ಒಂದೆಡೆ, ಪಾಕಿಸ್ತಾನ ಕ್ರಿಕೆಟ್ ತಂಡವು ICC T20 ವಿಶ್ವಕಪ್-2021 ರಲ್ಲಿ ತನ್ನ ಪ್ರದರ್ಶನದೊಂದಿಗೆ ಇಡೀ ಪ್ರಪಂಚವನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಆದರೆ ಅದರ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ವಿನಾಕಾರಣ ವಿವಾದವನ್ನು ತನ್ನ ಮೈಮೇಲೆ ಎಳೆದುಕೊಂಡು ಸುದ್ದಿಯಾಗುತ್ತಿದ್ದಾರೆ. ಇದಕ್ಕೆ ಕಾರಣ ಟಿವಿ ಶೋ. ಆ್ಯಂಕರ್ ನೋಮನ್ ನಿಯಾಜ್ ಪಿಟಿವಿ ಶೋನಲ್ಲಿ ಅಖ್ತರ್ ಜೊತೆ ಅನುಚಿತವಾಗಿ ನಡೆದುಕೊಂಡಿದ್ದಕ್ಕೆ ಅಖ್ತರ್ ಕಾರ್ಯಕ್ರಮದ ಮಧ್ಯದಲ್ಲೇ ಎದ್ದು ಹೊರನಡೆದಿದ್ದರು.ಇದರ ನಂತರ ಚಾನೆಲ್ ಅಖ್ತರ್‌ಗೆ $100 ಮಿಲಿಯನ್ ಮಾನನಷ್ಟ ಮೊಕದಮ್ಮೆ ನೋಟಿಸ್ ಕಳುಹಿಸಿತು. ಸೇನೆ, ಸರ್ಕಾರ ಸೇರಿದಂತೆ ಇಡೀ ದೇಶವೇ ಜೊತೆಗಿದೆ ಎಂದು ಇದೀಗ ಈ ಬಗ್ಗೆ ಅಖ್ತರ್ ದೊಡ್ಡ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದ ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಅಖ್ತರ್, 100 ಮಿಲಿಯನ್ ನೋಟಿಸ್ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, “ಪಿಟಿಐ (ಪಾಕಿಸ್ತಾನದ ರಾಜಕೀಯ ಪಕ್ಷ) ಬೆಂಬಲ ನನ್ನೊಂದಿಗಿದೆ, ಎಲ್ಲಾ ರಾಜಕೀಯ ಪಕ್ಷಗಳು ನನ್ನೊಂದಿಗಿವೆ, ಸೇನೆಯೂ ನನ್ನೊಂದಿಗಿದೆ. ನಮ್ಮ ರಾಷ್ಟ್ರನಾಯಕನಿಗೆ ಹೀಗಾಗಬಾರದಿತ್ತು ಎಂಬ ಸಿಟ್ಟು ಇಡೀ ಸಾರ್ವಜನಿಕರಲ್ಲಿದೆ.ಆದರೆ ಇವರೆಲ್ಲ ವಿಷಯವನ್ನು ಬೇರೆಡೆಗೆ ಕೊಂಡೊಯ್ದಿದ್ದಾರೆ.ಇಡೀ ಕ್ಯಾಬಿನೆಟ್‌ನಲ್ಲಿ ಸಾರಾಂಶ ಪಾಸಾಗಿದೆ. ಇಡೀ ಸಂಪುಟ ನನ್ನೊಂದಿಗೆ ಇದೆ. ಪ್ರಧಾನಿ ನನ್ನೊಂದಿಗಿದ್ದಾರೆ ಎಲ್ಲರೂ ನನ್ನ ಜೊತೆಗಿದ್ದಾರೆ, ಟಿವಿಯಲ್ಲಿ ನಾನು ನಿಮಗೆ ಏನನ್ನೂ ಹೇಳುತ್ತಿಲ್ಲ ಎಂದರೆ ನೀವು ಏನು ಬೇಕಾದರೂ ಹೇಳಬೇಕು ಎಂದಲ್ಲ.ಇವರು ಏನು ಮಾಡುತ್ತಿದ್ದರೂ ನನ್ನ ವಕೀಲರು ಎಲ್ಲವನ್ನೂ ಗಮನಿಸುತ್ತಿದ್ದಾರೆ, PTV ಗೂ ಸಹ ಎಲ್ಲರಿಗೂ ಸೂಕ್ತವಾದ ಉತ್ತರ ನಾವು ನೀಡುತ್ತೇವೆ ಎಂದಿದ್ದಾರೆ.
ಏನಿದು ಅಖ್ತರ್-ಪಿಟಿವಿ ವಿವಾದ?
ಟಿ20 ವಿಶ್ವಕಪ್ ಸಂದರ್ಭದಲ್ಲಿ ಕ್ರೀಡಾ ಕಾರ್ಯಕ್ರಮದ ಚರ್ಚೆಯಲ್ಲಿ ಶೋಯೆಬ್ ಅಖ್ತರ್ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಚರ್ಚೆ ವೇಳೆ ನಿರೂಪಕ ಡಾ ನೌಮಾನ್ ನಿಯಾಜ್ ಹಾಗೂ ಶೋಯೆಬ್ ಅಖ್ತರ್ ನಡುವೆ ಹೊಂದಾಣಿಕೆಯ ಕೊರತೆ ಕಂಡು ಬಂದಿತ್ತು. ಇಬ್ಬರ ನಡುವಿನ ಭಿನ್ನಾಭಿಪ್ರಾಯ ತಾರಕ್ಕೇರಿ, ನೀವು ಕಾರ್ಯಕ್ರಮದಿಂದ ಹೊರನಡೆಯಬಹುದು ಎಂದು ನಿರೂಪಕರು ಹೇಳಿದ್ದರು. ಇದರಿಂದ ಅಸಮಾಧಾನಗೊಂಡ ಶೋಯೆಬ್ ಅಖ್ತರ್ ಕೂಡ ಅರ್ಧದಲ್ಲೇ ಕಾರ್ಯಕ್ರಮದಿಂದ ನಿರ್ಗಮಿಸಿದ್ದರು. ಅಷ್ಟೇ ಅಲ್ಲದೆ ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದ ಅಖ್ತರ್, ನನ್ನ ಗೌರವಕ್ಕೆ ಚ್ಯುತಿ ಬಂದಿದ್ದು, ಹೀಗಾಗಿ ಮುಂದೆ ಪಿಟಿವಿಯ ಪ್ಯಾನೆಲ್ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು. ಇದೇ ವಿಚಾರವಾಗಿ ಇದೀಗ ಪಿಟಿವಿ ಶೋಯೆಬ್ ಅಖ್ತರ್ ವಿರುದ್ದ ಮಾನನಷ್ಟ ನೋಟಿಸ್ ನೀಡಿದೆ.