ಸಚಿನ್ ತೆಂಡೂಲ್ಕರ್ ಹಂಚಿಕೊಂಡ ಒಂದು ವಿಡಿಯೋ ಪುಟ್ಟ ಹುಡುಗಿಯ ಅದೃಷ್ಟವನ್ನೇ ಬದಲಿಸಿತು..!

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ರಾಜಸ್ಥಾನದ 12 ವರ್ಷದ ಬಾಲಕಿ ಬೌಲಿಂಗ್ ಮಾಡುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋಗೆ ಟೀಮ್ ಇಂಡಿಯಾದ ಮಾಜಿ ವೇಗಿ ಇದಕ್ಕೆ ಮಾಜಿ ವೇಗದ ಬೌಲರ್ ಝಹೀರ್ ಖಾನ್ ಕೂಡ ಪ್ರತಿಕ್ರಿಯಿಸಿದ್ದಾರೆ. ಇದೀಗ ದೇಶದ ದೊಡ್ಡ ಕೈಗಾರಿಕೋದ್ಯಮಿಯೊಬ್ಬರ ಕಂಪನಿ ಪುಟ್ಟ ಬಾಲಕಿಯ ಸಹಾಯಕ್ಕೆ ಮುಂದಾಗಿದೆ.

ಸಚಿನ್ ತೆಂಡೂಲ್ಕರ್ ಹಂಚಿಕೊಂಡ ಒಂದು ವಿಡಿಯೋ ಪುಟ್ಟ ಹುಡುಗಿಯ ಅದೃಷ್ಟವನ್ನೇ ಬದಲಿಸಿತು..!
Sachin Tendulkar - Zaheer Khan

Updated on: Dec 21, 2024 | 2:35 PM

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಯಾವುದೇ ಕ್ರಿಕೆಟಿಗರನ್ನು ಹೊಗಳಿದರೆ ಅದರಲ್ಲಿ ವಿಶೇಷತೆ ಇರಲೇಬೇಕು. ಯಾವುದೇ ಉದಯೋನ್ಮುಖ ಕ್ರಿಕೆಟಿಗನ ಬಗ್ಗೆ ಮಾತನಾಡಿದರೆ, ಎಲ್ಲರೂ ಅವರತ್ತ ಗಮನ ಹರಿಸುತ್ತಾರೆ. ಅವರ ಅದೃಷ್ಟವೂ ಬದಲಾಗುವ ಸಾಧ್ಯತೆ ಕೂಡ ಇರುತ್ತೆ. ಈಗ 12 ವರ್ಷದ ಪುಟ್ಟ ಬಾಲಕಿಗೆ ಅಂತಹದೊಂದು ಅದೃಷ್ಟ ಒಲಿದಿದೆ.

ಈಕೆ ರಾಜಸ್ಥಾನದ 12 ವರ್ಷದ ಬಾಲಕಿ ಸುಶೀಲಾ ಮೀನಾ. ಪ್ರಸ್ತುತ ತನ್ನ ಅತ್ಯುತ್ತಮ ಬೌಲಿಂಗ್ ಆಕ್ಷನ್‌ನಿಂದ ಸುದ್ದಿಯಾಗಿದ್ದಾಳೆ. ಸುದ್ದಿಯಾಗಲು ಮುಖ್ಯ ಕಾರಣ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಈ ವಿಡಿಯೋ.

ಸಚಿನ್ ತೆಂಡೂಲ್ಕರ್ ಸುಶೀಲಾ ಮೀನಾ ಬೌಲಿಂಗ್ ಮಾಡುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಟೀಮ್ ಇಂಡಿಯಾದ ಮಾಜಿ ವೇಗಿ ಝಹೀರ್ ಖಾನ್ ಅವರ ಶೈಲಿಯಲ್ಲಿ ಬೌಲಿಂಗ್ ಮಾಡುತ್ತಿರುವ ಬಾಲಕಿಯನ್ನು ಸಚಿನ್ ಹೊಗಳಿದ್ದಾರೆ.

ಸಚಿನ್ ತೆಂಡೂಲ್ಕರ್ ಹಂಚಿಕೊಂಡ ವಿಡಿಯೋ:

ಇತ್ತ ಈ ವಿಡಿಯೋವನ್ನು ಗಮನಿಸಿದ ಝಹೀರ್ ಖಾನ್ ಕೂಡ ಸುಶೀಲಾ ಮೀನಾ ಬೌಲಿಂಗ್ ಗಮನಿಸಿದ್ದು, ಆಕೆಯ ಬೌಲಿಂಗ್ ತನಗಿಂತ ತುಂಬಾ ಪರಿಣಾಮಕಾರಿಯಾಗಿದೆ. ಅವಳು ತನ್ನ ಚಿಕ್ಕ ವಯಸ್ಸಿನಲ್ಲಿ ತುಂಬಾ ಬಲಶಾಲಿಯಾಗಿ ಕಾಣುತ್ತಿದ್ದಾಳೆ ಎಂದು ಝಹೀರ್ ಖಾನ್ ಹೊಗಳಿದಿದ್ದಾರೆ.

ಈ ಇಬ್ಬರು ಕ್ರಿಕೆಟಿಗರ ಹೊಗಳಿಕೆಯ ಬೆನ್ನಲ್ಲೇ ಈ ವಿಡಿಯೋ ಆದಿತ್ಯ ಬಿರ್ಲಾ ಗ್ರೂಪ್​ ಗಮನ ಸೆಳೆದಿದೆ. ಅಲ್ಲದೆ ಸುಶೀಲಾ ಮೀನಾ ಅವರ ಕ್ರಿಕೆಟ್​ ತರಬೇತಿಗಾಗಿ ಎಲ್ಲಾ ರೀತಿಯ ನೆರವು ನೀಡಲು ಮುಂದಾಗಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಆದಿತ್ಯ ಬಿರ್ಲಾ ಗ್ರೂಪ್, ‘ಫೋರ್ಸ್ ಫಾರ್ ಗುಡ್’ ಯೋಜನೆಯ ಅಡಿಯಲ್ಲಿ, ಸುಶೀಲಾಗೆ ಕ್ರಿಕೆಟ್ ತರಬೇತಿ ನೀಡುತ್ತೇವೆ. ನಾವೆಲ್ಲರೂ ಸುಶೀಲಾ ಅವರಿಗಾಗಿ ಒಂದಾಗೋಣ… ಅವಳು ಮಿಂಚುವಂತೆ ಮಾಡೋಣ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಸುಶೀಲಾ ಮೀನಾ ಅವರ ಕ್ರಿಕೆಟರ್ ಆಗಬೇಕೆಂಬ ಕನಸನ್ನು ನನಸಾಗಿಸಲು ಇದೀಗ ಆದಿತ್ಯ ಬಿರ್ಲಾ ಗ್ರೂಪ್ ಮುಂದಾಗಿದೆ.

ಒಟ್ಟಿನಲ್ಲಿ ಸಚಿನ್ ತೆಂಡೂಲ್ಕರ್ ಹಂಚಿಕೊಂಡ ಒಂದೇ ಒಂದು ವಿಡಿಯೋ ಇದೀಗ 12 ವರ್ಷದ ಪುಟ್ಟ ಬಾಲಕಿ ಸುಶೀಲಾ ಮೀನಾ ಅವರ ಭವಿಷ್ಯಕ್ಕೆ ಹೊಸ ದಾರಿ ತೋರಿಸಿಕೊಟ್ಟಿದೆ.

 

 

 

Published On - 2:35 pm, Sat, 21 December 24