ಒಂದೇ ಓವರ್​ನಲ್ಲಿ 5 ಸಿಕ್ಸ್; 19 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ವೇಗಿ ಶಿವಂ ಮಾವಿ

Shivam Mavi's Blazing 50: ಉತ್ತರ ಪ್ರದೇಶ T20 ಲೀಗ್‌ನಲ್ಲಿ ಕಾಶಿ ರುದ್ರಾಸ್ ತಂಡವು ಗೋರಖ್‌ಪುರ ಲಯನ್ಸ್ ವಿರುದ್ಧ ಗೆಲುವು ಸಾಧಿಸಿದೆ. ಶಿವಂ ಮಾವಿ ಅವರ ಅದ್ಭುತ ಅರ್ಧಶತಕ (54 ರನ್, 21 ಎಸೆತಗಳು) ಈ ಗೆಲುವಿಗೆ ಪ್ರಮುಖ ಕಾರಣ. ಕಾಶಿ ತಂಡವು 176 ರನ್ ಗಳಿಸಿದರೆ, ಗೋರಖ್‌ಪುರ 126 ರನ್‌ಗಳಿಗೆ ಆಲೌಟ್ ಆಯಿತು.

ಒಂದೇ ಓವರ್​ನಲ್ಲಿ 5 ಸಿಕ್ಸ್; 19 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ವೇಗಿ ಶಿವಂ ಮಾವಿ
Shivam Mavi

Updated on: Aug 18, 2025 | 8:26 PM

ಉತ್ತರ ಪ್ರದೇಶ ಟಿ20 ಲೀಗ್ (Uttar Pradesh T20 League) ಅಬ್ಬರದಿಂದ ಆರಂಭವಾಗಿದೆ. ಈ ಲೀಗ್‌ನ ಎರಡನೇ ಪಂದ್ಯದಲ್ಲಿ ಕಾಶಿ ರುದ್ರಾಸ್ ತಂಡವು ಗೋರಖ್‌ಪುರ ಲಯನ್ಸ್ ತಂಡವನ್ನು ಎದುರಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕಾಶಿ ರುದ್ರಾಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಗೋರಖ್‌ಪುರ ಲಯನ್ಸ್ ತಂಡವು ಕೇವಲ 126 ರನ್​ಗಳಿಗೆ ಆಲೌಟ್ ಆಗಿ 50 ರನ್​ಗಳಿಂದ ಸೋಲೊಪ್ಪಿಕೊಂಡಿತು. ಕಾಶಿ ತಂಡದ ಈ ಗೆಲುವಿನಲ್ಲಿ ವೇಗಿ ಶಿವಂ ಮಾವಿ (Shivam Mavi) ಅವರ ಸಿಡಿಲಬ್ಬರದ ಬ್ಯಾಟಿಂಗ್ ಪ್ರಮುಖ ಕಾರಣವಾಯಿತು.

8ನೇ ಕ್ರಮಾಂಕದಲ್ಲಿ ಸ್ಫೋಟಕ ಅರ್ಧಶತಕ

ಈ ಪಂದ್ಯದಲ್ಲಿ, ಯುವ ವೇಗಿ ಶಿವಂ ಮಾವಿ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಸಾಮಾನ್ಯವಾಗಿ ತಮ್ಮ ಮಾರಕ ಯಾರ್ಕರ್ ಮತ್ತು ನಿಖರವಾದ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದ ಮಾವಿ, ಗೋರಖ್‌ಪುರ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಸಂಚಲನ ಮೂಡಿಸಿದರು.

ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ , ಕಾಶಿ ರುದ್ರಾಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಇದರ ಪರಿಣಾಮವಾಗಿ 14 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ ಕೇವಲ 89 ರನ್‌ ಮಾತ್ರ ಕಲೆಹಾಕಿತ್ತು. ಆದರೆ ಈ ವೇಳೆ ಕ್ರೀಸ್‌ಗೆ ಬಂದ ಶಿವಂ ಮಾವಿ ಆಟದ ದಿಕ್ಕನ್ನು ಬದಲಾಯಿಸಿ ಕೇವಲ 21 ಎಸೆತಗಳಲ್ಲಿ 6 ಸಿಕ್ಸರ್‌ಗಳನ್ನು ಒಳಗೊಂಡ 54 ರನ್‌ಗಳ ತ್ವರಿತ ಇನ್ನಿಂಗ್ಸ್ ಆಡಿದರು. ಅಲ್ಲದೆ 8 ನೇ ವಿಕೆಟ್‌ಗೆ 87 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.

ಒಂದೇ ಓವರ್‌ನಲ್ಲಿ 5 ಸಿಕ್ಸರ್‌

ಈ ಇನ್ನಿಂಗ್ಸ್‌ನಲ್ಲಿ, ಶಿವಂ ಮಾವಿ ಮತ್ತು ಶಿವ ಸಿಂಗ್ ಒಟ್ಟಾಗಿ ಕೊನೆಯ ಓವರ್‌ಗಳಲ್ಲಿ ಅತ್ಯಂತ ವೇಗವಾಗಿ ರನ್ ಗಳಿಸಿದರು. ಇಬ್ಬರೂ ಆಟಗಾರರು ಇನ್ನಿಂಗ್ಸ್‌ನ 18 ನೇ ಓವರ್‌ನಲ್ಲಿ ಒಟ್ಟಿಗೆ 5 ಸಿಕ್ಸರ್‌ಗಳನ್ನು ಬಾರಿಸಿದರು. ಇದರಲ್ಲಿ ಶಿವಂ ಸಿಂಗ್ ಮೊದಲ ಮೂರು ಎಸೆತಗಳಲ್ಲಿ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿದರೆ, ಮಾವಿ ಮುಂದಿನ ಎರಡು ಎಸೆತಗಳಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಈ ಓವರ್‌ನಲ್ಲಿ ಒಟ್ಟು 31 ರನ್‌ಗಳು ಬಂದವು , ಇದು ಕಾಶಿ ರುದ್ರಾಸ್ ಸ್ಕೋರ್ ಅನ್ನು ಬಲಪಡಿಸಲು ಸಹಾಯ ಮಾಡಿತು. ಮಾವಿ ತಮ್ಮ ಇನ್ನಿಂಗ್ಸ್‌ನಲ್ಲಿ ಕೇವಲ ಸಿಕ್ಸರ್‌ಗಳಿಂದ ಒಟ್ಟು 36 ರನ್‌ಗಳನ್ನು ಗಳಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ