SA vs NZ: ಶತಕ ವ್ಯರ್ಥವಾದರೂ ಏಕದಿನದಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ ಆಫ್ರಿಕಾ ಬ್ಯಾಟರ್

Matthew Breetzke Historic Century: ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ತ್ರಿಕೋನ ಸರಣಿಯ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವು ಸಾಧಿಸಿದೆ. ಆದಾಗ್ಯೂ ದಕ್ಷಿಣ ಆಫ್ರಿಕಾ ಪರ ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಮ್ಯಾಥ್ಯೂ ಬ್ರೀಟ್ಜ್ಕೆ 150 ರನ್ ಬಾರಿಸುವ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಇತಿಹಾಸ ಸೃಷ್ಟಿಸಿದರು. ಇದರೊಂದಿಗೆ ಬ್ರೀಟ್ಜ್ಕೆ 14 ವರ್ಷಗಳ ಹಳೆಯ ದಾಖಲೆಯನ್ನೂ ಮುರಿದರು.

SA vs NZ: ಶತಕ ವ್ಯರ್ಥವಾದರೂ ಏಕದಿನದಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ ಆಫ್ರಿಕಾ ಬ್ಯಾಟರ್
Matthew Breetzke

Updated on: Feb 10, 2025 | 8:54 PM

ಪಾಕಿಸ್ತಾನದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯಲ್ಲಿ ಇಂದು ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಪ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಲಾಹೋರ್‌ನಲ್ಲಿ ನಡೆದ ಈ ಬಿಗ್ ಸ್ಕೋರಿಂಗ್ ಮ್ಯಾಚ್​ನಲ್ಲಿ ನ್ಯೂಜಿಲೆಂಡ್ ತಂಡ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 304 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ 8 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಕಿವೀಸ್ ಪರ ಕೇನ್ ವಿಲಿಯಮ್ಸನ್ ಗೆಲುವಿನ ಶತಕ ಸಿಡಿಸಿದರೆ, ಇತ್ತ ದಕ್ಷಿಣ ಆಫ್ರಿಕಾ 304 ರನ್​ಗಳ ಬೃಹತ್ ಮೊತ್ತ ಕಲೆಹಾಕುವಲ್ಲಿ ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಮ್ಯಾಥ್ಯೂ ಬ್ರೀಟ್ಜ್ಕೆ ಅವರ ಸ್ಫೋಟಕ ಶತಕ ಪ್ರಮುಖ ಪಾತ್ರವಹಿಸಿತು. ಆದಾಗ್ಯೂ ಮ್ಯಾಥ್ಯೂ ಅವರ ಶತಕವನ್ನು ಸ್ಮರಣೀಯಗೊಳಿಸಲು ಆಫ್ರಿಕಾ ತಂಡಕ್ಕೆ ಸಾಧ್ಯವಾಗಲಿಲ್ಲ. ಆದರೆ ಮ್ಯಾಥ್ಯೂ ಮಾತ್ರ ತಮ್ಮ ಚೊಚ್ಚಲ ಪಂದ್ಯದಲ್ಲಿ 150 ರನ್ ಕಲೆಹಾಕಿ ಏಕದಿನ ಕ್ರಿಕೆಟ್​ನಲ್ಲಿ ಇತಿಹಾಸ ಸೃಷ್ಟಿಸಿದರು.

150 ರನ್‌ಗಳ ಇನ್ನಿಂಗ್ಸ್ ಆಡಿದ ಮ್ಯಾಥ್ಯೂ

ತಮ್ಮ ವೃತ್ತಿಜೀವನದ ಮೊದಲ ಏಕದಿನ ಪಂದ್ಯವನ್ನಾಡಿದ ಮ್ಯಾಥ್ಯೂ ಬ್ರೀಟ್ಜ್ಕೆ 128 ಎಸೆತಗಳಲ್ಲಿ ಶತಕ ಪೂರೈಸಿದರು. ಅಂತಿಮವಾಗಿ ತಮ್ಮ ಇನ್ನಿಂಗ್ಸ್​ನಲ್ಲಿ 148 ಎಸೆತಗಳನ್ನು ಎದುರಿಸದ ಮ್ಯಾಥ್ಯೂ, 150 ರನ್‌ಗಳ ಇನ್ನಿಂಗ್ಸ್ ಆಡಿದರು. ಮ್ಯಾಥ್ಯೂ ಬ್ರೀಟ್ಜ್ಕೆ ಈ ಶತಕದೊಂದಿಗೆ ತಮ್ಮ ಏಕದಿನ ವೃತ್ತಿಜೀವನದ ಮೊದಲ ಪಂದ್ಯದಲ್ಲೇ ವಿದೇಶದಲ್ಲಿ ಶತಕ ಬಾರಿಸಿದ ಮೊದಲ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಎಂಬ ದಾಖಲೆ ಬರೆದರು. ಇಷ್ಟೇ ಅಲ್ಲ, ಪಾಕಿಸ್ತಾನದಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿದ ಮೊದಲ ದಕ್ಷಿಣ ಆಫ್ರಿಕಾದ ಆಟಗಾರ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು.

ವಿಶ್ವದಾಖಲೆ ಬರೆದ ಮ್ಯಾಥ್ಯೂ

ಇದು ಮಾತ್ರವಲ್ಲದೆ ಮ್ಯಾಥ್ಯೂ ಬ್ರೀಟ್ಜ್ಕೆ ತಮ್ಮ ಶತಕದ ಇನ್ನಿಂಗ್ಸ್‌ ಮೂಲಕ 14 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ ಅತಿ ದೊಡ್ಡ ಇನ್ನಿಂಗ್ಸ್ ಆಡಿದ ದಕ್ಷಿಣ ಆಫ್ರಿಕಾದ ಮೊದಲ ಆಟಗಾರ ಹಾಗೂ ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಇತಿಹಾಸವನ್ನು ಸೃಷ್ಟಿಸಿದರು. ಈ ಹಿಂದೆ ಈ ದಾಖಲೆ ವೆಸ್ಟ್ ಇಂಡೀಸ್​ನ ಡೆಸ್ಮಂಡ್ ಹೇನ್ಸ್ ಅವರ ಹೆಸರಿನಲ್ಲಿತ್ತು. ಅವರು 1978 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಚೊಚ್ಚಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಪರ 148 ರನ್ ಕಲೆಹಾಕಿದ್ದರು.

ಮ್ಯಾಥ್ಯೂ ಬ್ರೀಟ್ಜ್ಕೆ ಶತಕ ವ್ಯರ್ಥ

ನ್ಯೂಜಿಲೆಂಡ್ ವಿರುದ್ಧ ಮ್ಯಾಥ್ಯೂ ಬ್ರೀಟ್ಜ್ಕೆ ನಿಧಾನಗತಿಯ ಆರಂಭ ಪಡೆದರು. ಟೆಂಬಾ ಬವುಮಾ ಔಟಾದ ನಂತರ ಅವರು ಜೇಸನ್ ಸ್ಮಿತ್ ಜೊತೆ ಅರ್ಧಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು. ಹೀಗಾಗಿ ತಮ್ಮ ಅರ್ಧಶತಕ ಪೂರೈಸಲು 68 ಎಸೆತಗಳನ್ನು ತೆಗೆದುಕೊಂಡ ಮ್ಯಾಥ್ಯೂ ಇದಾದ ನಂತರ ತಮ್ಮ ಇನ್ನಿಂಗ್ಸ್​ಗೆ ವೇಗ ನೀಡಿ 2 ಸಿಕ್ಸರ್‌ ಮತ್ತು 6 ಬೌಂಡರಿಗಳ ಸಹಾಯದಿಂದ ಶತಕ ಪೂರೈಸಿದರು. ಆದಾಗ್ಯೂ ಮ್ಯಾಥ್ಯೂ ಬ್ರೀಟ್ಜ್ಕೆ ಅವರ ಶತಕ ಆಫ್ರಿಕಾ ತಂಡಕ್ಕೆ ಗೆಲುವು ತಂದುಕೊಡಲಿಲ್ಲ. ಏಕೆಂದರೆ ಕಿವೀಸ್ ಪರ ಅನುಭವಿ ಬ್ಯಾಟರ್ ಕೇನ್ ವಿಲಿಯಮ್ಸನ್ ಸ್ಫೋಟಕ ಶತಕ ಬಾರಿಸುವುದರೊಂದಿಗೆ ತಂಡವನ್ನು ದಡ ಮುಟ್ಟಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ