ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಷಿಯೇಷನ್ ಸ್ಟೇಡಿಯಂನಲ್ಲಿ ನಡೆದ ವಿಜಯ್ ಹಜಾರೆ ಟೂರ್ನಿಯ ಮೊದಲ ಕ್ವಾರ್ಟರ್ ಫೈನಲ್ನಲ್ಲಿ ಶಹಬಾಝ್ ಅಹ್ಮದ್ (Shahbaz Ahmed) ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಬೆಂಗಾಲ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಹರ್ಯಾಣ ತಂಡವು ಮೊದಲು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಬೆಂಗಾಲ್ ತಂಡವು ಉತ್ತಮ ಅರಂಭ ಪಡೆದಿರಲಿಲ್ಲ.
ಆರಂಭಿಕ ಆಟಗಾರ ಅಭಿಷೇಕ್ ಪೊರೆಲ್ (24) ಹಾಗೂ ರಂಜೋತ್ ಸಿಂಗ್ (6) ಬೇಗನೆ ವಿಕೆಟ್ ಒಪ್ಪಿಸಿದರು. ಇನ್ನು ಬೆಂಗಾಲ್ ತಂಡದ ನಾಯಕ ಸುದೀಪ್ ಕೇವಲ 21 ರನ್ಗಳಿಸಲಷ್ಟೇ ಶಕ್ತರಾದರು. ಆ ಬಳಿಕ ಬಂದ ಅನುಸ್ತುಪ್ 14 ರನ್ ಬಾರಿಸಿ ವಿಕೆಟ್ ಕೈಚೆಲ್ಲಿದರು.
ಈ ಹಂತದಲ್ಲಿ ಕಣಕ್ಕಿಳಿದ ಶಹಬಾಝ್ ಅಹ್ಮದ್ ಅತ್ಯುತ್ತಮ ಇನಿಂಗ್ಸ್ ಆಡಿದರು. ಹರ್ಯಾಣ ಬೌಲರ್ಗಳನ್ನು ದಿಟ್ಟತನದಿಂದಲೇ ಎದುರಿಸಿದ ಎಡಗೈ ದಾಂಡಿಗ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದರು. ಆದರೆ ಮತ್ತೊಂದೆಡೆ ಬೆಂಗಾಲ್ ತಂಡವು ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.
ಇದಾಗ್ಯೂ ಏಂಕಾಗಿಯಾಗಿ ಇನಿಂಗ್ಸ್ ಕಟ್ಟಿದ ಶಹಬಾಝ್ ಅಹ್ಮದ್ 118 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 100 ರನ್ ಬಾರಿಸಿ ಬ್ಯಾಟ್ ಮೇಲೆಕ್ಕೆತ್ತಿದರು. ಅಲ್ಲದೆ 50ನೇ ಓವರ್ನ 5ನೇ ಎಸೆತದಲ್ಲಿ ರಾಹುಲ್ ತೆವಾಟಿಯಾಗೆ ವಿಕೆಟ್ ಒಪ್ಪಿಸಿ ಶಹಬಾಝ್ ಅಹ್ಮದ್ (100) ಇನಿಂಗ್ಸ್ ಅಂತ್ಯಗೊಳಿಸಿದರು.
ಶಹಬಾಝ್ ಅಹ್ಮದ್ ಅವರ ಈ ಭರ್ಜರಿ ಶತಕದ ನೆರವಿನಿಂದ ಬೆಂಗಾಲ್ ತಂಡವು 50 ಓವರ್ಗಳಲ್ಲಿ 225 ರನ್ ಕಲೆಹಾಕಿದೆ. ಈ ಮೂಲಕ ಹರ್ಯಾಣ ತಂಡಕ್ಕೆ 226 ರನ್ಗಳ ಗುರಿ ನೀಡಿದೆ.
ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಆರ್ಸಿಬಿ ತಂಡವು ಶಹಬಾಝ್ ಅಹ್ಮದ್ ಅವರನ್ನು ಟ್ರೇಡ್ ಮಾಡಿಕೊಂಡಿದೆ. ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಶಹಬಾಝ್ ಅವರನ್ನು ನೀಡುವ ಮೂಲಕ ಮಯಾಂಕ್ ಡಗಾರ್ ಅವರನ್ನು ಆರ್ಸಿಬಿ ತಂಡಕ್ಕೆ ಸೇರಿಸಿಕೊಂಡಿದೆ. ಇತ್ತ ಆರ್ಸಿಬಿ ತಂಡದಿಂದ ಹೊರಬೀಳುತ್ತಿದ್ದಂತೆ ಇದೀಗ ಭರ್ಜರಿ ಶತಕ ಬಾರಿಸುವ ಮೂಲಕ ಶಹಬಾಝ್ ಅಹ್ಮದ್ ಮಿಂಚಿರುವುದು ವಿಶೇಷ.
ಹರ್ಯಾಣ ಪ್ಲೇಯಿಂಗ್ ಇಲೆವೆನ್: ಅಶೋಕ್ ಮೆನಾರಿಯಾ (ನಾಯಕ) , ರೋಹಿತ್ ಪರ್ಮೋದ್ ಶರ್ಮಾ ( ವಿಕೆಟ್ ಕೀಪರ್ ) , ಅಂಕಿತ್ ಕುಮಾರ್ , ಯುವರಾಜ್ ಸಿಂಗ್ , ಹಿಮಾಂಶು ರಾಣಾ , ನಿಶಾಂತ್ ಸಿಂಧು , ರಾಹುಲ್ ತೆವಾಟಿಯಾ , ಸುಮಿತ್ ಕುಮಾರ್ , ಹರ್ಷಲ್ ಪಟೇಲ್ , ಅನ್ಶುಲ್ ಕಾಂಬೋಜ್ , ಯುಜ್ವೇಂದ್ರ ಚಹಲ್.
ಇದನ್ನೂ ಓದಿ: RCB ತಂಡದ ಅತ್ಯಂತ ಕೆಟ್ಟ ಆಯ್ಕೆಗಳಾವುವು ಗೊತ್ತಾ?
ಬೆಂಗಾಲ್ ಪ್ಲೇಯಿಂಗ್ ಇಲೆವೆನ್: ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್) , ರಂಜೋತ್ ಸಿಂಗ್ , ಶಹಬಾಝ್ ಅಹ್ಮದ್ , ಇಶಾನ್ ಪೊರೆಲ್ , ಕರಣ್ ಲಾಲ್ , ಮೊಹಮ್ಮದ್ ಕೈಫ್ , ಸುಮನ್ ದಾಸ್ , ಸುದೀಪ್ ಕುಮಾರ್ ಘರಾಮಿ (ನಾಯಕ) , ಅನುಸ್ತುಪ್ ಮಜುಂದಾರ್ , ಋತ್ವಿಕ್ ಚೌಧುರಿ , ಪ್ರದೀಪ್ತ ಪ್ರಮಾಣಿಕ್.