ಕಳೆದ ವಾರ ಮೂರನೇ ಮದುವೆಯಾಗುವ ಮೂಲಕ ವೈಯಕ್ತಿಕ ಬದುಕಿನಲ್ಲಿ ಸಖತ್ ಸುದ್ದಿ ಮಾಡಿದ್ದ ಪಾಕಿಸ್ತಾನ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ (Shoaib Malik) ಮೇಲೆ ಮ್ಯಾಚ್ ಫಿಕ್ಸಿಂಗ್ (Match Fixing) ಆರೋಪ ಕೇಳಿಬಂದಿದೆ. ಅಲ್ಲದೆ ಈ ಆರೋಪದಡಿಯಲ್ಲಿ ಮಲಿಕ್ರನ್ನು ಟಿ20 ಲೀಗ್ನಿಂದ ಹೊರಹಾಕಲಾಗಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಆದರೆ ಈ ಎಲ್ಲಾ ವದಂತಿಗಳ ಬಗ್ಗೆ ಕೊನೆಗೂ ಮೌನ ಮುರಿದಿರುವ ಶೋಯೆಬ್ ಮಲಿಕ್, ಪ್ರಸ್ತುತ ನಾನು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದೇನೆ ಎಂದು ಕೇಳಿಬರುತ್ತಿರುವ ಸುದ್ದಿಗಳೆಲ್ಲವು ಸತ್ಯಕ್ಕೆ ದೂರವಾದವುಗಳು ಎಂದು ಹೇಳುವ ಮೂಲಕ ಮಲಿಕ್ ತಮ್ಮ ಮೇಲಿನ ಆರೋಪಗಳೆಲ್ಲವನ್ನು ಅಲ್ಲಗಳೆದಿದ್ದಾರೆ.
ಪ್ರಸ್ತುತ ಬಾಂಗ್ಲಾದೇಶದಲ್ಲಿ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ನಡೆಯುತ್ತಿದೆ. ಅದರ ಪ್ರಯುಕ್ತ ಜನವರಿ 22 ರಂದು ನಡೆದ ಬಾರಿಶಾಲ್ ಮತ್ತು ಖುಲ್ನಾ ಟೈಗರ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಬಾರಿಶಾಲ್ ಪರ ಬೌಲಿಂಗ್ ದಾಳಿಗಿಳಿದ್ದ ಮಲಿಕ್ ಕೇವಲ ಒಂದು ಓವರ್ ಬೌಲ್ ಮಾಡಿ 18 ರನ್ ನೀಡಿದ್ದರು. ಆದರೆ ಈ ಓವರ್ನಲ್ಲೇ ಮಲಿಕ್ ಬರೋಬ್ಬರಿ 3 ನೋ ಬಾಲ್‌ಗಳನ್ನು ಎಸೆದು ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಆ ಬಳಿಕ ಮಲಿಕ್ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
Shoaib Malik: ಮ್ಯಾಚ್ ಫಿಕ್ಸಿಂಗ್ ಆರೋಪ; ಬಿಪಿಎಲ್ನಿಂದ ಶೋಯೆಬ್ ಮಲಿಕ್ ಕಿಕ್ ಔಟ್..!
ಈ ವದಂತಿಗೆ ಪುಷ್ಠಿ ನೀಡುವಂತೆ ಶೋಯೆಬ್ ಕೂಡ ಆ ಪಂದ್ಯದ ನಂತರ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನಿಂದ ಹೊರನಡೆದು ದುಬೈಗೆ ಹಾರಿದ್ದರು. ಹೀಗಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳು ಶೋಯೆಬ್ ಮಲಿಕ್ ಮ್ಯಾಚ್ ಫಿಕ್ಸಿಂಗ್ನಲ್ಲಿ ಬಾಗಿಯಾಗಿದ್ದು, ಅವರನ್ನು ಬಾರಿಶಾಲ್ ತಂಡದಿಂದ ಹೊರಹಾಕಲಾಗಿದೆ ಎಂದು ವರದಿ ಮಾಡಿದ್ದವು. ಇದೀಗ ಆ ವದಂತಿಗಳಿಗೆ ತೆರೆ ಎಳೆಯುವ ಕೆಲಸವನ್ನು ಮಲಿಕ್ ಮಾಡಿದ್ದಾರೆ.
ಮಲಿಕ್ಗೂ ಮೊದಲು ಈ ವದಂತಿಯ ಬಗ್ಗೆ ಬಾರಿಶಾಲ್ ಫ್ರಾಂಚೈಸ್ ಮಾಲೀಕರು ಮಾತನಾಡಿ ವೀಡಿಯೊ ಹರಿಬಿಟ್ಟಿದ್ದರು. ಅದರಲ್ಲಿ ಅವರು ಶೋಯೆಬ್ ಒಪ್ಪಂದವನ್ನು ರದ್ದುಗೊಳಿಸಿರುವ ಸುದ್ದಿಯನ್ನು ತಿರಸ್ಕರಿಸಿದರು. ಏತನ್ಮಧ್ಯೆ, ಶೋಯೆಬ್ ಮಲಿಕ್ ಸ್ವತಃ ಈ ವೀಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಬಾಂಗ್ಲಾದೇಶದಿಂದ ಹಿಂದಿರುಗಲು ಕಾರಣವನ್ನು ಸಹ ವಿವರಿಸಿದ್ದಾರೆ.
Official statement ;
I would like to address and dismiss the recent rumors circulating about my playing position with Fortune Barishal. I had a thorough discussion with our captain, Tamim Iqbal, and we mutually planned the way forward. I had to leave Bangladesh for a… pic.twitter.com/kmPqPt1nxv— Shoaib Malik 🇵🇰 (@realshoaibmalik) January 26, 2024
ಈ ಬಗ್ಗೆ ವಿಸ್ತೃತವಾಗಿ ಬರೆದುಕೊಂಡಿರುವ ಶೋಯೆಬ್, ಫಾರ್ಚೂನ್ ಬಾರಿಶಾಲ್ ತಂಡದಿಂದ ನನ್ನನ್ನು ಹೊರಹಾಕಿರುವ ಬಗ್ಗೆ ಹರಿದಾಡುತ್ತಿರುವ ಎಲ್ಲಾ ವದಂತಿಗಳನ್ನು ನಿರಾಕರಿಸಲು ನಾನು ಬಯಸುತ್ತೇನೆ. ನಾನು ಲೀಗ್ನಿಂದ ಹೊರಬರುವ ಬಗ್ಗೆ ನಮ್ಮ ತಂಡದ ನಾಯಕ ತಮೀಮ್ ಇಕ್ಬಾಲ್ ಅವರೊಂದಿಗೆ ದೀರ್ಘವಾಗಿ ಚರ್ಚೆ ನಡೆಸಿದೆ. ನಮ್ಮಿಬ್ಬರ ಮಾತುಕತೆಯ ನಂತರವೇ ನಾನು ಲೀಗ್ನಿಂದ ಹೊರಬಂದೆ. ದುಬೈನಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮ ಇದ್ದ ಕಾರಣ ನಾನು ಬಾಂಗ್ಲಾದೇಶದಿಂದ ಹಿಂತಿರುಗಬೇಕಾಯಿತು. ಮುಂಬರುವ ಪಂದ್ಯಗಳಿಗೆ ಫಾರ್ಚೂನ್ ಬಾರಿಶಾಲ್ ತಂಡಕ್ಕೆ ನಾನು ಶುಭ ಹಾರೈಸುತ್ತೇನೆ. ಅಗತ್ಯವಿದ್ದರೆ, ನಾನು ತಂಡಕ್ಕೆ ಬೆಂಬಲವಾಗಿ ಇರುತ್ತೇನೆ.
ಶೋಯೆಬ್ ಮುಂದುವರೆದು, ‘ನಾನು ಯಾವಾಗಲೂ ಆಟವನ್ನು ಆಡುವುದರಲ್ಲಿ ಸಂತೋಷಪಡುತ್ತೇನೆ ಮತ್ತು ಭವಿಷ್ಯದಲ್ಲಿಯೂ ಅದನ್ನು ಮುಂದುವರೆಸುತ್ತೇನೆ. ಆದರೆ ಹೀಗೆ ವದಂತಿಗಳು ಕೇಳಿಬಂದಾಗ ನಾನು ಅದಕ್ಕೆ ಸ್ಪಷ್ಟನೆ ನೀಡಬೇಕು. ಈಗ ಕೇಳಿಬಂದಿರುವ ಎಲ್ಲಾ ವದಂತಿಗಳನ್ನು ನಾನು ಸಂಪೂರ್ಣವಾಗಿ ತಿರಸ್ಕರಿಸುತ್ತೇನೆ. ಇವೆಲ್ಲ ಆಧಾರ ರಹಿತ ಸಂಗತಿಗಳು. ಪ್ರತಿಯೊಬ್ಬರೂ ಮೊದಲು ಮಾಹಿತಿಯ ಸತ್ಯಾಸತ್ಯತೆಯನ್ನು ತಿಳಿದುಕೊಂಡ ಬಳಿಕ ಅದರ ಬಗ್ಗೆ ಸುದ್ದಿ ಪ್ರಕಟಿಸಬೇಕು. ಈ ರೀತಿಯಾಗಿ ತಪ್ಪು ಮಾಹಿತಿ ನೀಡುವುದರಿಂದ ಒಬ್ಬ ವ್ಯಕ್ತಿಯ ಇಮೇಜ್‌ಗೆ ಹಾನಿಯಾಗುತ್ತದೆ ಮತ್ತು ಗೊಂದಲವನ್ನು ಉಂಟುಮಾಡುತ್ತದೆ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:30 pm, Fri, 26 January 24