ಅರಚುತ್ತಾ, ಕಿರುಚುತ್ತಾ, ಕುಣಿದಾಡುತ್ತಾ ರಿಷಭ್ ಪಂತ್ ರನೌಟ್ ತಪ್ಪಿಸಿದ ಸರ್ಫರಾಝ್ ಖಾನ್

ಅರಚುತ್ತಾ, ಕಿರುಚುತ್ತಾ, ಕುಣಿದಾಡುತ್ತಾ ರಿಷಭ್ ಪಂತ್ ರನೌಟ್ ತಪ್ಪಿಸಿದ ಸರ್ಫರಾಝ್ ಖಾನ್

ಝಾಹಿರ್ ಯೂಸುಫ್
|

Updated on:Oct 19, 2024 | 11:31 PM

India vs New Zealand, 1st Test: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ 46 ರನ್​ಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ನ್ಯೂಝಿಲೆಂಡ್ 402 ರನ್​ ಕಲೆಹಾಕಿದೆ. ಇದೀಗ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡುತ್ತಿದೆ.

ಬೆಂಗಳೂರಿನ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದದ 2ನೇ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಬ್ಯಾಟರ್​ಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಯುವ ದಾಂಡಿಗ ಸರ್ಫರಾಝ್ ಖಾನ್ ಶತಕ ಬಾರಿಸಿದರೆ, ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅರ್ಧಶತಕ ಸಿಡಿಸಿದ್ದಾರೆ. ಉತ್ತಮ ಹೊಂದಾಣಿಕೆ ಪ್ರದರ್ಶಿಸಿದ್ದ ಈ ಜೋಡಿಯನ್ನು ಬೇರ್ಪಡಿಸಲು ನ್ಯೂಝಿಲೆಂಡ್ ತಂಡಕ್ಕೆ ಉತ್ತಮ ಅವಕಾಶ ದೊರೆತಿತ್ತು. ಆದರೆ ಸರ್ಫರಾಝ್ ಖಾನ್ ಅವರ ಕಿರುಚಾಟದಿಂದಾಗಿ ರಿಷಭ್ ಪಂತ್ ರನೌಟ್ ತಪ್ಪಿಸಿಕೊಂಡರು.

ಈ ಪಂದ್ಯದ 56ನೇ ಓವರ್​ನ ಮೊದಲ ಎಸೆತದಲ್ಲಿ ಸರ್ಫರಾಝ್ ಖಾನ್ ಡೀಪ್ ಬ್ಯಾಕ್​ವರ್ಡ್​ನತ್ತ ಬಾರಿಸಿದರು. ಅತ್ತ ಬೌಂಡರಿ ಲೈನ್​ನಲ್ಲಿ ಫೀಲ್ಡರ್ ಇದ್ದ ಕಾರಣ ಸರ್ಫರಾಝ್ ಖಾನ್ ಒಂದು ರನ್​ಗೆ ತೃಪ್ತಿಪಟ್ಟುಕೊಂಡರು. ಆದರೆ ಇದನ್ನು ಗಮನಿಸದ ರಿಷಭ್ ಪಂತ್ 2ನೇ ರನ್​ಗಾಗಿ ಓಡಿದ್ದಾರೆ.

ಆದರೆ ಇತ್ತ ತುದಿಯಿಂದ ಸರ್ಫರಾಝ್ ಖಾನ್ ಬೇಡವೆಂದರೂ, ರಿಷಭ್ ಪಂತ್ ನಾನ್​ ಸ್ಟ್ರೈಕರ್​ನನ್ನು ಗಮನಿಸಲಿಲ್ಲ. ಬದಲಾಗಿ ಚೆಂಡನ್ನು ನೋಡುತ್ತಾ ಓಡುತ್ತಿದ್ದರು. ಇದನ್ನು ಗಮನಿಸಿದ ಸರ್ಫರಾಝ್ ಖಾನ್ ಕಿರುಚುತ್ತಾ ಅರಚಾಡುತ್ತಾ ರಿಷಭ್ ಪಂತ್ ಅವರನ್ನು ತನ್ನತ್ತ ನೋಡುವಂತೆ ಮಾಡಿ ಹಿಂದಕ್ಕೆ ಕಳುಹಿಸುವಲ್ಲಿ ಯಶಸ್ವಿಯಾದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸರ್ಫರಾಝ್ ಖಾನ್ ಕುಣಿದಾಟಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇನ್ನು ಈ ಪಂದ್ಯದ ಬೋಜನಾ ವಿರಾಮದ ವೇಳೆಗೆ ಟೀಮ್ ಇಂಡಿಯಾ 3 ವಿಕೆಟ್ ಕಳೆದುಕೊಂಡು 344 ರನ್ ಕಲೆಹಾಕಿದೆ. ಕ್ರೀಸ್​ನಲ್ಲಿ ಸರ್ಫರಾಝ್ ಖಾನ್ (125) ಹಾಗೂ ರಿಷಭ್ ಪಂತ್ (53) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Published on: Oct 19, 2024 01:33 PM