ಕಾಂಗರೂಗಳ ವಿರುದ್ಧ ಭರ್ಜರಿ ಜಯ ಸಾಧಿಸಿ ಟಿ20 ಸರಣಿ ವಶಪಡಿಸಿಕೊಂಡಿರುವ ಟೀಂ ಇಂಡಿಯಾ (Team India) ಈಗ ಹರಿಣಗಳ ವಿರುದ್ಧದ ಟಿ20 ಸರಣಿಗೆ ತಯಾರಿ ನಡೆಸುತ್ತಿದೆ. ಸೆ. 28 ರಿಂದ ಈ ಟಿ20 ಸರಣಿ ಆರಂಭವಾಗಲಿದ್ದು, ಈ ಸರಣಿಗೂ ಮುನ್ನ ರೋಹಿತ್ ಪಡೆಗೆ ಎರಡು ಆಘಾತ ಎದುರಾಗಿದೆ. ಈ ಹಿಂದೆ ಆಸ್ಟ್ರೇಲಿಯ ವಿರುದ್ಧದ ಸರಣಿಗೂ ಮುನ್ನ ಶಮಿಗೆ (Mohammed Sham) ಕೋವಿಡ್ ತಗುಲಿದ್ದು, ಶಮಿ ಇನ್ನೂ ಚೇತರಿಸಿಕೊಂಡಿಲ್ಲ. ಈ ಕಾರಣಕ್ಕಾಗಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಆಡುವುದು ಖಚಿತವಾಗಿಲ್ಲ. Cricbuzz ವೆಬ್‌ಸೈಟ್ ಈ ಮಾಹಿತಿಯನ್ನು ನೀಡಿದ್ದು, ಇವರಲ್ಲದೇ ಟೀಂ ಇಂಡಿಯಾಗೆ ಮತ್ತೊಂದು ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಾಗಿದೆ. ವಾಸ್ತವವಾಗಿ, ಆಸೀಸ್ ವಿರುದ್ಧದ ಸರಣಿಯಲ್ಲಿ ತಂಡದಲ್ಲಿದ್ದೂ ಅವಕಾಶ ಪಡೆಯದ ದೀಪಕ್ ಹೂಡಾ (Deepak Hooda) ಕೊನೆಯ ಪಂದ್ಯಕ್ಕೂ ಮುನ್ನ ಇಂಜುರಿಗೆ ಒಳಗಾಗಿದ್ದರು. ಹೀಗಾಗಿ ಹೂಡಾ ಈ ಸರಣಿಯಿಂದಲೂ ಹೊರಗುಳಿಯುವ ಸಾಧ್ಯತೆ ಹೆಚ್ಚಾಗಿವೆ.
ಆಸ್ಟ್ರೇಲಿಯ ವಿರುದ್ಧದ ಮೂರನೇ ಟಿ20 ಪಂದ್ಯಕ್ಕೂ ಮುನ್ನ ದೀಪಕ್ ಹೂಡಾ ಇಂಜುರಿಗೆ ಒಳಗಾಗಿದ್ದು, ಅವರು ತಂಡದ ಆಯ್ಕೆಗೆ ಲಭ್ಯವಿಲ್ಲ ಎಂದು ಬಿಸಿಸಿಐ ತಿಳಿಸಿತ್ತು. ಆದರೆ ಈಗ ಕ್ರಿಕ್‌ಬಜ್ ವರದಿಯ ಪ್ರಕಾರ, ಈ ಗಾಯದಿಂದಾಗಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಮೈದಾನಕ್ಕಿಳಿಯುವುದಿಲ್ಲ ಎಂದು ವರದಿಯಾಗಿದೆ.
ತಂಡದೊಂದಿಗೆ ಹೋಗದ ಶಮಿ
ಶಮಿ ಟೀಂ ಇಂಡಿಯಾ ಜೊತೆ ತಿರುವನಂತಪುರಕ್ಕೆ ಹೋಗಿಲ್ಲ ಎಂದು ವೆಬ್‌ಸೈಟ್ ತನ್ನ ವರದಿಯಲ್ಲಿ ಬರೆದುಕೊಂಡಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯ ಇದೇ ಸ್ಥಳದಲ್ಲಿ ನಡೆಯಲಿದೆ. ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ಅವರ ಸ್ಥಾನಕ್ಕೆ ಬಂದಿದ್ದ ಉಮೇಶ್ ಯಾದವ್ ತಂಡದೊಂದಿಗೆ ಕೇರಳ ತಲುಪಿದ್ದಾರೆ. ಇದರಿಂದ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ತಂಡದ ಭಾಗವಾಗಿದ್ದಾರೆ ಎಂದು ಊಹಿಸಬಹುದು. ಭಾನುವಾರವೇ ದಕ್ಷಿಣ ಆಫ್ರಿಕಾ ಕೇರಳ ತಲುಪಿದೆ. ಟಿ20 ವಿಶ್ವಕಪ್‌ಗಾಗಿ ಶಮಿ ತಂಡದೊಂದಿಗೆ ಆಸ್ಟ್ರೇಲಿಯಾಕ್ಕೆ ಹೋಗುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅವರು ಸಂಪೂರ್ಣವಾಗಿ ಫಿಟ್ ಆಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದರ ಕುರಿತು ಯಾವುದೇ ವೈದ್ಯಕೀಯ ನವೀಕರಣವಿಲ್ಲ ಎಂದು ವೆಬ್‌ಸೈಟ್ ಬರೆದುಕೊಂಡಿದೆ.
ಆದರೆ, ಟಿ20 ವಿಶ್ವಕಪ್‌ಗೆ ಶಮಿ ಮುಖ್ಯ ತಂಡದಲ್ಲಿಲ್ಲ. ಅವರನ್ನು ಸ್ಟ್ಯಾಂಡ್‌ಬೈಗೆ ಆಯ್ಕೆ ಮಾಡಲಾಗಿದೆ.
ಹೂಡಾ ಬದಲಿಗೆ ಶ್ರೇಯಸ್ ಅಯ್ಯರ್
ಹೂಡಾ ಅವರ ಇಂಜುರಿಯನ್ನು ನೋಡಿದರೆ ಅವರ ಬದಲು ಶ್ರೇಯಸ್ ಅಯ್ಯರ್ಗೆ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೆ ಇಂಜುರಿಯಿಂದ ಚೇತರಿಸಿಕೊಳ್ಳಲು ಎನ್ಸಿಎನಲ್ಲಿ ತರಬೇತಿ ಪಡೆದುಕೊಳ್ಳುತ್ತಿರುವ ಹೂಡಾ ತಂಡದೊಂದಿಗೆ ಕೇರಳಕ್ಕೂ ಹೋಗಿಲ್ಲ. ಅವರ ಜಾಗದಲ್ಲಿ ಅಯ್ಯರ್ ಕೇರಳಕ್ಕೆ ಹೋಗಬಹುದು ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಉಮ್ರಾನ್ ಮಲಿಕ್ ಅವರನ್ನು ತಂಡದಲ್ಲಿ ಸ್ಟ್ಯಾಂಡ್ ಬೈ ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯು ಟಿ 20 ವಿಶ್ವಕಪ್‌ಗೆ ಮೊದಲು ಭಾರತಕ್ಕೆ ತನ್ನ ನ್ಯೂನತೆಗಳನ್ನು ಸರಿಪಡಿಸಲು ಕೊನೆಯ ಅವಕಾಶವಾಗಿದ್ದು, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ಬೌಲಿಂಗ್ನಲ್ಲಿ ಮಾಡಿದ ತಪ್ಪುಗಳನ್ನು ಈ ಸರಣಿಯಲ್ಲಿ ಸರಿಪಡಿಸಿಕೊಳ್ಳಲು ಯತ್ನಿಸಲಿದೆ.