World Cup 2025: ವಿಶ್ವಕಪ್ ಫೈನಲ್‌ನಲ್ಲಿ ಟಾಸ್ ಸೋತ ಟೀಂ ಇಂಡಿಯಾ
2025 Women's World Cup Final: 2025 ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಪ್ರಶಸ್ತಿಗಾಗಿ ಸೆಣಸುತ್ತಿವೆ. ಮಳೆಯಿಂದ ವಿಳಂಬವಾದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಉಭಯ ತಂಡಗಳು ತಮ್ಮ ಮೊದಲ ವಿಶ್ವಕಪ್ ಟ್ರೋಫಿ ಗೆಲ್ಲುವ ತವಕದಲ್ಲಿವೆ. ಭಾರತ ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿಯಲ್ಲಿದೆ.

2025 ರ ಮಹಿಳಾ ಏಕದಿನ ವಿಶ್ವಕಪ್‌ನ ಫೈನಲ್ (Women’s World Cup Final 2025) ಪಂದ್ಯ ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವೆ ನಡೆಯುಯತ್ತಿದೆ. ಉಭಯ ತಂಡಗಳ ನಡುವಿನ ಈ ಪ್ರಶಸ್ತಿ ಹೋರಾಟ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಒಂದೆಡೆ ಟೀಂ ಇಂಡಿಯಾ ಮೂರನೇ ಬಾರಿಗೆ ಫೈನಲ್‌ನಲ್ಲಿ ಆಡುತ್ತಿದ್ದರೆ, ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಫೈನಲ್‌ಗೆ ಅರ್ಹತೆ ಪಡೆದಿದೆ. ಇದರರ್ಥ ಎರಡೂ ತಂಡಗಳು ತಮ್ಮ ಮೊದಲ ಟ್ರೋಫಿಯನ್ನು ಎದುರು ನೋಡುತ್ತಿವೆ. ಲೀಗ್ ಹಂತದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದಾಗ ಟೀಂ ಇಂಡಿಯಾವನ್ನು ಸೋಲಿಸುವಲ್ಲಿ ದಕ್ಷಿಣ ಆಫ್ರಿಕಾ ಯಶಸ್ವಿಯಾಗಿತ್ತು. ಇದೀಗ ಟೀಂ ಇಂಡಿಯಾ ಆ ಸೋಲಿಗೆ ಸೇಡು ತೀರಿಸಿಕೊಳ್ಳುವುದರ ಜೊತೆಗೆ ಪ್ರಶಸ್ತಿ ಎತ್ತಿ ಹಿಡಿಯು ಇರಾದೆಯಲ್ಲಿದೆ.
ಮಳೆಯಿಂದಾಗಿ ಸುಮಾರು ಎರಡು ಗಂಟೆಗಳ ವಿಳಂಬದ ನಂತರ ಫೈನಲ್ ಪಂದ್ಯದ ಟಾಸ್ ನಡೆದಿದೆ. ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿದೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ. ಟಾಸ್ ಜೊತೆಗೆ ಎರಡೂ ತಂಡಗಳ ಪ್ಲೇಯಿಂಗ್ 11 ಕೂಡ ಹೊರಬಿದ್ದದ್ದು, ಉಭಯ ತಂಡಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.
ವಿಶ್ವಕಪ್ ಮುಖಾಮುಖಿ
ವಿಶ್ವಕಪ್‌ನಲ್ಲಿ ಈ ಎರಡೂ ತಂಡಗಳು ಇಲ್ಲಿಯವರೆಗೆ ಆರು ಬಾರಿ ಮುಖಾಮುಖಿಯಾಗಿದ್ದು, ಉಭಯ ತಂಡಗಳು ತಲಾ ಮೂರು ಪಂದ್ಯಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಆದಾಗ್ಯೂ, ಟೀಂ ಇಂಡಿಯಾಕ್ಕೆ ಕಳವಳಕಾರಿ ಅಂಶವೆಂದರೆ ಕೊನೆಯ ಬಾರಿಗೆ 2005 ರಲ್ಲಿ ನಡೆದಿದ್ದ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿತ್ತು. ಅಂದಿನಿಂದ, ದಕ್ಷಿಣ ಆಫ್ರಿಕಾ ಈ ಪಂದ್ಯಾವಳಿಯ ಲೀಗ್ ಹಂತ ಸೇರಿದಂತೆ ಸತತ ಮೂರು ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ಟೀಂ ಇಂಡಿಯಾ 20 ವರ್ಷಗಳ ಸೋಲಿನ ಸರಣಿಯನ್ನು ಮುರಿದು ಆಫ್ರಿಕಾ ವಿರುದ್ಧ ಜಯಗಳಿಸಬೇಕಿದೆ.
ಹೆಡ್ ಟು ಹೆಡ್ ದಾಖಲೆ
ಭಾರತ ಮತ್ತು ದಕ್ಷಿಣ ಆಫ್ರಿಕಾ ಇಲ್ಲಿಯವರೆಗೆ 34 ಏಕದಿನ ಪಂದ್ಯಗಳನ್ನು ಆಡಿವೆ. ಈ ಪೈಕಿ ಭಾರತ 20 ಪಂದ್ಯಗಳನ್ನು ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ 13 ಪಂದ್ಯಗಳನ್ನು ಗೆದ್ದಿದೆ. ಇದಲ್ಲದೆ, ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ.
ಉಭಯ ತಂಡಗಳು
ಭಾರತ: ಶೆಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್‌ಕೀಪರ್), ಅಮಂಜೋತ್ ಕೌರ್, ರಾಧಾ ಯಾದವ್, ಕ್ರಾಂತಿ ಗೌಡ್, ಶ್ರೀ ಚರಣಿ, ರೇಣುಕಾ ಸಿಂಗ್ ಠಾಕೂರ್.
ದಕ್ಷಿಣ ಆಫ್ರಿಕಾ: ಲಾರಾ ವೊಲ್ವಾರ್ಡ್ಟ್ (ನಾಯಕಿ), ತಾಜ್ಮಿನ್ ಬ್ರಿಟ್ಸ್, ಅನ್ನಿಕ್ ಬಾಷ್, ಸುನೆ ಲೂಸ್, ಮರಿಜಾನ್ನೆ ಕಪ್, ಸಿನಾಲೊ ಜಾಫ್ತಾ (ವಿಕೆಟ್ ಕೀಪರ್), ಅನ್ರಿ ಡೆರ್ಕ್ಸೆನ್, ಕ್ಲೋಯ್ ಟ್ರಾಯೆನ್, ನಾಡಿನ್ ಡಿ ಕ್ಲರ್ಕ್, ಅಯಾಬೊಂಗಾ ಖಾಕಾ, ಎನ್ ಮ್ಲಾಬಾ.
