ಸತತ ಸೋಲುಗಳಿಂದ ಕಂಗೆಟ್ಟಿದ್ದ ಶ್ರೀಲಂಕಾ ಕ್ರಿಕೆಟ್ ತಂಡವನ್ನು ತನ್ನ ಚಾಣಾಕ್ಯ ತರಬೇತಿಯ ಮೂಲಕ ಮತ್ತೆ ಗೆಲುವಿನ ಲಯಕ್ಕೆ ಮರಳಿಸಿದ್ದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯರನ್ನು ಲಂಕಾ ಕ್ರಿಕೆಟ್ ಮಂಡಳಿ, ತಂಡದ ಪೂರ್ಣಾವಧಿಯ ಮುಖ್ಯ ಕೋಚ್ ಆಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಕೆಲವು ತಿಂಗಳ ಹಿಂದಷ್ಟೇ ಹಂಗಾಮಿ ಕೋಚ್ ಆಗಿ ತಂಡ ಸೇರಿಕೊಂಡಿದ್ದ ಜಯಸೂರ್ಯ, ತಂಡದ ಚಿತ್ರಣವನ್ನೇ ಬದಲಿಸಿದ್ದರು. ಇದರ ಫಲವಾಗಿ ಲಂಕಾ ತಂಡ, ಬಲಿಷ್ಠ ಟೀಂ ಇಂಡಿಯಾವನ್ನು ಏಕದಿನ ಸರಣಿಯಲ್ಲಿ ಮಣಿಸಿತ್ತು. ಆ ಬಳಿಕ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಪಂದ್ಯವನ್ನು ಸಹ ಗೆದ್ದುಕೊಂಡಿತ್ತು.
ಇದೀಗ ಪೂರ್ಣಾವಧಿಯ ಮುಖ್ಯ ಕೋಚ್ ಆಗಿ ತಂಡದ ಚುಕ್ಕಾಣಿ ಹಿಡಿದಿರುವ ಸನತ್ ಜಯಸೂರ್ಯ ಅವರ ಅಧಿಕಾರವದಿ ಅಕ್ಟೋಬರ್ 1, 2024 ರಿಂದ ಮಾರ್ಚ್ 31, 2026 ರವರೆಗೆ ಇರಲಿದೆ. ಮೇಲೆ ಹೇಳಿದಂತೆ ಜಯಸೂರ್ಯ ಕೋಚಿಂಗ್ನಲ್ಲಿ ಇತ್ತೀಚೆಗೆ ಶ್ರೀಲಂಕಾ ಕ್ರಿಕೆಟ್ ತಂಡ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತ್ತು. ಇದಲ್ಲದೆ ಜಯಸೂರ್ಯ ಬಂದ ಮೇಲೆ ಶ್ರೀಲಂಕಾ ತಂಡದ ಪ್ರದರ್ಶನ ಸ್ಥಿರವಾಗಿದೆ.
Sri Lanka Cricket wishes to announce the appointment of Sanath Jayasuriya as the head coach of the national team.
The Executive Committee of Sri Lanka Cricket made this decision taking into consideration the team’s good performances in the recent tours against India, England,… pic.twitter.com/IkvAIJgqio
— Sri Lanka Cricket 🇱🇰 (@OfficialSLC) October 7, 2024
ಇದಕ್ಕೆ ಪೂರಕವಾಗಿ ಶ್ರೀಲಂಕಾ ತಂಡ, ಭಾರತವನ್ನು ಏಕದಿನ ಸರಣಿಯಲ್ಲಿ ಸೋಲಿಸಿತ್ತು. ನಂತರ ನಡೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿತ್ತು. ಈಗ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಗೆದ್ದಿದೆ. ಹಾಗಾಗಿ ಇದೀಗ ಸನತ್ ಜಯಸೂರ್ಯ ಶ್ರೀಲಂಕಾದ ಪೂರ್ಣಾವಧಿ ಕೋಚ್ ಆಗಿ ನೇಮಕಗೊಂಡಿದ್ದಾರೆ. ಪೂರ್ಣಾವಧಿ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವ ಜಯಸೂರ್ಯ ಅವರ ಅಧಿಕಾರವದಿ ವೆಸ್ಟ್ ಇಂಡೀಸ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಿಂದ ಆರಂಭವಾಗಲಿದೆ. ಈ ಸರಣಿ ದಂಬುಲ್ಲಾ ಮತ್ತು ಪಲ್ಲೆಕೆಲೆಯಲ್ಲಿ ನಡೆಯಲಿದೆ.
ಜಯಸೂರ್ಯ ಈ ಹಿಂದೆ ಶ್ರೀಲಂಕಾ ಕ್ರಿಕೆಟ್‌ಗೆ ಸಲಹೆಗಾರರಾಗಿದ್ದರು. ಆ ಬಳಿಕ ಕಳೆದ ಜುಲೈನಲ್ಲಿ ಅವರನ್ನು ಮೊದಲ ಬಾರಿಗೆ ಹಂಗಾಮಿ ಮುಖ್ಯ ಕೋಚ್ ಆಗಿ ನೇಮಿಸಲಾಯಿತು. ಕಳೆದ ಕೆಲವು ತಿಂಗಳುಗಳಲ್ಲಿ ಜಯಸೂರ್ಯ ಅವರ ಮಾರ್ಗದರ್ಶನದಲ್ಲಿ, ಶ್ರೀಲಂಕಾ 27 ವರ್ಷಗಳ ನಂತರ ಭಾರತದ ವಿರುದ್ಧ ಮೊದಲ ದ್ವಿಪಕ್ಷೀಯ ಏಕದಿನ ಸರಣಿಯನ್ನು ಗೆದ್ದುಕೊಂಡಿತು. ಅದೇ ಸಮಯದಲ್ಲಿ, 10 ವರ್ಷಗಳಲ್ಲಿ ಮೊದಲ ಬಾರಿಗೆ, ಅವರದ್ದೇ ನೆಲದಲ್ಲಿ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿತ್ತು. ಅಲ್ಲದೆ ಇತ್ತೀಚೆಗೆ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು 2-0 ಅಂತರದಿಂದ ಸೋಲಿಸಿತ್ತು.
1991 ರಿಂದ 2007 ರವರೆಗೆ ಲಂಕಾ ತಂಡದ ಪರ ಆಡಿರುವ ಸನತ್ ಜಯಸೂರ್ಯ, ಈ ಅವಧಿಯಲ್ಲಿ 110 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 40.07 ರ ಸರಾಸರಿಯಲ್ಲಿ 14 ಶತಕಗಳು ಮತ್ತು 31 ಅರ್ಧಶತಕಗಳನ್ನು ಒಳಗೊಂಡಂತೆ 6973 ರನ್ಗಳನ್ನು ಗಳಿಸಿದ್ದಾರೆ. ಹಾಗೆಯೇ 445 ಏಕದಿನ ಪಂದ್ಯಗಳಲ್ಲಿ 28 ಶತಕಗಳು ಮತ್ತು 68 ಅರ್ಧಶತಕಗಳೊಂದಿಗೆ 32.36 ಸರಾಸರಿಯಲ್ಲಿ 13,430 ರನ್ ಕಲೆಹಾಕಿದ್ದರು. 1996ರ ವಿಶ್ವಕಪ್‌ನಲ್ಲಿ ಶ್ರೀಲಂಕಾದ ಗೆಲುವಿನಲ್ಲಿ ಜಯಸೂರ್ಯ ಪ್ರಮುಖ ಪಾತ್ರ ವಹಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:54 pm, Mon, 7 October 24