ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಆಟಗಾರ, ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದ ಸಚಿತ್ರಾ ಸೇನಾನಾಯಕೆ (Sachithra Senanayake) ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಇದೀಗ ಫಿಕ್ಸಿಂಗ್ ಆರೋಪ ಎದುರಿಸುತ್ತಿರುವ ಇವರನ್ನು ಕೊಲಂಬೊದ ಸ್ಥಳೀಯ ನ್ಯಾಯಾಲಯ ವಿದೇಶ ಪ್ರವಾಸಕ್ಕೆ ನಿಷೇಧ ಹೇರಿದೆ. 2012 ಮತ್ತು 2016 ರ ನಡುವೆ ಏಕೈಕ ಟೆಸ್ಟ್, 49 ಏಕದಿನ ಮತ್ತು 24 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದ 38 ವರ್ಷದ ಸೇನಾನಾಯಕೆ, 2020 ಲಂಕಾ ಪ್ರೀಮಿಯರ್ ಲೀಗ್‌ನ ಪಂದ್ಯಗಳಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಸಚಿತ್ರಾ ಸೇನಾನಾಯಕೆ ಅವರು ಟೆಲಿಫೋನ್ ಮೂಲಕ ಪಂದ್ಯದ ಬಗ್ಗೆ ಮ್ಯಾಚ್ ಫಿಕ್ಸಿಂಗ್ ಮಾಡಲು ಇಬ್ಬರು ಆಟಗಾರರನ್ನು ಸಂಪರ್ಕಿಸಿದ್ದರು ಎಂಬ ಆರೋಪವಿದೆ. ಹೀಗಾಗಿ ಕೊಲಂಬೊ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮೂರು ತಿಂಗಳ ಅವಧಿಗೆ ಸೇನಾನಾಯಕೆಯ ಮೇಲೆ ಪ್ರಯಾಣ ನಿಷೇಧವನ್ನು ವಿಧಿಸಲು ವಲಸೆಯ ನಿಯಂತ್ರಕ ಜನರಲ್‌ಗೆ ಆದೇಶಿಸಿದೆ.
ನ್ಯಾಯಾಲಯದ ಆದೇಶವನ್ನು ಅಟಾರ್ನಿ ಜನರಲ್ ಇಲಾಖೆ ಪಡೆದುಕೊಂಡಿದೆ. ಮಾಜಿ ಆಫ್ ಸ್ಪಿನ್ನರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಕ್ರೀಡಾ ಸಚಿವಾಲಯದ ವಿಶೇಷ ತನಿಖಾ ಘಟಕವು ಅಟಾರ್ನಿ ಜನರಲ್ ಇಲಾಖೆಗೆ ಸೂಚನೆ ನೀಡಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
Suryakumar Yadav: 50 ಇನಿಂಗ್ಸ್ ಬಳಿಕ ಟಾಪ್-5 ಗೆ ಸೂರ್ಯನ ಎಂಟ್ರಿ..!
ಎಲ್ಲಾ ಮೂರು ಸ್ವರೂಪಗಳಲ್ಲಿ ಶ್ರೀಲಂಕಾ ತಂಡವನ್ನು ಪ್ರತಿನಿಧಿಸುವ ಸಚಿತ್ರಾ ಸೇನಾನಾಯಕೆ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಮೂಲಕವೂ ತಂಡಕ್ಕೆ ಕೊಡುಗೆ ನೀಡಿದ್ದಾರೆ. ಅವರು 2014 ಐಸಿಸಿ ಟ್ವೆಂಟಿ 20 ವಿಶ್ವಕಪ್ ವಿಜೇತ ತಂಡದ ಅವಿಭಾಜ್ಯ ಅಂಗವಾಗಿದ್ದರು. ಶ್ರೀಲಂಕಾದ 150 ನೇ ಏಕದಿನ ಕ್ಯಾಪ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಸಚಿತ್ರಾ ಅವರು ಅಜಂತಾ ಮೆಂಡಿಸ್ ಮತ್ತು ಸಿಕ್ಕುಗೆ ಪ್ರಸನ್ನ ಜೊತೆ ಪ್ರಮುಖ ಸ್ಪಿನ್ನರ್ ಆಗಿ ಕಾಣಿಸಿಕೊಂಡಿದ್ದರು.
ಸಚಿತ್ರಾ ಸೇನಾನಾಯಕೆ 2013ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯರಾಗಿ ಕೂಡ ತಮ್ಮ ಛಾಪು ಮೂಡಿಸಿದ್ದರು. ಇವರು ಬ್ಯಾಟಿಂಗ್ ಮೂಲಕ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗದಿದ್ದರೂ ಆಫ್-ಸ್ಪಿನ್ ಬೌಲಿಂಗ್ ಮೂಲಕ ಚೆನ್ನೈ ತಂಡದ ಪರ ಮಿಂಚಿದ್ದರು. ಧೋನಿ ತಂಡದ ಪರ 8 ಪಂದ್ಯಗಳಲ್ಲಿ 9 ವಿಕೆಟ್‌ಗಳನ್ನು ಕಿತ್ತಿದ್ದರು. 26 ರನ್ ನೀಡಿ 2 ವಿಕೆಟ್ ಪಡೆದಿರುವುದು ಇವರ ಶ್ರೇಷ್ಠ ಸಾಧನೆ ಆಗಿದೆ. ಸಿಎಸ್ಕೆ ತಂಡದಲ್ಲಿ ಇರುವಾಗ, ಕ್ರಿಕೆಟ್ ದಂತಕಥೆ ಮಹೇಂದ್ರ ಸಿಂಗ್ ಧೋನಿಯೊಂದಿಗೆ ಸೇನಾನಾಯಕೆ ಡ್ರೆಸ್ಸಿಂಗ್ ರೂಮ್ ಅನ್ನು ಹಂಚಿಕೊಂಡಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:42 am, Tue, 15 August 23