
ಭಾರತದಲ್ಲಿ ಐಪಿಎಲ್ (IPL) ನಡೆಯುವಂತೆ ದಕ್ಷಿಣ ಆಫ್ರಿಕಾದಲ್ಲೂ ಎಸ್ಎ20 ಲೀಗ್ ನಡೆಯುತ್ತದೆ. ಈ ಲೀಗ್‌ನ ನಾಲ್ಕನೇ ಆವೃತ್ತಿಯ ಹರಾಜು (SA20 League Auction) ಇದೇ ಸೆಪ್ಟೆಂಬರ್ 9 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ ಒಟ್ಟು 541 ಆಟಗಾರರು ಭಾಗವಹಿಸಲಿದ್ದಾರೆ. ಇದರಲ್ಲಿ ದಕ್ಷಿಣ ಆಫ್ರಿಕಾದಿಂದ 300 ಆಟಗಾರರು ಮತ್ತು 241 ವಿದೇಶಿ ಆಟಗಾರರು ಸೇರಿದ್ದಾರೆ. ಈ ಹರಾಜಿನಲ್ಲಿ ಒಟ್ಟು ಆರು ಫ್ರಾಂಚೈಸಿಗಳು 19 ಸದಸ್ಯರ ತಂಡವನ್ನು ರಚಿಸಲಿವೆ. ಹರಾಜು ಮುಗಿದ ಬಳಿಕ ಈ ಲೀಗ್ ಡಿಸೆಂಬರ್ 26 ರಿಂದ ಪ್ರಾರಂಭವಾಗಲಿದೆ. ಅಚ್ಚರಿಯ ಸಂಗತಿಯೆಂದರೆ ಹರಾಜಿಗೆ ಆಯ್ಕೆಯಾದ ಆಟಗಾರರ ಪಟ್ಟಿಯಲ್ಲಿ ಯಾವುದೇ ಭಾರತೀಯ ಆಟಗಾರನ ಹೆಸರಿಲ್ಲ.
ಈ ಬಾರಿ SA20 ಲೀಗ್‌ಗೆ 800 ಕ್ಕೂ ಹೆಚ್ಚು ಆಟಗಾರರು ನೋಂದಾಯಿಸಿಕೊಂಡಿದ್ದರು. ಅಂತಿಮವಾಗಿ 541 ಆಟಗಾರರನ್ನು ಹರಾಜಿಗೆ ಅಂತಿಮಗೊಳಿಸಲಾಗಿದೆ. ಭಾರತದಿಂದ 13 ಆಟಗಾರರು ಸಹ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಈ 13 ಆಟಗಾರರಲ್ಲಿ ಮಹೇಶ್ ಅಹಿರ್, ಸರುಲ್ ಕನ್ವರ್, ಅನುರೀತ್ ಸಿಂಗ್ ಕಥುರಿಯಾ, ನಿಖಿಲ್ ಜಗ, ಮೊಹಮ್ಮದ್ ಫೈದ್, ಕೆ.ಎಸ್. ನವೀನ್, ಅನ್ಸಾರಿ ಮಾರುಫ್, ಇಮ್ರಾನ್ ಖಾನ್, ವೆಂಕಟೇಶ್ ಗಾಳಿಪೆಲ್ಲಿ, ಅತುಲ್ ಯಾದವ್, ಪಿಯೂಷ್ ಚಾವ್ಲಾ, ಸಿದ್ಧಾರ್ಥ್ ಕೌಲ್ ಮತ್ತು ಅಂಕಿತ್ ರಜಪೂತ್ ಸೇರಿದ್ದರು. ಆದರೆ ಈ ಯಾವುದೇ ಆಟಗಾರರನ್ನು ಹರಾಜಿಗೆ ಆಯ್ಕೆ ಮಾಡಲಾಗಿಲ್ಲ.
ಸೆಪ್ಟೆಂಬರ್ 9 ರಂದು ನಡೆಯುವ ಹರಾಜಿನಲ್ಲಿ ದಕ್ಷಿಣ ಆಫ್ರಿಕಾದ ಟಿ20 ನಾಯಕ ಐಡೆನ್ ಮಾರ್ಕ್ರಾಮ್ ಮೇಲೆ ಎಲ್ಲರ ಕಣ್ಣುಗಳು ಇರುತ್ತವೆ. ಅವರೊಂದಿಗೆ, ದಕ್ಷಿಣ ಆಫ್ರಿಕಾದ ಅನ್ರಿಚ್ ನೋಕಿಯಾ, ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಕೇಶವ್ ಮಹಾರಾಜ್, ತಬ್ರೆಜ್ ಶಮ್ಸಿ, ಒಟ್ನಿಯಲ್ ಬಾರ್ಟ್ಮನ್ ಮತ್ತು ಜೆರಾಲ್ಡ್ ಕೋಟ್ಜೀ ಅವರಂತಹ ಹೆಸರುಗಳು ಸಹ ಹರಾಜಿನ ಭಾಗವಾಗಿವೆ. ವಿದೇಶಿ ಆಟಗಾರರಲ್ಲಿ, ಬಾಂಗ್ಲಾದೇಶದ ಲೆಜೆಂಡರಿ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಅತ್ಯಂತ ದೊಡ್ಡ ಹೆಸರು. ಇಂಗ್ಲೆಂಡ್‌ನ ಲೆಜೆಂಡರಿ ಬೌಲರ್ ಜೇಮ್ಸ್ ಆಂಡರ್ಸನ್ ಕೂಡ ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಅಲೆಕ್ಸ್ ಹೇಲ್ಸ್ ಮತ್ತು ಮೊಯೀನ್ ಅಲಿ ಕೂಡ ಹರಾಜಿನಲ್ಲಿದ್ದಾರೆ.
ಹರಾಜಿನಲ್ಲಿ 541 ಆಟಗಾರರಿದ್ದು, ಒಟ್ಟು 84 ಆಟಗಾರರನ್ನು ಮಾತ್ರ ಖರೀದಿಸಲು ಅವಕಾಶವಿದೆ. ಈ 84 ಆಟಗಾರರಿಗೆ ಒಟ್ಟು 7.37 ಮಿಲಿಯನ್ ಯುಎಸ್ ಡಾಲರ್ (ಸುಮಾರು 65 ಕೋಟಿ ರೂಪಾಯಿ) ಹಣವನ್ನು ವ್ಯಯಿಸಬಹುದಾಗಿದೆ. ಇದರಲ್ಲಿ ಗರಿಷ್ಠ 25 ವಿದೇಶಿ ಆಟಗಾರರನ್ನು ಖರೀದಿಸಬಹುದಾಗಿದೆ. ಪ್ರತಿ ಫ್ರಾಂಚೈಸಿ 19 ಆಟಗಾರರ ತಂಡವನ್ನು ರಚಿಸಬೇಕಾಗುತ್ತದೆ, ಇದರಲ್ಲಿ ಕನಿಷ್ಠ 9 ದಕ್ಷಿಣ ಆಫ್ರಿಕಾದ ಆಟಗಾರರು, ಗರಿಷ್ಠ ಏಳು ವಿದೇಶಿ ಆಟಗಾರರು, ಇಬ್ಬರು 23 ವರ್ಷದೊಳಗಿನ ಸ್ಥಳೀಯ ಆಟಗಾರರು ಮತ್ತು ಒಬ್ಬ ವೈಲ್ಡ್ ಕಾರ್ಡ್ ಆಯ್ಕೆ ಇರುತ್ತದೆ. ವೈಲ್ಡ್ ಕಾರ್ಡ್ ಆಟಗಾರನನ್ನು ಡಿಸೆಂಬರ್ 30 ರೊಳಗೆ ಆಯ್ಕೆ ಮಾಡಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:28 pm, Mon, 1 September 25