Shane Warne: ಅಗಲಿದ ಕ್ರಿಕೆಟ್ ‘ಲೆಜೆಂಡ್’ ಶೇನ್ ವಾರ್ನ್​ಗೆ ಸ್ಪೋರ್ಟ್ ಆಸ್ಟ್ರೇಲಿಯಾದಿಂದ ವಿಶೇಷ ಗೌರವ..!

Shane Warne: ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ವಾರ್ನ್‌ಗೆ ಸ್ಪೋರ್ಟ್ ಆಸ್ಟ್ರೇಲಿಯಾ ಹಾಲ್ ಆಫ್ ಫೇಮ್‌ನಲ್ಲಿ ‘ಲೆಜೆಂಡ್' ಸ್ಥಾನಮಾನ ನೀಡಲಾಗಿದೆ ಎಂಬ ಮಾಹಿತಿಯನ್ನು ಸ್ಪೋರ್ಟ್ ಆಸ್ಟ್ರೇಲಿಯಾ ನೀಡಿದೆ.

Shane Warne: ಅಗಲಿದ ಕ್ರಿಕೆಟ್ ‘ಲೆಜೆಂಡ್’ ಶೇನ್ ವಾರ್ನ್​ಗೆ ಸ್ಪೋರ್ಟ್ ಆಸ್ಟ್ರೇಲಿಯಾದಿಂದ ವಿಶೇಷ ಗೌರವ..!
Shane Warne
Edited By:

Updated on: Dec 05, 2022 | 4:42 PM

ದಶಕಗಳ ಕಾಲ ತನ್ನ ಸ್ಪಿನ್ ಮ್ಯಾಜಿಕ್​ನಿಂದ ಕ್ರಿಕೆಟ್​ (cricket) ಲೋಕದ ಕಿಂಗ್ ಆಗಿ ಮೆರೆದಿದ್ದ ಆಸ್ಟ್ರೇಲಿಯಾದ ಮಾಜಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ (Shane Warne) ಈ ವರ್ಷದ ಮಾರ್ಚ್​ನಲ್ಲಿ ಹೃದಯಘಾತದಿಂದ ಅಸುನೀಗಿದ್ದರು. ವಾರ್ನ್​ ಅವರ ಅಕಾಲಿಕ ನಿಧನದಿಂದಾಗಿ ಇಡೀ ಕ್ರಿಕೆಟ್ ಲೋಕವೇ ಆಘಾತಕ್ಕೊಳಗಾಗಿತ್ತು. ಥಾಯ್ಲೆಂಡ್‌ನ ವಿಲ್ಲಾವೊಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ವಾರ್ನ್​ರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರನ್ನು ಬದುಕುಳಿಸಲು ಸಾಧ್ಯವಾಗಲಿಲ್ಲ ಎಂದು ವಾರ್ನ್​ ಅವರ ಆಪ್ತ ವಲಯ ಮಾಹಿತಿ ನೀಡಿತ್ತು. ಇದೀಗ ಈ ಶ್ರೇಷ್ಠ ಲೆಗ್ ಸ್ಪಿನ್ನರ್‌ಗೆ ಆಸ್ಟ್ರೇಲಿಯಾದಲ್ಲಿ ವಿಶೇಷ ಗೌರವ ನೀಡಲಾಗಿದೆ. ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ವಾರ್ನ್‌ಗೆ ಸ್ಪೋರ್ಟ್ ಆಸ್ಟ್ರೇಲಿಯಾ ಹಾಲ್ ಆಫ್ ಫೇಮ್‌ನಲ್ಲಿ ‘ಲೆಜೆಂಡ್’ ಸ್ಥಾನಮಾನ ನೀಡಲಾಗಿದೆ ಎಂಬ ಮಾಹಿತಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ನೀಡಿದೆ.

ಈ ವಿಶೇಷ ಪಟ್ಟಿಯಲ್ಲಿ ಯಾರಿಗೆಲ್ಲ ಸ್ಥಾನ?

2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ವಾರ್ನ್, ಐಪಿಎಲ್ ಮತ್ತು ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡುತ್ತಿದ್ದರು. ಐಪಿಎಲ್​ನ ಮೊದಲ ಆವೃತ್ತಿಯಲ್ಲಿಯೇ ರಾಜಸ್ಥಾನ್ ರಾಯಲ್ಸ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ವಾರ್ನ್​ ಯಶಸ್ವಿಯಾಗಿದ್ದರು. ಈಗ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ 15 ವರ್ಷಗಳ ನಂತರ ವಾರ್ನ್‌ಗೆ ಈ ಗೌರವ ನೀಡಲಾಗಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾದ ನಾಲ್ವರು ಆಟಗಾರರು ಮಾತ್ರ ಈ ಗೌರವ ಪಡೆದಿದ್ದು, ಅವರಲ್ಲಿ ಸರ್ ಡಾನ್ ಬ್ರಾಡ್ಮನ್, ಕೀತ್ ಮಿಲ್ಲರ್, ರಿಚಿ ಬೆನೌ, ಡೆನ್ನಿಸ್ ಲಿಲ್ಲಿ ಸೇರಿದ್ದಾರೆ.

ಇದನ್ನೂ ಓದಿ: IND vs BAN: ‘ನನ್ನನ್ನು ತಂಡದಿಂದ ಕೈಬಿಡಿ’; ನಾಯಕನ ಮುಂದೆ ವಿಶೇಷ ಬೇಡಿಕೆ ಇಟ್ಟ ರಿಷಬ್ ಪಂತ್..!

ವಾರ್ನ್ ಈ ವಿಶೇಷ ಪಟ್ಟಿಯಲ್ಲಿ ಸೇರ್ಪಡೆಗೊಂಡ ತಮ್ಮ ದೇಶದ ಐದನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಅವರಲ್ಲದೆ ಆಸ್ಟ್ರೇಲಿಯಾದ ಡಿಸ್ಟೆನ್ಸ್ ರನ್ನಿಂಗ್ ಚಾಂಪಿಯನ್ ರಾನ್ ಕ್ಲಾರ್ಕ್ ಅವರಿಗೂ ಈ ಗೌರವ ನೀಡಲಾಗಿದೆ. ಸ್ಪೋರ್ಟ್ ಆಸ್ಟ್ರೇಲಿಯಾದಲ್ಲಿ ಶೇನ್ ವಾರ್ನ್ ಮತ್ತು ರಾನ್ ಕ್ಲಾರ್ಕ್‌ಗೆ ಲೆಜೆಂಡ್ ಸ್ಥಾನಮಾನವನ್ನು ನೀಡಲು ನಮಗೆ ಸಂತಸವಾಗಿದೆ ಎಂದು ಸ್ಪೋರ್ಟ್ ಆಸ್ಟ್ರೇಲಿಯಾದ ಅಧ್ಯಕ್ಷರು ಹೇಳಿಕೊಂಡಿದ್ದಾರೆ.

ಶೇನ್ ವಾರ್ನ್​ ವೃತ್ತಿ ಬದುಕು ಹೀಗಿತ್ತು

ಆಸ್ಟ್ರೇಲಿಯಾ ಪರ 145 ಟೆಸ್ಟ್ ಪಂದ್ಯಗಳನ್ನು ಆಡಿರುವ ವಾರ್ನ್ 708 ವಿಕೆಟ್ ಪಡೆದಿದ್ದಾರೆ. ಹಾಗೆಯೇ ಏಕದಿನ ಮಾದರಿಲ್ಲಿ 194 ಪಂದ್ಯಗಳನ್ನು ಆಡಿರುವ ಈ ಅನುಭವಿ ಲೆಗ್ ಸ್ಪಿನ್ನರ್ 293 ವಿಕೆಟ್​ಗಳನ್ನು ಪಡೆದಿದ್ದಾರೆ. ಅಲ್ಲದೆ 1999 ರಲ್ಲಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದಲ್ಲಿಯೂ ವಾರ್ನ್ ಸ್ಥಾನ ಪಡೆದಿದ್ದರು. ವಾರ್ನ್​, ಹೇಗೆ ತನ್ನ ಆಟದಿಂದ ಖ್ಯಾತ ಪಡೆದಿದ್ದರೋ ಅಷ್ಟೇ ಕುಖ್ಯಾತಿಯನ್ನು ವಿವಾದಗಳಿಂದ ಪಡೆದುಕೊಂಡಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:42 pm, Mon, 5 December 22