ಚಾಂಪಿಯನ್ಸ್ ಟ್ರೋಫಿ ಆಡ್ತಾರಾ ಬುಮ್ರಾ? 24 ಗಂಟೆಗಳಲ್ಲಿ ಹೊರಬೀಳಲಿದೆ ಅಂತಿಮ ನಿರ್ಧಾರ
Jasprit Bumrah injury update: ಜಸ್ಪ್ರೀತ್ ಬುಮ್ರಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಬಗ್ಗೆ ಇದುವರೆಗೂ ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ. ಇದೀಗ ಬಿಸಿಸಿಐ 24 ಗಂಟೆಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.ಏಕೆಂದರೆ ಫೆಬ್ರವರಿ 11ರೊಳಗೆ ಐಸಿಸಿಗೆ ತಂಡದ ಅಂತಿಮ ಪಟ್ಟಿಯನ್ನು ಬಿಸಿಸಿಐ ಸಲ್ಲಿಸಬೇಕಾಗಿದೆ. ಹೀಗಾಗಿ ಅದರೊಳಗೆ ಬುಮ್ರಾ ಬಗ್ಗೆ ಬಿಸಿಸಿಐ ಮಾಹಿತಿ ನೀಡಲಿದೆ.

ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಇನ್ನ ಕೇವಲ 9 ದಿನಗಳು ಮಾತ್ರ ಬಾಕಿ ಉಳಿದಿವೆ. ಆದಾಗ್ಯೂ ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಈ ಟೂರ್ನಿಯಲ್ಲಿ ಆಡುತ್ತಾರಾ ಅಥವಾ ಇಲ್ಲವಾ ಎಂಬುದು ಇನ್ನೂ ನಿರ್ಧರಿಸಲಾಗಿಲ್ಲ. ವಾಸ್ತವವಾಗಿ ಈ ಐಸಿಸಿ ಟೂರ್ನಿಗಾಗಿ ಬಿಸಿಸಿಐ ಜನವರಿ 18 ರಂದೇ 15 ಸದಸ್ಯರ ತಂಡವನ್ನು ಪ್ರಕಟಿಸಿತ್ತು. ಆ ತಂಡದಲ್ಲಿ ಬುಮ್ರಾಗೂ ಸ್ಥಾನ ನೀಡಲಾಗಿದೆ. ಆದರೆ ಆಸ್ಟ್ರೇಲಿಯಾ ಪ್ರವಾಸದ ಕೊನೆಯ ಪಂದ್ಯದ ವೇಳೆ ಗಾಯಗೊಂಡಿದ್ದ ಜಸ್ಪ್ರೀತ್ ಬುಮ್ರಾ ಅವರ ಚೇತರಿಕೆಯ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಆದರೆ ಸಿಕ್ಕಿರುವ ಮಾಹಿತಿ ಪ್ರಕಾರ ಬಿಸಿಸಿಐ ಶೀಘ್ರದಲ್ಲೇ ಬುಮ್ರಾ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಳ್ಳಲಿದೆ.
24 ಗಂಟೆಗಳಲ್ಲಿ ಅಂತಿಮ ನಿರ್ಧಾರ
ಜಸ್ಪ್ರೀತ್ ಬುಮ್ರಾ ಅವರ ಫಿಟ್ನೆಸ್ ಬಗ್ಗೆ ಅನಿಶ್ಚಿತತೆ ಇರುವುದರಿಂದ ಫೆಬ್ರವರಿ 11 ರಂದು ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರ ಭಾಗವಹಿಸುವಿಕೆಯ ಬಗ್ಗೆ ಬಿಸಿಸಿಐ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವರದಿಯಾಗಿದೆ. ಏಕೆಂದರೆ ಐಸಿಸಿಗೆ ಎಲ್ಲಾ ಮಂಡಳಿಗೂ ತಮ್ಮ ಅಂತಿಮ ತಂಡಗಳ ಪಟ್ಟಿಯನ್ನು ಸಲ್ಲಿಸಲು ಫೆಬ್ರವರಿ 11 ಕೊನೆಯ ದಿನಾಂಕ ಆಗಿದೆ. ಹೀಗಾಗಿ ಅಷ್ಟರೊಳಗೆ ಬಿಸಿಸಿಐ, ಬುಮ್ರಾ ಅವರ ಫಿಟ್ನೆಸ್ ಬಗ್ಗೆ ಖಚಿತ ಮಾಹಿತಿ ನೀಡಲಿದೆ. ವಾಸ್ತವವಾಗಿ ಬುಮ್ರಾ ಇತ್ತೀಚೆಗೆ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಬೆನ್ನು ಸ್ಕ್ಯಾನಿಂಗ್‌ಗೆ ಒಳಗಾಗಿದ್ದರು. ಹೀಗಾಗಿ ಶೀಘ್ರದಲ್ಲೇ ಬಿಸಿಸಿಐನ ವೈದ್ಯಕೀಯ ಸಿಬ್ಬಂದಿ, ಆಯ್ಕೆದಾರರಿಗೆ ಬುಮ್ರಾ ಫಿಟ್ನೆಸ್ ವರದಿಯನ್ನು ಸಲ್ಲಿಸಲ್ಲಿದ್ದಾರೆ. ಆ ನಂತರ ಜಸ್ಪ್ರೀತ್ ಬುಮ್ರಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಇನ್ನು ಚಾಂಪಿಯನ್ಸ್ ಟ್ರೋಫಿ ಮತ್ತು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಘೋಷಿಸುವ ಸಂದರ್ಭದಲ್ಲಿ ಬುಮ್ರಾ ಅವರ ಇಂಜುರಿಯ ಬಗ್ಗೆ ಮಾತನಾಡಿದ್ದ ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್, ‘ಬುಮ್ರಾಗೆ ಐದು ವಾರಗಳ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಅವರು ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಿಗೆ ಲಭ್ಯವಿರುವುದಿಲ್ಲ ಎಂದು ಹೇಳಿದ್ದರು. ಅಂದರೆ ಬುಮ್ರಾ ಈ ಸರಣಿಯ ಕೊನೆಯ ಪಂದ್ಯವನ್ನು ಆಡಬೇಕಾಗಿತ್ತು. ಆದರೆ ಆ ಬಳಿಕ ಬಿಸಿಸಿಐ ನವೀಕರಿಸಿದ ತಂಡವನ್ನು ಘೋಷಿಸಿದಾಗ, ಬುಮ್ರಾ ಅವರ ಹೆಸರನ್ನು ಈ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಅಂದಿನಿಂದ, ಬುಮ್ರಾ ಸಮಯಕ್ಕೆ ಸರಿಯಾಗಿ ಫಿಟ್ ಆಗುತ್ತಾರೋ ಇಲ್ಲವೋ ಎಂಬ ಉದ್ವಿಗ್ನತೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಭಾರತದ ವೇಳಾಪಟ್ಟಿ
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ಜೊತೆಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಟೀಂ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ರೋಹಿತ್ ಪಡೆ ತನ್ನ ಮೊದಲ ಪಂದ್ಯವನ್ನು ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧ, ಇದರ ನಂತರ ಫೆಬ್ರವರಿ 23 ರಂದು ಪಾಕಿಸ್ತಾನವನ್ನು ಎದುರಿಸಲಿದೆ. ನಂತರ ಕೊನೆಯ ಗುಂಪು ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ