ಬಾಂಗ್ಲಾದೇಶ ವಿರುದ್ಧ ಢಾಕಾದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸುವುದರೊಂದಿಗೆ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಂಡಿರುವ ಟೀಂ ಇಂಡಿಯಾ (India Vs Bangladesh) ತವರಿಗೆ ಮರಳಿದೆ. ಮೂರನೇ ದಿನದ ಅಂತ್ಯ ಹಾಗೂ ನಾಲ್ಕನೇ ದಿನದ ಆರಂಭದಲ್ಲಿ ಬಾಂಗ್ಲಾದೇಶದ ಸ್ಪಿನ್ ದಾಳಿಗೆ ಭಾರತದ ಬ್ಯಾಟ್ಸ್ಮನ್ಗಳು ಶರಣಾದ ರೀತಿ ನೋಡಿದರೆ ಟೀಂ ಇಂಡಿಯಾ (Team India) ಈ ಪಂದ್ಯದಲ್ಲಿ ಸೋಲುವುದು ಖಚಿತ ಎಂದು ತೋರುತ್ತಿತ್ತು. ಆದರೆ ಶ್ರೇಯಸ್ ಅಯ್ಯರ್ ಮತ್ತು ರವಿಚಂದ್ರನ್ ಅಶ್ವಿನ್ (Shreyas Iyer and R Ashwin) ಅಮೋಘ ಜೊತೆಯಾಟ ಆಡುವುದರೊಂದಿಗೆ ಭಾರತಕ್ಕೆ 3 ವಿಕೆಟ್‌ಗಳ ಜಯ ತಂದುಕೊಟ್ಟರು. ಅಲ್ಲದೆ ನಿರ್ಣಾಯಕ ಹಂತದಲ್ಲಿ ದಾಖಲೆಯ ಜೊತೆಯಾಟವನ್ನಾಡಿದ ಈ ಜೋಡಿ 28 ವರ್ಷಗಳ ಹಳೆದ ದಾಖಲೆಯನ್ನು ಮುರಿದಿದೆ.
ಈ ಪಂದ್ಯದ ಬಗ್ಗೆ ಮಾತನಾಡುವುದಾದರೆ, ಈ ಪಂದ್ಯದಲ್ಲಿ ಭಾರತಕ್ಕೆ, ಬಾಂಗ್ಲಾದೇಶ ತಂಡ 145 ರನ್‌ಗಳ ಅಲ್ಪ ಗುರಿಯನ್ನು ನೀಡಿತ್ತು. ಇದಕ್ಕೆ ಉತ್ತರವಾಗಿ ಭಾರತ ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 45 ರನ್ ಗಳಿಸಿತ್ತು. ಹೀಗಾಗಿ ಉಳಿದಿದ್ದ ಎರಡು ದಿನಗಳಲ್ಲಿ ಭಾರತದ ಗೆಲುವಿಗೆ 100 ರನ್‌ಗಳ ಅಗತ್ಯವಿತ್ತು. ಈ ಗುರಿಯೊಂದಿಗೆ ನಾಲ್ಕನೇ ದಿನದಾಟವನ್ನು ಆರಂಭಿಸಿದ ಭಾರತ ಮೊದಲ ಸೆಷನ್‌ನಲ್ಲಿಯೇ ಬಾಂಗ್ಲಾದೇಶದ ಸ್ಪಿನ್ನರ್‌ಗಳ ದಾಳಿಗೆ ಸಿಲುಕಿ ಮತ್ತೆ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ವೇಳೆಗೆ ಭಾರತದ ಸ್ಕೋರ್ ಕೇವಲ 74 ರನ್ ಆಗಿತ್ತು.
PAK vs NZ: ಪಾಕ್ ತಂಡದಿಂದ ರಿಜ್ವಾನ್ ಔಟ್! 4 ವರ್ಷಗಳ ಬಳಿಕ ತಂಡಕ್ಕೆ ಎಂಟ್ರಿಕೊಟ್ಟ ಮಾಜಿ ನಾಯಕ
ಅಂತಹ ಪರಿಸ್ಥಿತಿಯಲ್ಲಿ, ಶ್ರೇಯಸ್ ಮತ್ತು ಅಶ್ವಿನ್ ಎಂಟನೇ ವಿಕೆಟ್‌ಗೆ 71 ರನ್‌ಗಳ ಅಜೇಯ ಪಾಲುದಾರಿಕೆಯನ್ನು ಹಂಚಿಕೊಂಡಿದಲ್ಲದೆ, ಮೊದಲ ಸೆಷನ್‌ನ ಅಂತ್ಯಕ್ಕೂ ಮೊದಲೇ ಭಾರತಕ್ಕೆ ಸ್ಮರಣೀಯ ಜಯವನ್ನು ತಂದುಕೊಟ್ಟರು. ಶ್ರೇಯಸ್ 29 ರನ್ ಮತ್ತು ಅಶ್ವಿನ್ 42 ರನ್ ಗಳಿಸಿ ಅಜೇಯರಾಗಿ ಉಳಿದರು. ಗೆಲುವಿನ ಜತೆಗೆ ಶ್ರೇಯಸ್ ಮತ್ತು ಅಶ್ವಿನ್ 1994ರಲ್ಲಿ ಪಾಕಿಸ್ತಾನ ನಿರ್ಮಿಸಿದ್ದ ದಾಖಲೆಯನ್ನೂ ಸಹ ಮುರಿದಿದ್ದಾರೆ.
ವಾಸ್ತವವಾಗಿ, ಶ್ರೇಯಸ್ ಮತ್ತು ಅಶ್ವಿನ್ ಅವರ ಅಜೇಯ 71 ರನ್‌ಗಳ ಜೊತೆಯಾಟವು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಗುರಿ ಬೆನ್ನಟ್ಟುವಾಗ, ನಾಲ್ಕನೇ ಇನ್ನಿಂಗ್ಸ್‌ನಲ್ಲಿ, ಅದರಲ್ಲೂ ಎಂಟನೇ ವಿಕೆಟ್‌ಗೆ ನಡೆಸಿದ ಅತಿದೊಡ್ಡ ಜೊತೆಯಾಟ ಎಂಬ ದಾಖಲೆಯನ್ನು ನಿರ್ಮಿಸಿದೆ.
ಅಯ್ಯರ್ ಮತ್ತು ಅಶ್ವಿನ್ ಈ ದಾಖಲೆಯ ಜೊತೆಯಾಟ ನಡೆಸುವುದಕ್ಕಿಂತ ಮೊದಲು, ಈ ದಾಖಲೆಯು ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಇಂಜಮಾಮ್-ಉಲ್-ಹಕ್ ಮತ್ತು ರಶೀದ್ ಲತೀಫ್ ಹೆಸರಿನಲ್ಲಿತ್ತು. 1994 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕರಾಚಿಯಲ್ಲಿ ನಡೆದ ಟೆಸ್ಟ್‌ನಲ್ಲಿ ಎಂಟನೇ ವಿಕೆಟ್‌ಗೆ ಈ ಇಬ್ಬರೂ 52 ರನ್‌ಗಳ ಜೊತೆಯಾಟವನ್ನಾಡಿ ಈ ದಾಖಲೆ ನಿರ್ಮಿಸಿದ್ದರು. ಪಾಕಿಸ್ತಾನ ಈ ಟೆಸ್ಟ್‌ನಲ್ಲಿ ಕೇವಲ 1 ವಿಕೆಟ್ ಬಾಕಿ ಇರುವಂತೆಯೇ 314 ರನ್‌ಗಳ ಗುರಿಯನ್ನು ಸಾಧಿಸಿ ಗೆದ್ದಿತ್ತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:01 pm, Mon, 26 December 22