ಬರೋಬ್ಬರಿ 4300 ಕೋಟಿ ರೂ: ಐಪಿಎಲ್​ಗೆ ಟಕ್ಕರ್ ಕೊಡಲು ಸೌದಿ ಅರೇಬಿಯಾ ಪ್ಲ್ಯಾನ್

|

Updated on: Mar 17, 2025 | 9:04 AM

2034 ರಲ್ಲಿ ಫಿಫಾ ಫುಟ್​ಬಾಲ್ ವಿಶ್ವಕಪ್ ಅನ್ನು ಆಯೋಜಿಸಲು ಸಿದ್ಧವಾಗುತ್ತಿರುವ ಸೌದಿ ಅರೇಬಿಯಾ ಇದೀಗ ಕ್ರಿಕೆಟ್ ಜಗತ್ತಿಗೂ ಕಾಲಿಡಲು ಮುಂದಾಗುತ್ತಿದೆ. ಅದು ಬರೋಬ್ಬರಿ 4300 ಕೋಟಿ ರೂ. ಹೂಡಿಕೆ ಮಾಡುವುದರೊಂದಿಗೆ. ಅಂದರೆ ಇಂಡಿಯನ್ ಪ್ರೀಮಿಯರ್ ಲೀಗ್​ನಂತ ಸೌದಿ ಅರೇಬಿಯಾ ಮತ್ತೊಂದು ಟಿ20 ಲೀಗ್​ ಅನ್ನು ಪರಿಚಯಿಸಲು ಸಜ್ಜಾಗುತ್ತಿದೆ.

ಬರೋಬ್ಬರಿ 4300 ಕೋಟಿ ರೂ: ಐಪಿಎಲ್​ಗೆ ಟಕ್ಕರ್ ಕೊಡಲು ಸೌದಿ ಅರೇಬಿಯಾ ಪ್ಲ್ಯಾನ್
ಸಾಂದರ್ಭಿಕ ಚಿತ್ರ
Follow us on

ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಟಕ್ಕರ್ ಕೊಡಲು ಸೌದಿ ಅರೇಬಿಯಾ ತೆರೆಮರೆಯಲ್ಲೇ ಯೋಜನೆ ರೂಪಿಸುತ್ತಿದೆ. ಇದಕ್ಕಾಗಿ ಆರಂಭಿಕ ರೂಪುರೇಷೆಗಳು ಸಿದ್ಧವಾಗಿದ್ದು, ಇದರ ಅನುಮೋದನೆಗಾಗಿ ಶೀಘ್ರದಲ್ಲೇ ಐಸಿಸಿಗೆ ಯೋಜನೆಯ ವಿವರಗಳನ್ನು ಕಳುಹಿಸಲಾಗುತ್ತದೆ ಎಂದು ವರದಿಯಾಗಿದೆ.

ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿ:

ಹೊಸ ಟಿ20 ಲೀಗ್ ಅನ್ನು ಸೌದಿ ಅರೇಬಿಯಾ ಟೆನಿಸ್ ಟೂರ್ನಿ ಗ್ರ್ಯಾಂಡ್ ಸ್ಲ್ಯಾಮ್​ನಂತೆ ಆಯೋಜಿಸಲು ಯೋಜನೆ ರೂಪಿಸಿದೆ. ಅದರಂತೆ ಎಲ್ಲಾ ತಂಡಗಳು ವರ್ಷದಲ್ಲಿ 4 ವಿಭಿನ್ನ ಸ್ಥಳಗಳಲ್ಲಿ ಕಣಕ್ಕಿಳಿಯಲಿವೆ. ಇದಾದ ನಂತರ ಸೌದಿ ಅರೇಬಿಯಾದಲ್ಲಿ ಫೈನಲ್ ಪಂದ್ಯ ಜರುಗಲಿದೆ.

8 ತಂಡಗಳು:

ಸೌದಿ ಅರೇಬಿಯಾ ಪ್ರಸ್ತುತ ಪಡಿಸಲಿರುವ ಹೊಸ ಟಿ20 ಲೀಗ್​ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈಗಾಗಲೇ ಈ ಟೂರ್ನಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ನಿಂದ ಬಾಹ್ಯ ಬೆಂಬಲ ವ್ಯಕ್ತವಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ವೆಸ್ಟ್ ಇಂಡೀಸ್, ನ್ಯೂಝಿಲೆಂಡ್, ಶ್ರೀಲಂಕಾ ಹಾಗೂ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ಗಳಿಂದ ಸಹ ಈ ಟೂರ್ನಿಗೆ ಬೆಂಬಲ ಸಿಗುವುದು ಖಚಿತ ಎನ್ನಬಹುದು.

4300 ಕೋಟಿ ರೂ:

ನೂತನ ಲೀಗ್​ಗಾಗಿ ಸೌದಿ ಅರೇಬಿಯಾ ಬರೋಬ್ಬರಿ 4300 ಕೋಟಿ ರೂ.ಗಳನ್ನು ಖರ್ಚು ಮಾಡಲಿದೆ. ಇದಕ್ಕಾಗಿ ಸೌದಿ ಅರೇಬಿಯಾದ ಡ್ಯಾನಿ ಟೌನ್‌ಸೆಂಡ್ ನೇತೃತ್ವದ ಎಸ್‌ಆರ್‌ಜೆ ಸ್ಪೋರ್ಟ್ಸ್ ಇನ್ವೆಸ್ಟ್‌ಮೆಂಟ್‌ ಹೂಡಿಕೆ ಮಾಡಲಿದೆ. ಈ ಮೂಲಕ ಸೌದಿ ಅರೇಬಿಯಾ ಕ್ರಿಕೆಟ್​ ಜಗತ್ತಿನಲ್ಲಿ ತನ್ನ ಛಾಪು ಮೂಡಿಸಲು ಮುಂದಾಗುತ್ತಿದೆ.

ಆಸ್ಟ್ರೇಲಿಯನ್ ಮೈಂಡ್:

ಸೌದಿ ಅರೇಬಿಯಾ ಆಯೋಜಿಸಲಿರುವ ಹೊಸ ಟಿ20 ಲೀಗ್​ನ ಹಿಂದಿರುವುದು ಆಸ್ಟ್ರೇಲಿಯಾದ ಕ್ರಿಕೆಟ್ ತಜ್ಞ ನೀಲ್ ಮ್ಯಾಕ್ಸ್‌ವೆಲ್‌. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗನಾಗಿರುವ ನೀಲ್ ಮ್ಯಾಕ್ಸ್‌ವೆಲ್, ಆಸ್ಟ್ರೇಲಿಯನ್ ಕ್ರಿಕೆಟಿಗರ ಸಂಘ ಮತ್ತು ಕ್ರಿಕೆಟ್ NSW ಸೇರಿದಂತೆ ವಿವಿಧ ಕ್ರಿಕೆಟ್ ಮಂಡಳಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇದೀಗ ಸೌದಿ ಅರೇಬಿಯಾ ಲೀಗ್​ಗಾಗಿ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದ್ದಾರೆ.

ಹೊಸ ಲೀಗ್​ನ ಉದ್ದೇಶವೇನು?

ಪ್ರಸ್ತುತ ಕ್ರಿಕೆಟ್ ಅಂಗಳದ ಬಲಿಷ್ಠ ರಾಷ್ಟ್ರಗಳೆಂದರೆ ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್. ಈ ರಾಷ್ಟ್ರಗಳನ್ನು ಹೊರತುಪಡಿಸಿ ಇತರ ಕ್ರಿಕೆಟ್ ಆಡುವ ದೇಶಗಳನ್ನು ಆರ್ಥಿಕವಾಗಿ ಬಲಪಡಿಸಲು ಗುರಿಯನ್ನು ನೂತನ ಲೀಗ್ ಹೊಂದಿದೆ.

ಇದನ್ನೂ ಓದಿ: IPL 2025: 8 ಆಟಗಾರರು ಎಂಟ್ರಿ: RCB ಅಭಿಮಾನಿಗಳಿಗೆ ಗುಡ್​ ನ್ಯೂಸ್

ಈ ಲೀಗ್ ಮೂಲಕ ಹೊಸ ಆದಾಯದ ಮೂಲ ತೆರೆದುಕೊಳ್ಳಲಿದ್ದು, ಹಣಕಾಸಿಗಾಗಿ ಕಷ್ಟಪಡುತ್ತಿರುವ ಮಂಡಳಿಗಳಿಗೆ ಇದರಿಂದ ಸಹಾಯವಾಗಲಿದೆ. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಬಿಗ್ ಬ್ಯಾಷ್ ಲೀಗ್​ಗೆ ಪರ್ಯಾಯಾವಾಗಿ ಮತ್ತೊಂದು ಶ್ರೀಮಂತ ಕ್ರಿಕೆಟ್​ ಟೂರ್ನಿಯನ್ನು ಪರಿಚಯಿಸಲು ಸೌದಿ ಅರೇಬಿಯಾ ಮುಂದಾಗುತ್ತಿದೆ.