‘ಟಿ20 ನಾಯಕತ್ವ ಬಿಟ್ಟುಬಿಡಿ’: ಪಾಕ್ ನಾಯಕ ಬಾಬರ್ ಅಜಮ್‌ಗೆ ಶಾಹಿದ್ ಅಫ್ರಿದಿ ಸಲಹೆ

| Updated By: ಪೃಥ್ವಿಶಂಕರ

Updated on: Nov 17, 2022 | 5:36 PM

ಬಾಬರ್ ಅಜಮ್ ಅವರು ಟಿ20 ನಾಯಕತ್ವ ತ್ಯಜಿಸಿ ಬ್ಯಾಟಿಂಗ್‌ನತ್ತ ಮಾತ್ರ ಗಮನ ಹರಿಸಬೇಕು. ನಮ್ಮಲ್ಲಿ ಶಾದಾಬ್, ರಿಜ್ವಾನ್ ಮತ್ತು ಶಾನ್ ಮಸೂದ್ ಕೂಡ ಈ ಜವಾಬ್ದಾರಿಯನ್ನು ನಿಭಾಯಿಸಬಲ್ಲರು.

‘ಟಿ20 ನಾಯಕತ್ವ ಬಿಟ್ಟುಬಿಡಿ’: ಪಾಕ್ ನಾಯಕ ಬಾಬರ್ ಅಜಮ್‌ಗೆ ಶಾಹಿದ್ ಅಫ್ರಿದಿ ಸಲಹೆ
Babar Azam, Shahid Afridi
Follow us on

ಆಸ್ಟ್ರೇಲಿಯದಲ್ಲಿ ನಡೆದ ಟಿ20 ವಿಶ್ವಕಪ್ (T20 World Cup 2022) ಪಾಕ್ ನಾಯಕ ಬಾಬರ್ ಅಜಮ್‌ಗೆ (Babar Azam) ನಿರಾಸೆ ಮೂಡಿಸಿದೆ. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯವನ್ನು ಬಿಟ್ಟರೆ, ಇಡೀ ಪಂದ್ಯಾವಳಿಯಲ್ಲಿ ಬಾಬರ್ ಬ್ಯಾಟ್ ಅಬ್ಬರಿಸಲಿಲ್ಲ. ಅದರಲ್ಲೂ ಫೈನಲ್​ನಲ್ಲಿ ಬಾಬರ್ ಆಮೆಗತಿಯ ಬ್ಯಾಟಿಂಗ್‌ ನಡೆಸಿದ್ದೆ ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ಅನುಭವಿ ಆಟಗಾರರು ದೂರಿದ್ದರು. ಈಗ ಒಂದು ಹೆಜ್ಜೆ ಮುಂದಿಟ್ಟಿರುವ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ (Shahid Afridi), ಬಾಬರ್ ತಮ್ಮ ಬ್ಯಾಟಿಂಗ್ ಅನ್ನು ಸುಧಾರಿಸಲು ಟಿ20 ಸ್ವರೂಪದ ನಾಯಕತ್ವವನ್ನು ತ್ಯಜಿಸಬೇಕು ಎಂಬ ಅಭಿಪ್ರಾಯ ಹೊರಹಾಕಿದ್ದಾರೆ.

ಬಾಬರ್ ಅಜಮ್ ನಾಯಕತ್ವದಲ್ಲಿ, ಪಾಕಿಸ್ತಾನ ತಂಡ ಟಿ20 ವಿಶ್ವಕಪ್‌ನಲ್ಲಿ ಫೈನಲ್ ತಲುಪಿತು. ಆದರೆ ಅವರು ತಮ್ಮ ಬ್ಯಾಟಿಂಗ್‌ನಿಂದ ಎಲ್ಲರನ್ನು ನಿರಾಸೆಗೊಳಿಸಿದರು. ಫೈನಲ್‌ನಲ್ಲಿ ಪಾಕಿಸ್ತಾನದ ಸೋಲಿಗೆ ಬಾಬರ್‌ ಅವರ ಬ್ಯಾಟಿಂಗ್‌ ಕೂಡ ಪ್ರಮುಖ ಕಾರಣವಾಗಿತ್ತು. ಕಳಪೆ ಪ್ರದರ್ಶನದಿಂದಾಗಿ ಅವರು ಸಾಕಷ್ಟು ಟೀಕೆಗಳಿಗೂ ಒಳಗಾಗಿದ್ದರು. ಇದೀಗ ಶಾಹಿದ್ ಅಫ್ರಿದಿ ಅವರಿಗೆ ಮಹತ್ವದ ಸಲಹೆ ನೀಡಿದ್ದಾರೆ.

ಶಾಹಿದ್ ಅಫ್ರಿದಿ ಸಲಹೆ

ಟಿ20 ಮಾದರಿಯ ನಾಯಕತ್ವವನ್ನು ತ್ಯಜಿಸಬೇಕು ಎಂದು ಶಾಹಿದ್ ಅಫ್ರಿದಿ ಬಾಬರ್ ಅಜಮ್‌ಗೆ ಸಲಹೆ ನೀಡಿದ್ದಾರೆ. ಬಾಬರ್ ಅಜಮ್ ಅವರು ಟಿ20 ನಾಯಕತ್ವ ತ್ಯಜಿಸಿ ಬ್ಯಾಟಿಂಗ್‌ನತ್ತ ಮಾತ್ರ ಗಮನ ಹರಿಸಬೇಕು. ನಮ್ಮಲ್ಲಿ ಶಾದಾಬ್, ರಿಜ್ವಾನ್ ಮತ್ತು ಶಾನ್ ಮಸೂದ್ ಕೂಡ ಈ ಜವಾಬ್ದಾರಿಯನ್ನು ನಿಭಾಯಿಸಬಲ್ಲರು. ನಾನು ಬಾಬರ್‌ನನ್ನು ತುಂಬಾ ಗೌರವಿಸುತ್ತೇನೆ. ಅವರು ಉತ್ತಮ ಆಟಗಾರ, ಆದ್ದರಿಂದ ಅವರು ಬ್ಯಾಟಿಂಗ್ ಮಾಡುವಾಗ ಕನಿಷ್ಠ ಒತ್ತಡವನ್ನು ಹೊಂದಿರಬೇಕೆಂದು ನಾನು ಬಯಸುತ್ತೇನೆ. ಹೀಗಾಗಿ ಬಾಬರ್ ಅಜಮ್ ಟಿ20 ನಾಯಕತ್ವದಿಂದ ಕೆಳಗಿಳಿಯಬೇಕು. ಆದರೆ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡವನ್ನು ಬಾಬರ್ ಮುನ್ನಡೆಸಬೇಕೆಂದು ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.

ಕನೇರಿಯಾ ಕೂಡ ಪ್ರಶ್ನೆಗಳನ್ನು ಎತ್ತಿದ್ದಾರೆ

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಕನೇರಿಯಾ, ಬಾಬರ್ ಅಜಮ್ ತುಂಬಾ ಹಠಮಾರಿ. ಅವರು ಕರಾಚಿ ಕಿಂಗ್ಸ್ ತಂಡದ ಜೊತೆಯಲ್ಲಿದ್ದಾಗಲೂ ಇದೇ ವರ್ತನೆ ತೋರುತ್ತಿದ್ದರು. ಆ ತಂಡದ ಮ್ಯಾನೇಜ್‌ಮೆಂಟ್‌ಗೆ ಅವರು ಓಪನಿಂಗ್ ಮಾಡುವುದು ಇಷ್ಟವಿರಲಿಲ್ಲ. ಆದರೆ ಬಾಬರ್ ಮಾತ್ರ ನಾನು ಆರಂಭಿಕನಾಗಿಯೇ ಕಣಕ್ಕಿಳಿಯುತ್ತೇನೆ ಎಂದು ಹಠ ಹಿಡಿದರು. ಏಕೆಂದರೆ ಅವರಿಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಕಷ್ಟ. ಬಾಬರ್​ನ ಈ ಮೊಂಡುತನದಿಂದ ಪಾಕಿಸ್ತಾನ ಕ್ರಿಕೆಟ್​ಗೆ ಹಾನಿಯಾಗುತ್ತಿದೆ. ಏಕೆಂದರೆ ಅವರು ಆರಂಭದಲ್ಲಿ ನಿಧಾನವಾಗಿ ರನ್ ಮಾಡುತ್ತಾರೆ. ಇದು ಅವರ ನಂತರ ಬರುವ ಆಟಗಾರರಲ್ಲಿ ಒತ್ತಡವನ್ನುಂಟು ಮಾಡುತ್ತಿದೆ ಎಂದು ಕನೇರಿಯಾ ಆರೋಪ ಹೊರಿಸಿದ್ದರು.

Published On - 5:36 pm, Thu, 17 November 22