SA vs NZ: ಕೇನ್ ವಿಲಿಯಮ್ಸನ್ ಸ್ಫೋಟಕ ಶತಕ; ಆಫ್ರಿಕಾ ವಿರುದ್ಧ ಗೆದ್ದ ನ್ಯೂಜಿಲೆಂಡ್
NZ vs SA 2nd ODI: ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವು ಸಾಧಿಸಿದೆ. ದಕ್ಷಿಣ ಆಫ್ರಿಕಾ 304 ರನ್ ಗಳಿಸಿದರೂ, ಕೇನ್ ವಿಲಿಯಮ್ಸನ್ ಅವರ ಅಜೇಯ 133 ರನ್‌ಗಳ ಶತಕದ ನೆರವಿನಿಂದ ನ್ಯೂಜಿಲೆಂಡ್ ಸುಲಭವಾಗಿ ಜಯದ ನಗೆಬೀರಿತು. ಮ್ಯಾಥ್ಯೂ ಬ್ರೀಟ್ಜ್ಕೆ ತಮ್ಮ ಚೊಚ್ಚಲ ಪಂದ್ಯದಲ್ಲಿ 150 ರನ್ ಗಳಿಸಿದ್ದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.

ಪಾಕಿಸ್ತಾನದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 304 ರನ್ ಕಲೆಹಾಕಿತು. ಆದರೆ ಇದರ ಹೊರತಾಗಿಯೂ, ನ್ಯೂಜಿಲೆಂಡ್ ತಂಡದ ವಿರುದ್ಧ ಆಫ್ರಿಕಾ ತಂಡಕ್ಕೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ನು ನ್ಯೂಜಿಲೆಂಡ್ ತಂಡ 8 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ನ್ಯೂಜಿಲೆಂಡ್ ಪರ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ ಅನುಭವಿ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ ಅಜೇಯ ಶತಕ ಬಾರಿಸಿದರು. ಆದರೆ ದಕ್ಷಿಣ ಆಫ್ರಿಕಾ ಪರ ಮ್ಯಾಥ್ಯೂ ಬ್ರೀಟ್ಜ್ಕೆ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿಯೇ 150 ರನ್ ಬಾರಿಸಿದರಾದರೂ ಅವರ ಶತಕ ವ್ಯರ್ಥವಾಯಿತು.
187 ರನ್‌ಗಳ ಜೊತೆಯಾಟ
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 304 ರನ್ ಕಲೆಹಾಕಿತು. ಹೀಗಾಗಿ 305 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡಕ್ಕೆ ಉತ್ತಮ ಆರಂಭ ಲಭಿಸಿತು. ಆರಂಭಿಕರಾದ ಡೆವೊನ್ ಕಾನ್ವೇ ಮತ್ತು ವಿಲ್ ಯಂಗ್ 50 ರನ್‌ಗಳ ಜೊತೆಯಾಟ ನೀಡಿದರು. ಇದಾದ ನಂತರ ಕೇನ್ ವಿಲಿಯಮ್ಸನ್ ಮತ್ತು ಕಾನ್ವೇ ನಡುವೆ 187 ರನ್‌ಗಳ ದಾಖಲೆಯ ಪಾಲುದಾರಿಕೆ ಮೂಡಿಬಂತು. ಈ ಸಮಯದಲ್ಲಿ ಕಾನ್ವೇ 107 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 97 ರನ್ ಕಲೆಹಾಕಿ ಕೇವಲ 3 ರನ್ಗಳಿಂದ ಶತಕ ವಂಚಿತರಾದರು.
ವಿಲಿಯಮ್ಸನ್ ಶತಕ
ಕಾನ್ವೇ ಶತಕ ವಂಚಿತರಾದರೂ ವಿಲಿಯಮ್ಸನ್ ಮಾತ್ರ ತಮ್ಮ ಶತಕ ಪೂರೈಸುವಲ್ಲಿ ಯಶಸ್ವಿಯಾದರು. ಕೇನ್ ತಮ್ಮ ಇನ್ನಿಂಗ್ಸ್‌ನಲ್ಲಿ 113 ಎಸೆತಗಳನ್ನು ಎದುರಿಸಿ 133 ರನ್‌ಗಳ ತ್ವರಿತ ಇನ್ನಿಂಗ್ಸ್ ಆಡಿದರು. ಈ ದಾಖಲೆಯ ಇನ್ನಿಂಗ್ಸ್‌ನಲ್ಲಿ ಕೇನ್ 13 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಕೇನ್ ಅವರ 14ನೇ ಶತಕವಾಗಿದೆ. ಇದಲ್ಲದೆ ಈ ಶತಕದೊಂದಿಗೆ ಕೇನ್ 7 ಸಾವಿರ ಏಕದಿನ ರನ್‌ಗಳನ್ನು ಸಹ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಕೇನ್, ಅತಿ ವೇಗವಾಗಿ 7 ಸಾವಿರ ಏಕದಿನ ರನ್ ಪೂರೈಸಿದ್ದ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದಿದ್ದಾರೆ. ವಿಲಿಯಮ್ಸನ್ ತಮ್ಮ 159ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರೆ, ಕೊಹ್ಲಿ 161 ಇನ್ನಿಂಗ್ಸ್‌ಗಳಲ್ಲಿ 7 ಸಾವಿರ ಏಕದಿನ ರನ್‌ಗಳನ್ನು ಪೂರ್ಣಗೊಳಿಸಿದ್ದರು.
ಮೊದಲ ಪಂದ್ಯದಲ್ಲೇ ಮ್ಯಾಥ್ಯೂ ಬ್ರೀಟ್ಜ್ಕೆ 150 ರನ್
ದಕ್ಷಿಣ ಆಫ್ರಿಕಾ ಪಂದ್ಯವನ್ನು ಸೋತರೂ, ತಮ್ಮ ಮೊದಲ ಏಕದಿನ ಪಂದ್ಯವನ್ನು ಆಡಿದ ಮ್ಯಾಥ್ಯೂ ಬ್ರೀಟ್ಜ್ಕೆ ಎಲ್ಲರ ಹೃದಯ ಗೆದ್ದರು. ಅವರು 148 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 11 ಬೌಂಡರಿಗಳ ಸಹಾಯದಿಂದ 150 ರನ್ ಕಲೆಹಾಕಿದದರು. ಈ ಮೂಲಕ ಮ್ಯಾಥ್ಯೂ ಚೊಚ್ಚಲ ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ನಿರ್ಮಿಸಿದರು. ಅವರಿಗಿಂತ ಮೊದಲು, ಈ ದಾಖಲೆ 1978 ರಲ್ಲಿ ತಮ್ಮ ಮೊದಲ ಏಕದಿನ ಪಂದ್ಯದಲ್ಲಿ 148 ರನ್ ಗಳಿಸಿದ್ದ ಡೆಸ್ಮಂಡ್ ಹೇನ್ಸ್ ಹೆಸರಿನಲ್ಲಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:34 pm, Mon, 10 February 25