Shafali Verma: 22 ಫೋರ್, 11 ಸಿಕ್ಸ್: ಕೇವಲ 3 ರನ್ಗಳಿಂದ ದ್ವಿಶತಕ ಮಿಸ್..!
Shafali Verma: ಶಫಾಲಿ ವರ್ಮಾ ಟೀಮ್ ಇಂಡಿಯಾ ಪರ 5 ಟೆಸ್ಟ್ ಪಂದ್ಯಗಳಿಂದ 567 ರನ್ ಕಲೆಹಾಕಿದ್ದಾರೆ. ಹಾಗೆಯೇ ಏಕದಿನ ಕ್ರಿಕೆಟ್ನಲ್ಲಿ 29 ಇನಿಂಗ್ಸ್ ಆಡಿರುವ ಅವರು 644 ರನ್ಗಳಿಸಿದ್ದಾರೆ. ಇನ್ನು 85 ಟಿ20 ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಶಫಾಲಿ 10 ಅರ್ಧಶತಕಗಳೊಂದಿಗೆ 2045 ರನ್ ಕಲೆಹಾಕಿದ್ದಾರೆ. ಆದರೀಗ ಕಳಪೆ ಫಾರ್ಮ್ನಿಂದಾಗಿ ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ಶಫಾಲಿ ದೇಶೀಯ ಅಂಗಳದಲ್ಲಿ ಅಬ್ಬರಿಸುವ ಮೂಲಕ ಮತ್ತೆ ಆಯ್ಕೆಗಾರರ ಗಮನ ಸೆಳೆದಿದ್ದಾರೆ.
ಸೀನಿಯರ್ ವುಮೆನ್ಸ್ ಒನ್ ಡೇ ಟೂರ್ನಿಯಲ್ಲಿ ಶಫಾಲಿ ವರ್ಮಾ ಬಿರುಗಾಳಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ರಾಜ್ಕೋಟ್ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಹರ್ಯಾಣ ಮತ್ತು ಬಂಗಾಳ ಮಹಿಳಾ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಬಂಗಾಳ ತಂಡದ ನಾಯಕ ಮಿತಾ ಪೌಲ್ ಬೌಲಿಂಗ್ ಆಯ್ದುಕೊಂಡರು.
ಅದರಂತೆ ಇನಿಂಗ್ಸ್ ಆರಂಭಿಸಿದ ಹರ್ಯಾಣ ತಂಡಕ್ಕೆ ಶಫಾಲಿ ವರ್ಮಾ ಸ್ಪೋಟಕ ಆರಂಭ ಒದಗಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಶಫಾಲಿ ಬಂಗಾಳ ಬೌಲರ್ಗಳ ಬೆಂಡೆತ್ತಿದರು.
ಈ ಮೂಲಕ 115 ಎಸೆತಗಳಲ್ಲಿ 22 ಫೋರ್ ಹಾಗೂ 11 ಸಿಕ್ಸ್ಗಳೊಂದಿಗೆ 197 ರನ್ ಚಚ್ಚಿದ ಶಫಾಲಿ ವರ್ಮಾ ದ್ವಿಶತಕದ ಹೊಸ್ತಿಲಲ್ಲಿ ಎಡವಿದರು. ಈ ಮೂಲಕ ಕೇವಲ 3 ರನ್ಗಳಿಂದ ಡಬಲ್ ಸೆಂಚುರಿ ಸಿಡಿಸುವ ಅವಕಾಶ ಕೈಚೆಲ್ಲಿಕೊಂಡರು. ಶಫಾಲಿ ವರ್ಮಾರ ಈ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಹರ್ಯಾಣ ತಂಡವು 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 389 ರನ್ ಕಲೆಹಾಕಿತು.
390 ರನ್ಗಳ ಗುರಿಯನ್ನು ಬೆನ್ನತ್ತಿದ ಬಂಗಾಳ ಪರ ಧರಾ ಗುಜ್ಜರ್ (69), ಸಸ್ತಿ ಮೊಂಡಲ್ (52) ಅರ್ಧಶತಕ ಬಾರಿಸಿದರು. ಆ ಬಳಿಕ ಬಂದ ಟಿ.ಸರ್ಕಾರ್ 83 ಎಸೆತಗಳಲ್ಲಿ 113 ರನ್ ಚಚ್ಚಿದರು. ಇನ್ನು ಪಿ ಬಾಲಾ 88 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಬಂಗಾಳ ತಂಡವು 49.1 ಓವರ್ಗಳಲ್ಲಿ 390 ರನ್ ಕಲೆಹಾಕಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.