World Cup 2025: ವಿಶ್ವಕಪ್ ಫೈನಲ್​ನಲ್ಲಿ ಶಫಾಲಿ ಸಿಡಿಲಬ್ಬರ; ಉತ್ತಮ ಸ್ಥಿತಿಯಲ್ಲಿ ಭಾರತ

Shafali Verma fifty: ನವಿಮುಂಬೈನಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಶಫಾಲಿ ವರ್ಮಾ ಅರ್ಧಶತಕ ಬಾರಿಸಿ ಗಮನ ಸೆಳೆದಿದ್ದಾರೆ. ಸ್ಮೃತಿ ಮಂಧಾನ ಜೊತೆ ಉತ್ತಮ ಆರಂಭ ಒದಗಿಸಿದ ಶಫಾಲಿ, ತಮ್ಮ ಮೂರು ವರ್ಷಗಳ ನಂತರದ ಮೊದಲ ODI ಅರ್ಧಶತಕ ಪೂರೈಸಿದ್ದಾರೆ. ಕಳಪೆ ಫಾರ್ಮ್‌ನಿಂದ ಹೊರಗುಳಿದಿದ್ದ ಶಫಾಲಿ, ಈ ನಿರ್ಣಾಯಕ ಪಂದ್ಯದಲ್ಲಿ ಫಾರ್ಮ್ ಕಂಡುಕೊಂಡಿರುವುದು ಭಾರತಕ್ಕೆ ಭರವಸೆ ಮೂಡಿಸಿದೆ.

World Cup 2025: ವಿಶ್ವಕಪ್ ಫೈನಲ್​ನಲ್ಲಿ ಶಫಾಲಿ ಸಿಡಿಲಬ್ಬರ; ಉತ್ತಮ ಸ್ಥಿತಿಯಲ್ಲಿ ಭಾರತ
Shafali Verma

Updated on: Nov 02, 2025 | 6:45 PM

ನವಿಮುಂಬೈನಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ಮಹಿಳಾ ತಂಡಗಳು ನಡುವಿನ ವಿಶ್ವಕಪ್ ಫೈನಲ್ (Women’s World Cup Final) ಪಂದ್ಯದಲ್ಲಿ ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಅದರಂತೆ ಆರಂಭಿಕರಾದ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ (Shafali Verma) ತಂಡಕ್ಕೆ ಉತ್ತಮ ಆರಂಭವನ್ನು ಒದಗಿಸಿಕೊಟ್ಟಿದ್ದಾರೆ. ಇವರಿಬ್ಬರು ಮೊದಲ ವಿಕೆಟ್​ಗೆ 104 ರನ್​ಗಳ ಜೊತೆಯಾಟ ನಡೆಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಆದಾಗ್ಯೂ ಅರ್ಧಶತಕದಂಚಿನಲ್ಲಿ ಎಡವಿದ ಸ್ಮೃತಿ ಮಂಧಾನ 45 ರನ್ ಬಾರಿಸಿ ಔಟಾದರೆ, ಶಫಾಲಿ ವರ್ಮಾ ಅರ್ಧಶತಕ ಬಾರಿಸಿ ಮುನ್ನಡೆಯುತ್ತಿದ್ದಾರೆ.

49 ಎಸೆತಗಳಲ್ಲಿ ಅರ್ಧಶತಕ

ಪ್ರತೀಕಾ ರಾವಲ್ ಅವರ ಇಂಜುರಿಯಿಂದಾಗಿ ಭಾರತ ವಿಶ್ವಕಪ್ ತಂಡದಲ್ಲಿ ಆಡುವ ಅವಕಾಶ ಪಡೆದಿರುವ ಶಫಾಲಿ, ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಕೇವಲ ಒಂದಂಕಿಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಫಾರ್ಮ್​ ಕಂಡುಕೊಂಡಿರುವ ಶಫಾಲಿ 49 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಮೂರು ವರ್ಷಗಳ ನಂತರ ಏಕದಿನ ಕ್ರಿಕೆಟ್‌ನಲ್ಲಿ ಶೆಫಾಲಿ 50 ರನ್‌ಗಳ ಗಡಿ ದಾಟಿರುವುದು ಇನ್ನಷ್ಟು ವಿಶೇಷವಾಗಿದೆ.

3 ವರ್ಷಗಳ ನಂತರ ಅರ್ಧಶತಕ

ಇದು ಮಾತ್ರವಲ್ಲದೆ ಶಫಾಲಿ ವರ್ಮಾ 2022 ರ ಜುಲೈ ನಂತರ ತಮ್ಮ ಮೊದಲ ಅಂತರರಾಷ್ಟ್ರೀಯ ಅರ್ಧಶತಕವನ್ನು ಪೂರೈಸಿದ್ದಾರೆ. ತಮ್ಮ ಕೊನೆಯ ಅರ್ಧಶತಕ ಬಳಿಕ 13 ಇನ್ನಿಂಗ್ಸ್‌ಗಳನ್ನು ಆಡಿದ್ದ ಶೆಫಾಲಿಗೆ ಒಂದೇ ಒಂದು ಅರ್ಧಶತಕದ ಇನ್ನಿಂಗ್ಸ್ ಆಡಲು ಸಾಧ್ಯವಾಗಿರಲಿಲ್ಲ. ಅಲ್ಲದೆ ತಮ್ಮ ಕಳಪೆ ಫಾರ್ಮ್​ನಿಂದಾಗಿ ಶಫಾಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಏಕದಿನ ತಂಡದಿಂದ ಹೊರಗುಳಿದಿದ್ದರು. ಇದೀಗ ವಿಶ್ವಕಪ್​ನ ನಿರ್ಣಾಯಕ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿರುವ ಶಫಾಲಿ ಬ್ಯಾಟ್ ಶತಕದ ಇನ್ನಿಂಗ್ಸ್ ಆಡಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:41 pm, Sun, 2 November 25