ಪಾಕಿಸ್ತಾನದ ವೇಗದ ಬೌಲರ್ ಶೋಯೆಬ್ ಅಖ್ತರ್ (Shoaib Akhtar) ತನ್ನ ಎದುರಾಳಿಗಳಲ್ಲಿ ನಡುಕವನ್ನುಂಟು ಮಾಡುವ ಆಟಗಾರನೆಂದು ಎಲ್ಲರಿಗು ಗೊತ್ತಿರುವ ವಿಚಾರವೆ. ರಾವಲ್ಪಿಂಡಿ ಎಕ್ಸ್ಪ್ರೆಸ್ ಎಂದು ಕರೆಯಲ್ಪಡುವ ಈ ಬೌಲರ್, ಬ್ಯಾಟ್ಸ್ಮನ್ಗಳಿಗೆ ಹಲವು ಬಾರಿ ತಮ್ಮ ಘಾತಕ ವೇಗದ ಮೂಲಕ ಭಯವನ್ನುಂಟು ಮಾಡುತ್ತಿದ್ದರು. ಸದ್ಯ ಕ್ರಿಕೆಟ್ನಿಂದ ನಿವೃತ್ತಿ ತೆಗೆದುಕೊಂಡಿರುವ ಅಖ್ತರ್ ಕೆಲವೊಮ್ಮೆ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾದರೆ, ಇನ್ನೂ ಕೆಲವೊಮ್ಮೆ ತಮ್ಮ ತಮಾಷದಾಯಕ ಹೇಳಿಕೆಗಳಿಂದೆ ಚರ್ಚೆಯಲ್ಲಿರುತ್ತಾರೆ. ಈಗ ಅಂತಹದೆ ಹೇಳಿಕೆಯಿಂದ ಅಖ್ತರ್ ಸುದ್ದಿಯಾಗುತ್ತಿದ್ದಾರೆ.
ಪಾಕಿಸ್ತಾನದ ಮಾಜಿ ವೇಗದ ದಂತಕಥೆ ಶೋಯೆಬ್ ಅಖ್ತರ್, ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮತ್ತು ವ್ಲಾಗರ್ ತನ್ಮಯ್ ಭಟ್ ಅವರ ಜನಪ್ರಿಯ ಯೂಟ್ಯೂಬ್ ಸರಣಿ ಪಾಕಿಸ್ತಾನಿಸ್ ಆರ್ ಸ್ಯಾವೇಜ್ (Pakistanis are savage)ನಲ್ಲಿ ಕೆಲವು ಕುತೂಹಲಕಾರಿ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಇದರಲ್ಲಿ ತಮ್ಮ ವಿದ್ಯಾರ್ಥಿ ಜೀವನದ ಬಗ್ಗೆಗಿನ ಅಂಶಗಳು ಸೇರಿವೆ. ಬಾಲ್ಯದ ವಿದ್ಯಾಭ್ಯಾಸದ ಬಗ್ಗೆ ಯೂಟ್ಯೂಬರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಖ್ತರ್, ನಾನು ಅದ್ಭುತ ವಿದ್ಯಾರ್ಥಿಯಾಗಿದ್ದೆ. ನಾನು ಪದವಿಗೆ ಬಂದಾಗ ಕ್ರಿಕೆಟ್ ಆಡಲು ಪ್ರಾರಂಭಿಸಿದ್ದೆ. ಓದುವುದರಲ್ಲೂ ನಾನು ಮುಂದೆ ಇದ್ದೆ. ಜೊತೆಗೆ ತುಂಬಾ ಹಠಮಾರಿಯಾಗಿದ್ದೆ ಎಂದು ಅಖ್ತರ್ ಉತ್ತರಿಸಿದರು.
ಹುಡುಗಿಯರಿಗಾಗಿ ಕ್ರಿಕೆಟ್ ಆಡಲು ಪ್ರಾರಂಭಿಸಿದೆ
ಇನ್ನೂ ಕ್ರಿಕೆಟ್ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ರಾವ್ಪಿಂಡಿ ಎಕ್ಸ್ಪ್ರೆಸ್, ನಾನು ಹುಡುಗಿಯರಿಗಾಗಿ ಕ್ರಿಕೆಟ್ ಆಡಲು ಪ್ರಾರಂಭಿಸಿದೆ. ನಿಮ್ಮೊಂದಿಗೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಮ್ಮ ಕಾಲೇಜಿನಲ್ಲಿ ಹುಡುಗಿಯರ ಬ್ಲಾಕ್ ಇತ್ತು. ಹೀಗಾಗಿ ಅವರನ್ನು ಮೆಚ್ಚಿಸಲು ನಾನು ಬೌಲಿಂಗ್ ಆರಂಭಿಸಿದೆ. ಅವರು ನನ್ನ ವೇಗದ ಬೌಲಿಂಗ್ ನೋಡುತ್ತಿದ್ದರು. ಹೀಗಾಗಿ ನಾನು ಲೋಕಲ್ ಸ್ಟಾರ್ ಆಗಿಬಿಟ್ಟಿದ್ದೆ. ಆದರೆ ನಾನು ಕ್ರಿಕೆಟ್ ಬಿಟ್ಟು ನನ್ನ ಮೋಟಾರ್ ಸೈಕಲ್‌ನಲ್ಲಿ ಬಂದರೂ ಯಾರು ನನ್ನನ್ನು ಗಮನಿಸುತ್ತಿರಲಿಲ್ಲ. ಹೀಗಾಗಿ ನಾನು ಕ್ರಿಕೆಟ್‌ನಲ್ಲಿ ಮುಂದುವರಿಯಬೇಕು ಎಂದು ಅರಿತುಕೊಂಡೆ ಎಂದು ಅಖ್ತರ್ ಹೇಳಿದ್ದಾರೆ. ಅಖ್ತರ್ ಅವರ ಈ ಹೇಳಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಮಾಡುತ್ತಿದೆ.
ಅಖ್ತರ್ ಇತ್ತೀಚಿನ ವಿವಾದ
ಟಿ20 ವಿಶ್ವಕಪ್ ಸಂದರ್ಭದಲ್ಲಿ ಕ್ರೀಡಾ ಕಾರ್ಯಕ್ರಮದ ಚರ್ಚೆಯಲ್ಲಿ ಶೋಯೆಬ್ ಅಖ್ತರ್ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಚರ್ಚೆ ವೇಳೆ ನಿರೂಪಕ ಡಾ ನೌಮಾನ್ ನಿಯಾಜ್ ಹಾಗೂ ಶೋಯೆಬ್ ಅಖ್ತರ್ ನಡುವೆ ಹೊಂದಾಣಿಕೆಯ ಕೊರತೆ ಕಂಡು ಬಂದಿತ್ತು. ಇಬ್ಬರ ನಡುವಿನ ಭಿನ್ನಾಭಿಪ್ರಾಯ ತಾರಕ್ಕೇರಿ, ನೀವು ಕಾರ್ಯಕ್ರಮದಿಂದ ಹೊರನಡೆಯಬಹುದು ಎಂದು ನಿರೂಪಕರು ಹೇಳಿದ್ದರು. ಇದರಿಂದ ಅಸಮಾಧಾನಗೊಂಡ ಶೋಯೆಬ್ ಅಖ್ತರ್ ಕೂಡ ಅರ್ಧದಲ್ಲೇ ಕಾರ್ಯಕ್ರಮದಿಂದ ನಿರ್ಗಮಿಸಿದ್ದರು. ಅಷ್ಟೇ ಅಲ್ಲದೆ ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದ ಅಖ್ತರ್, ನನ್ನ ಗೌರವಕ್ಕೆ ಚ್ಯುತಿ ಬಂದಿದ್ದು, ಹೀಗಾಗಿ ಮುಂದೆ ಪಿಟಿವಿಯ ಪ್ಯಾನೆಲ್ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು. ಇದೇ ವಿಚಾರವಾಗಿ ಇದೀಗ ಪಿಟಿವಿ ಶೋಯೆಬ್ ಅಖ್ತರ್ ವಿರುದ್ದ ಮಾನನಷ್ಟ ನೋಟಿಸ್ ನೀಡಿತ್ತು.
ಇದನ್ನೂ ಓದಿ: Shoaib Akhtar: ಸಾವಿರ ಬಾರಿ ಕ್ಷಮೆಯಾಚಿಸುತ್ತೇನೆ! ಅಖ್ತರ್ ಬಳಿ ಕ್ಷಮೆಯಾಚಿಸಿದ ಟಿವಿ ನಿರೂಪಕ ನಿಯಾಜ್