ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ (Shoaib Malik), ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರೊಂದಿಗೆ ಮೂರನೇ ಮದುವೆಯಾಗುವ ಮೂಲಕ ತಮ್ಮ ಎರಡನೇ ಪತ್ನಿ ಸಾನಿಯಾ ಮಿರ್ಜಾ (Sania Mirza) ಅವರಿಂದ ದೂರವಾಗಿರುವ ಬಗ್ಗೆ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ. ಮೂರನೇ ಮದುವೆಯಾಗಿರುವ ಸಂಗತಿಯನ್ನು ಮಲಿಕ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ. ಆದರೆ ಈ ಫೋಟೋಗಳು ವೈರಲ್ ಆದ ಬಳಿಕ ಶೋಯೆಬ್ ಮಲಿಕ್, ಸಾನಿಯಾ ಮಿರ್ಜಾ ಅವರಿಗೆ ಡಿವೋರ್ಸ್ (divorce) ನೀಡದೆ ಮತ್ತೊಂದು ಮದುವೆಯಾಗಿದ್ದಾರೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಈ ವದಂತಿಗಳಿಗೆ ಉತ್ತರ ಕೊಡುವ ಕೆಲಸವನ್ನು ಸಾನಿಯಾ ಅವರ ಸಹೋದರಿ ಅನಮ್ ಮಿರ್ಜಾ (Anam Mirza) ಮಾಡಿದ್ದಾರೆ.
ವಾಸ್ತವವಾಗಿ ಸಾನಿಯಾ ಹಾಗೂ ಶೋಯೆಬ್ ಮಲಿಕ್ ನಡುವಿನ ವೈಯಕ್ತಿಕ ಬದುಕು ವರ್ಷಗಳ ಹಿಂದೆಯೇ ಹದಗೆಟ್ಟಿತ್ತು. ಹೀಗಾಗಿ ಇವರಿಬ್ಬರು ಪರಸ್ಪರ ಬೇರೆ ಬೇರೆ ವಾಸಿಸಲು ಶುರು ಮಾಡಿದ್ದರು. ಆಗಲೇ ಈ ಇಬ್ಬರ ವೈಯಕ್ತಿಕ ಬದುಕಿನಲ್ಲಿ ಬಿರುಗಾಳಿ ಎದ್ದಿದೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಹಾಗೆಯೇ ಈ ಇಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ದೂರವಾಗಿದ್ದಾರೆ ಎಂತಲೂ ಸುದ್ದಿ ಹರಿದಾಡಿತ್ತು. ಆದರೆ ಈ ಬಗ್ಗೆ ಈ ಇಬ್ಬರೂ ಸಹ ಯಾವುದೇ ಮಾಹಿತಿ ಹೊರಹಾಕಿರಲಿಲ್ಲ. ಹಾಗೆಯೇ ಇಬ್ಬರು ವಿಚ್ಛೇದನ ಪಡೆದಿದ್ದಾರೆ ಎಂಬುದು ಸಹ ಎಲ್ಲಿಯೂ ಅಧಿಕೃತವಾಗಿ ಪ್ರಕಟವಾಗಿರಲಿಲ್ಲ. ಹೀಗಾಗಿ ಈ ಇಬ್ಬರ ಅಭಿಮಾನಿಗಳ ನಡುವೆ ಗಾಳಿ ಸುದ್ದಿ ಹರಿದಾಡಲಾರಂಭಿಸಿತ್ತು. ಆದರೀಗ ಆ ಎಲ್ಲಾ ಸುದ್ದಿಗಳಿಗೆ ಅಂತಿಮ ತೆರೆ ಬಿದ್ದಿದೆ.
ಸಾನಿಯಾ ಮಿರ್ಜಾ- ಶೋಯೆಬ್ ಮಲಿಕ್.. ಈ ಇಬ್ಬರಲ್ಲಿ ಯಾರು ಹೆಚ್ಚು ಸಿರಿವಂತರು?
ಸೋಷಿಯಲ್ ಮೀಡಿಯಾದಲ್ಲಿ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಎದ್ದಿರುವ ಪ್ರಶ್ನೆಗಳ ನಡುವೆ, ಸಾನಿಯಾ ಮಿರ್ಜಾ ಅವರ ಸಹೋದರಿ ಅನಮ್ ಮಿರ್ಜಾ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ವಿಚ್ಛೇದನದ ಬಗ್ಗೆ ಮಾಹಿತಿ ನೀಡಿದ್ದಾರೆ. ಸಾನಿಯಾ ಯಾವಾಗಲೂ ತಮ್ಮ ಜೀವನವನ್ನು ತುಂಬಾ ಖಾಸಗಿಯಾಗಿ ಇಟ್ಟುಕೊಂಡಿದ್ದಾರೆ. ಅವರು ತಮ್ಮ ವೈಯಕ್ತಿಕ ಜೀವನವನ್ನು ಸಾರ್ವಜನಿಕರ ಕಣ್ಣಿನಿಂದ ದೂರವಿಟ್ಟಿದ್ದಾರೆ. ಆದರೆ ಇಂದು ಶೋಯೆಬ್ ಮತ್ತು ಅವಳ ವಿಚ್ಛೇದನದ ಬಗ್ಗೆ ಎಲ್ಲರಿಗೂ ಹೇಳಬೇಕು ಎಂದು ಸಾನಿಯಾ ಭಾವಿಸಿದ್ದಾಳೆ. ಅವರಿಬ್ಬರು ವಿಚ್ಛೇದನ ಪಡೆದು ಕೆಲವು ತಿಂಗಳುಗಳೇ ಕಳೆದಿವೆ. ಶೋಯೆಬ್ ಅವರ ಹೊಸ ಜೀವನಕ್ಕೆ ಸಾನಿಯಾ ಕೂಡ ಶುಭ ಹಾರೈಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ 2010 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇವರಿಬ್ಬರೂ ಹೈದರಾಬಾದ್‌ನಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ವಿವಾಹವಾಗಿದ್ದರು. ಉಭಯ ದೇಶಗಳ ಕ್ರೀಡಾ ಪ್ರೇಮಿಗಳಲ್ಲಿ ಈ ‘ಹೈ ಪ್ರೊಫೈಲ್’ ಜೋಡಿಯ ಬಗ್ಗೆ ಸಾಕಷ್ಟು ಆಸಕ್ತಿ ಇತ್ತು. ಆದರೆ ಅದು ಇವರಿಬ್ಬರ ವಿಚ್ಛೇದನದೊಂದಿಗೆ ಕೊನೆಗೊಂಡಿದೆ. ಮದುವೆಯಾದ 8 ವರ್ಷಗಳ ನಂತರ, ಶೋಯೆಬ್ ಮತ್ತು ಸಾನಿಯಾಗೆ ಇಝಾನ್ ಮಿರ್ಜಾ ಮಲಿಕ್ ಎಂಬ ಒಬ್ಬ ಮಗ ಕೂಡ ಜನಿಸಿದ್ದ. ಇದೆಲ್ಲದರ ನಡುವೆ ಇದೀಗ ಈ ಜೋಡಿ ಬೇರೆ ಬೇರೆಯಾಗಿ ಬದುಕು ನಡೆಸಲು ತೀರ್ಮಾನಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:52 pm, Sun, 21 January 24