶಸ್ವಿ ಜೈಸ್ವಾಲ್ 84 ರನ್ ಗಳಿಸಿದನ್ನು ಬಿಟ್ಟರೆ ಉಳಿದವರಿಂದ ಅದೇ ಸಪ್ಪೆ ಪ್ರದರ್ಶನ ಕಂಡುಬಂತು.

ರೋಹಿತ್ ಶರ್ಮಾ ಕಳಪೆ ಫಾರ್ಮ್​

ಆಸ್ಟ್ರೇಲಿಯ ಪ್ರವಾಸದಲ್ಲಿ ನಾಯಕ ರೋಹಿತ್ ಶರ್ಮಾಗೆ ಇದುವರೆಗೆ ಒಂದೇ ಒಂದು ಒಳ್ಳೆಯ ಇನ್ನಿಂಗ್ಸ್ ಆಡಲು ಸಾಧ್ಯವಾಗಿಲ್ಲ. ಈ ಸರಣಿಯಲ್ಲಿ 3 ಪಂದ್ಯಗಳನ್ನಾಡಿರುವ ರೋಹಿತ್ ಕೇವಲ 31 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ರೋಹಿತ್ ರನ್ ಕಲೆಹಾಕುವುದಿರಲಿ ಅವರಿಗೆ ಕ್ರೀಸ್‌ನಲ್ಲಿ ಸಮಯ ಕಳೆಯ ಸಾಧ್ಯವಾಗುತ್ತಿಲ್ಲ. ಇದಲ್ಲದೆ ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಅವರು ತೆಗೆದುಕೊಂಡ ಆ ಒಂದು ನಿರ್ಧಾರ ಕೂಡ ಟೀಂ ಇಂಡಿಯಾಕ್ಕೆ ತುಂಬಾ ಭಾರವಾಗಿತ್ತು.

ವಾಸ್ತವವಾಗಿ ಆರಂಭಿಕನಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಕೆಎಲ್ ರಾಹುಲ್ ಅವರನ್ನು ಓಪನಿಂಗ್‌ನಿಂದ ತೆಗೆದುಹಾಕಿ ಆ ಸ್ಥಾನವನ್ನು ರೋಹಿತ್ ಪಡೆದುಕೊಂಡರು. ಆದರೆ ಓಪನಿಂಗ್​ನಲ್ಲೂ ರೋಹಿತ್ ಯಶಸ್ವಿಯಾಗಲಿಲ್ಲ. ಇತ್ತ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಕೆಎಲ್ ರಾಹುಲ್​ಗೆ ಎರಡೂ ಇನ್ನಿಂಗ್ಸ್​ಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ನೋಡಿದರೆ ಅವರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ಸಮಯ ಉಳಿದಿಲ್ಲ ಎಂದೆನಿಸುತ್ತದೆ. ಹಾಗಾಗಿಯೇ ಈಗ ಅವರ ನಿವೃತ್ತಿಯ ಸುದ್ದಿ ಬರಲಾರಂಭಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:30 pm, Mon, 30 December 24