IND vs AUS: ಹೋಬಾರ್ಟ್‌ನಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಟೀಂ ಇಂಡಿಯಾ
India vs Australia T20: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟಿ20 ಸರಣಿಯ 3ನೇ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಹೋಬಾರ್ಟ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 186 ರನ್‌ಗಳ ಗುರಿಯನ್ನು ಸೂರ್ಯಕುಮಾರ್ ಪಡೆ ಯಶಸ್ವಿಯಾಗಿ ಬೆನ್ನಟ್ಟಿ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದು, 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿತ್ತು. ಭಾರತದ ಈ ಗೆಲುವು ಸರಣಿಯಲ್ಲಿ ಮಹತ್ವದ್ದಾಗಿದೆ.

ಹೋಬಾರ್ಟ್‌ನಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯವನ್ನು ಟೀಂ ಇಂಡಿಯಾ 5 ವಿಕೆಟ್‌ಗಳಿಂದ ಗೆದ್ದುಕೊಂಡು ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ. ವಾಸ್ತವವಾಗಿ ಉಭಯ ತಂಡಗಳ ನಡುವಿನ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಆ ಬಳಿಕ ಮೆಲ್ಬೋರ್ನ್ನಲ್ಲಿ ನಡೆದ ಎರಡನೇ ಟಿ20 ಪಂದ್ಯವನ್ನು ಆತಿಥೇಯ ಆಸ್ಟ್ರೇಲಿಯಾ ಗೆದ್ದುಕೊಂಡಿತ್ತು. ಇದೀಗ ಇಂದು ನಡೆದ ಮೂರನೇ ಟಿ20 ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಸೂರ್ಯಕುಮಾರ್ ಪಡೆ ಟಿ20 ಸರಣಿಯಲ್ಲಿ ತನ್ನ ಗೆಲುವಿನ ಖಾತೆ ತೆರೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 186 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಇನ್ನು 9 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ಗಳನ್ನು ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.
ವಿಶ್ವ ದಾಖಲೆ ಬರೆದ ಟೀಂ ಇಂಡಿಯಾ
ಹೋಬಾರ್ಟ್‌ನಲ್ಲಿ ನಡೆದ ಈ ಮೂರನೇ ಟಿ20ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತ ತಂಡ ಇತಿಹಾಸ ಕೂಡ ನಿರ್ಮಿಸಿದೆ. ವಾಸ್ತವವಾಗಿ ಹೋಬಾರ್ಟ್‌ನಲ್ಲಿ ಮೊಟ್ಟ ಮೊದಲ ಟಿ20 ಪಂದ್ಯವನ್ನು ಆಡಿದ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ, ಈ ಮೈದಾನದಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಹೋಬಾರ್ಟ್‌ನಲ್ಲಿ 2010 ರಿಂದ ಟಿ20 ಪಂದ್ಯಗಳನ್ನು ಆಯೋಜಿಸಲಾಗುತ್ತಿದ್ದು, ಈ ಹಿಂದೆ ಈ ಮೈದಾನದಲ್ಲಿ 177 ರನ್ಗಳನ್ನು ಅತ್ಯಂತ ಯಶಸ್ವಿಯಾಗಿ ಚೇಸ್ ಮಾಡಿ ಗೆದ್ದಿದ್ದು, ಇದುವರೆಗಿನ ದಾಖಲೆಯಾಗಿತ್ತು. ಇದೀಗ ಆ ದಾಖಲೆಯನ್ನು ಭಾರತ ತಂಡ ಮುರಿದಿದೆ.
186 ರನ್ ಕಲೆಹಾಕಿದ ಆಸ್ಟ್ರೇಲಿಯಾ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಪರ ಸ್ಫೋಟಕ ಇನ್ನಿಂಗ್ಸ್ ಆಡಿದ ಟಿಮ್ ಡೇವಿಡ್ 38 ಎಸೆತಗಳಲ್ಲಿ 74 ರನ್ ಬಾರಿಸಿದರೆ, ಮಾರ್ಕಸ್ ಸ್ಟೊಯಿನಿಸ್ ಕೂಡ 39 ಎಸೆತಗಳಲ್ಲಿ 64 ರನ್‌ಗಳ ಇನ್ನಿಂಗ್ಸ್ ಆಡಿದರು. ಇವರಿಬ್ಬರ ಈ ಆಟದಿಂದಾಗಿ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 186 ರನ್ ಗಳಿಸಿತು. ಭಾರತ ಪರ ಅದ್ಭುತ ಬೌಲಿಂಗ್ ಮಾಡಿದ ಅರ್ಷದೀಪ್ ಸಿಂಗ್ ತಮ್ಮ 4 ಓವರ್‌ಗಳ ಖೋಟಾದಲ್ಲಿ 35 ರನ್ ನೀಡಿ 3 ಅತ್ಯಧಿಕ ವಿಕೆಟ್ ಪಡೆದರು. ಉಳಿದಂತೆ ವರುಣ್ ಚಕ್ರವರ್ತಿ ಎರಡು ವಿಕೆಟ್ ಪಡೆದರೆ, ಶಿವಂ ದುಬೆ ಒಂದು ವಿಕೆಟ್ ಪಡೆದರು.
ಅಗ್ರಕ್ರಮಾಂಕದಿಂದ ಅಲ್ಪ ಕಾಣಿಕೆ
187 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಅಭಿಷೇಕ್ ಶರ್ಮಾ ಉತ್ತಮ ಆರಂಭ ನೀಡಿದರು. ಆದರೆ ನಾಥನ್ ಎಲ್ಲಿಸ್ ಅವರನ್ನು 25 ರನ್‌ಗಳಿಗೆ ಔಟ್ ಮಾಡುವ ಮೂಲಕ ಅವರ ಇನ್ನಿಂಗ್ಸ್ಗೆ ಅಂತ್ಯ ಹಾಡಿದರು. ಉಪನಾಯಕ ಶುಭ್ಮನ್ ಗಿಲ್ ಕೂಡ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಾಯಕ ಸೂರ್ಯಕುಮಾರ್ ಯಾದವ್ 24 ರನ್‌ಗಳಿಗೆ ಸುಸ್ತಾದರೆ, ತಿಲಕ್ ವರ್ಮಾ ಅವರ ಆಟವು 29 ರನ್‌ಗಳಿಗೆ ಅಂತ್ಯವಾಯಿತು. ಅಕ್ಷರ್ ಪಟೇಲ್ 17 ರನ್‌ಗಳಿಗೆ ಬ್ಯಾಟ್ ಎತ್ತಿಟ್ಟರು.
IND vs AUS: ಟೀಂ ಇಂಡಿಯಾಕ್ಕೆ ಆಘಾತ; ಮೊದಲ 3 ಟಿ20 ಪಂದ್ಯಗಳಿಂದ ಹೊರಬಿದ್ದ ಸ್ಟಾರ್ ಆಲ್‌ರೌಂಡರ್
ಪಂದ್ಯ ಗೆಲ್ಲಿಸಿದ ಸುಂದರ್, ಜಿತೇಶ್
ಆದಾಗ್ಯೂ ಕೊನೆಯಲ್ಲಿ ಪಂದ್ಯ ಗೆಲ್ಲುವ ಇನ್ನಿಂಗ್ಸ್ ಆಡಿದ ವಾಷಿಂಗ್ಟನ್ ಸುಂದರ್ ಕೇವಲ 23 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ ಅಜೇಯ 49 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಅವರಿಗೆ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಕೂಡ 13 ಎಸೆತಗಳಲ್ಲಿ ಅಜೇಯ 22 ರನ್ ಬಾರಿಸಿದರು. ಹೀಗಾಗಿ, ಒಂಬತ್ತು ಎಸೆತಗಳು ಬಾಕಿ ಇರುವಂತೆಯೇ ಭಾರತ ತಂಡ ಗೆಲುವಿನ ದಡ ಮುಟ್ಟಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:15 pm, Sun, 2 November 25
