ಮಹಿಳಾ ಏಷ್ಯಾಕಪ್‌ನ (Women’s Asia Cup 2022) ಸೆಮಿಫೈನಲ್‌ನಲ್ಲಿ ಇಂದು ಭಾರತ ವನಿತಾ ತಂಡ ಹಾಗೂ ಥಾಯ್ಲೆಂಡ್ ವನಿತಾ ತಂಡ ಪರಸ್ಪರ ಎದುರಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ನಿರ್ಣಾಯಕ ಪಂದ್ಯದಲ್ಲಿ ವಿಫಲರಾದರು. ಪರಿಣಾಮ ಥಾಯ್ಲೆಂಡ್ ವಿರುದ್ಧ ಭಾರತ ತಂಡದ ಬ್ಯಾಟಿಂಗ್ ನಿರೀಕ್ಷಿಸಿದಂತೆ ಕಾಣಲಿಲ್ಲ. 20 ಓವರ್‌ಗಳಲ್ಲಿ 150 ರನ್ ಗಳಿಸುವುದು ಕೂಡ ತಂಡಕ್ಕೆ ಕಷ್ಟಕರವಾಯಿತು. ಥಾಯ್ ಬೌಲರ್‌ಗಳು ಭಾರತ ತಂಡವನ್ನು 148 ರನ್‌ಗಳಿಗೆ ಸೀಮಿತಗೊಳಿಸುವಲ್ಲಿ ಯಶಸ್ವಿಯಾದರು. ಭಾರತ ತಂಡ ಈ ಸ್ಕೋರ್ ತಲುಪುವಲ್ಲಿ ಮೊತ್ತೊರ್ವ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ (Shafali Verma) ಅವರ ಬಿರುಸಿನ ಬ್ಯಾಟಿಂಗ್ ಪ್ರಮುಖ ಪಾತ್ರ ವಹಿಸಿತು. 150 ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಶಫಾಲಿ 42 ರನ್ಗಳು ಉಪಯುಕ್ತ ಇನ್ನಿಂಗ್ಸ್ ಆಡಿದರು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಆರಂಭಿಕ ಜೋಡಿ 38 ರನ್‌ಗಳಿಸಿತು. ಈ ವೇಳೆ 14 ಎಸೆತಗಳಲ್ಲಿ 13 ರನ್ ಗಳಿಸಿದ್ದ ಸ್ಮೃತಿ ಮಂಧಾನ ವಿಕೆಟ್ ಒಪ್ಪಿಸಿದರು. ಮಂಧಾನ ಔಟಾದ ನಂತರ ಶೆಫಾಲಿ ವರ್ಮಾ ಇನ್ನಿಂಗ್ಸ್ ಕೈಗೆತ್ತಿಕೊಂಡು, ಜೆಮಿಮಾ ರೊಡ್ರಿಗಸ್ ಅವರೊಂದಿಗೆ ಇನ್ನಿಂಗ್ಸ್ ನಿಭಾಯಿಸಲು ಪ್ರಯತ್ನಿಸಿದರು. ಆದರೆ, ಟೀಂ ಇಂಡಿಯಾ ಸ್ಕೋರ್ ಬೋರ್ಡ್‌ಗೆ 67 ರನ್ ಸೇರ್ಪಡೆಯಾದ ತಕ್ಷಣವೇ ಈ ಜೊತೆಯಾಟವೂ ಮುರಿದುಬಿತ್ತು. ಆದರೆ, ಈ ಜೊತೆಯಾಟದಲ್ಲಿ ಒಳ್ಳೆಯ ಸಂಗತಿ ಎಂದರೆ ಶೆಫಾಲಿ ವರ್ಮಾ ಅವರ ಸ್ಫೋಟಕ ಬ್ಯಾಟಿಂಗ್.
30 ನಿಮಿಷ, 28 ಎಸೆತ, 42 ರನ್, 150 ರ ಸ್ಟ್ರೈಕ್ ರೇಟ್
ಭಾರತ ತನ್ನ ಎರಡನೇ ವಿಕೆಟ್ ಅನ್ನು ಶೆಫಾಲಿ ವರ್ಮಾ ರೂಪದಲ್ಲಿ ಕಳೆದುಕೊಂಡಿತು. ಆದರೆ, ಔಟಾಗುವ ಮುನ್ನ ಅವರು 150ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ ಕೇವಲ 28 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಒಳಗೊಂಡಂತೆ 42 ರನ್ ಬಾರಿಸಿದರು. ಅರ್ಧ ಗಂಟೆ ಕಾಲ ಆಡಿದ ತನ್ನ ಇನ್ನಿಂಗ್ಸ್‌ನಲ್ಲಿ ಶೆಫಾಲಿ ಕೇವಲ 6 ಎಸೆತಗಳಲ್ಲಿ 26 ರನ್ ಗಳಿಸಿದರು.
ಜೆಮಿಮಾ ಮತ್ತು ಹರ್ಮನ್ ಉತ್ತಮ ಬ್ಯಾಟಿಂಗ್
ಶೆಫಾಲಿ ಔಟಾದಾಗ ಜೆಮಿಮಾಗೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಬೆಂಬಲ ನೀಡಿದರು. ಈ ಪಾಲುದಾರಿಕೆಯೂ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ಯಲು ಕಾರಣವಾಯಿತು. ಈ ಇಬ್ಬರೂ ಬ್ಯಾಟರ್ಗಳು ಒಟ್ಟಾಗಿ ತಂಡವನ್ನು 100 ರನ್‌ಗಳ ಗಡಿ ದಾಟಿಸಿದರು. ಆದರೆ ಸ್ಕೋರ್ 109 ತಲುಪಿದ ಕೂಡಲೇ 27 ರನ್ ಗಳಿಸಿದ್ದ ಜೆಮಿಮಾ ಔಟಾದರು. ಅವರ ವಿಕೆಟ್ ಬಳಿಕ ತಂಡದ ನಾಯಕಿ ಹರ್ಮನ್‌ಪ್ರೀತ್ ಕೂಡ ಹೆಚ್ಚು ಕಾಲ ವಿಕೆಟ್‌ನಲ್ಲಿ ಉಳಿಯಲಿಲ್ಲ. ಹರ್ಮನ್ 40 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿ 30 ಎಸೆತಗಳಲ್ಲಿ 36 ರನ್ ಗಳಿಸಿದರು.
Published On - 10:59 am, Thu, 13 October 22