ವಿನೋದ್ ಕಾಂಬ್ಳಿಯ ಗಂಭೀರ ಆರೋಗ್ಯ ಸಮಸ್ಯೆಯ ಕಾರಣ ಬಹಿರಂಗ..!
Vinod Kambli: ವಿನೋದ್ ಕಾಂಬ್ಳಿ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದು 1991 ರಲ್ಲಿ. ಅಂದಿನಿಂದ 2000ರವರೆಗೆ ಭಾರತದ ಪರ ಒಟ್ಟು 121 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಟೆಸ್ಟ್ನಲ್ಲಿ 21 ಇನಿಂಗ್ಸ್ ಆಡಿರುವ ಅವರು 2 ಡಬಲ್ ಸೆಂಚುರಿ ಹಾಗೂ 4 ಸೆಂಚುರಿಗಳೊಂದಿಗೆ ಒಟ್ಟು 1084 ರನ್ ಕಲೆಹಾಕಿದ್ದಾರೆ. ಹಾಗೆಯೇ ಏಕದಿನ ಕ್ರಿಕೆಟ್ನಲ್ಲಿ 97 ಇನಿಂಗ್ಸ್ಗಳಿಂದ 2477 ರನ್ ಬಾರಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಲವು ಬಾರಿ ಚಿಕಿತ್ಸೆ ಪಡೆದರೂ ಅವರು ಮತ್ತೆ ಮತ್ತೆ ಅನಾರೋಗ್ಯಕ್ಕೀಡಾಗಿದ್ದರು. ಇದಕ್ಕೆ ಕಾರಣ ಅವರ ಕುಡಿತದ ಚಟ ಎಂದು ವರದಿಗಳಾಗಿದ್ದವು. ಆದರೀಗ ಪದೇ ಪದೇ ಅವರ ಆರೋಗ್ಯ ಸ್ಥಿತಿ ಹದಗೆಡಲು ಬ್ರೈನ್ ಕ್ಲೋಟ್ ಕಾರಣ ಎನ್ನಲಾಗಿದೆ. ಅಂದರೆ ವಿನೋದ್ ಕಾಂಬ್ಳಿ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅನಾರೋಗ್ಯದ ಕಾರಣ ವಿನೋದ್ ಕಾಂಬ್ಳಿ ಅವರನ್ನು ಡಿಸೆಂಬರ್ 21 ರಂದು ಥಾಣೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರು ಮೂತ್ರದ ಸೋಂಕು ಮತ್ತು ಒತ್ತಡದ ಬಗ್ಗೆ ತಿಳಿಸಿದ್ದರು. ಇದರ ಜೊತೆಗೆ ಪದೇ ಪದೇ ನೋವು ಕಾಣಿಸಿಕೊಳ್ಳುತ್ತಿರುವುದಾಗಿ ವೈದ್ಯರಲ್ಲಿ ಹೇಳಿಕೊಂಡಿದ್ದಾರೆ.
ಹೀಗಾಗಿ ಆಕೃತಿ ಆಸ್ಪತ್ರೆಯ ವೈದ್ಯರಾದ ಡಾ. ವಿವೇಕ್ ತ್ರಿವೇದಿ ಹಲವು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ್ದಾರೆ. ಈ ವರದಿಯಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಇದನ್ನು ಪರಿಶೀಲಿಸಿದಾಗ ವಿನೋದ್ ಕಾಂಬ್ಳಿ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡು ಬಂದಿದೆ ಎಂದು ಡಾಕ್ಟರ್ ತ್ರಿವೇದಿ ತಿಳಿಸಿದ್ದಾರೆ.
ಸದ್ಯಕ್ಕೆ ಇದರ ಗಂಭೀರತೆಯ ಬಗ್ಗೆ ವೈದ್ಯರು ಹೆಚ್ಚಿನ ಮಾಹಿತಿ ನೀಡದಿದ್ದರೂ, ಆಸ್ಪತ್ರೆಯಲ್ಲಿ ವಿಶೇಷ ತಂಡ ಅವರ ಸ್ಥಿತಿಯ ಮೇಲೆ ನಿಗಾ ಇರಿಸಿದೆ ಎಂದು ವೈದ್ಯರು ಹೇಳಿದ್ದಾರೆ. ಅಲ್ಲದೆ, ಡಿಸೆಂಬರ್ 24 ರಂದು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ವಿನೋದ್ ಕಾಂಬ್ಳಿ ಅವರಿಗೆ ಸಂಪೂರ್ಣ ಚಿಕಿತ್ಸೆ ಉಚಿತವಾಗಿ ನೀಡಲು ಆಸ್ಪತ್ರೆಯ ಪ್ರಭಾರಿ ನಿರ್ಧರಿಸಿದ್ದಾರೆ ಎಂದು ಇದೇ ವೇಳೆ ವೈದ್ಯರು ತಿಳಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿರುವ ವಿನೋದ್ ಕಾಂಬ್ಳಿ ಅವರು ಸಂಪೂರ್ಣವಾಗಿ ಗುಣಮುಖರಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
1991 ರಿಂದ 2000 ರವರೆಗೆ ವಿನೋದ್ ಕಾಂಬ್ಳಿ ಟೀಮ್ ಇಂಡಿಯಾ ಒಟ್ಟು 121 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 21 ಟೆಸ್ಟ್ ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅವರು 2 ದ್ವಿಶತಕ ಹಾಗೂ 4 ಶತಕಗಳೊಂದಿಗೆ ಒಟ್ಟು 1084 ರನ್ ಕಲೆಹಾಕಿದ್ದಾರೆ. ಹಾಗೆಯೇ 97 ಏಕದಿನ ಇನಿಂಗ್ಸ್ಗಳಿಂದ 2477 ರನ್ ಬಾರಿಸಿದ್ದಾರೆ. ಈ ವೇಳೆ ಅವರ ಬ್ಯಾಟ್ನಿಂದ 2 ಶತಕ ಹಾಗೂ 14 ಅರ್ಧಶತಕಗಳು ಮೂಡಿಬಂದಿವೆ. 2000ರ ಬಳಿಕ ಭಾರತ ತಂಡದಿಂದ ಹೊರಬಿದ್ದ ಕಾಂಬ್ಳಿಗೆ ಮತ್ತೆ ಕಂಬ್ಯಾಕ್ ಮಾಡಲು ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ: ಕೋಟಿ ಕೋಟಿ ಎಣಿಸಿದ್ದ ವಿನೋದ್ ಕಾಂಬ್ಳಿಯ ಇಂದಿನ ಆದಾಯ ಎಷ್ಟು ಗೊತ್ತೇ?
ಇದರ ನಡುವೆ ಹಲವು ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದ್ದ ಅವರು ಕುಡಿತದ ಚಟಕ್ಕೆ ಒಳಗಾಗಿದ್ದರು. ಇದರ ನಡುವೆ ಅವರು ಆರೋಗ್ಯ ಕೂಡ ಕೈ ಕೊಟ್ಟಿತು. ಇದೀಗ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ 52 ವರ್ಷದ ವಿನೋದ್ ಕಾಂಬ್ಳಿ ಥಾಣೆಯ ಆಕೃತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.