IND vs ENG: ಮ್ಯಾಂಚೆಸ್ಟರ್‌ನಲ್ಲಿ ಶುಭ್‌ಮನ್ ಗಿಲ್ ಶತಕ; 35 ವರ್ಷಗಳ ಬರ ಅಂತ್ಯ
Shubman Gill's Century at Old Trafford: ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಅದ್ಭುತ ಶತಕ ಬಾರಿಸಿದ್ದಾರೆ. ಇದರೊಂದಿಗೆ ಸಚಿನ್ ತೆಂಡೂಲ್ಕರ್ ನಂತರ 35 ವರ್ಷಗಳಲ್ಲಿ ಈ ಮೈದಾನದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಗಿಲ್ ಪಾತ್ರರಾಗಿದ್ದಾರೆ. ಅಲ್ಲದೆ ಗಿಲ್ ಕಷ್ಟಕರ ಸಂದರ್ಭದಲ್ಲಿ ಕೆ.ಎಲ್. ರಾಹುಲ್ ಜೊತೆ ಸೇರಿ ಅಮೂಲ್ಯ ಜೊತೆಯಾಟವನ್ನು ನಿರ್ಮಿಸಿದರು. ಇದು ಗಿಲ್ ಅವರ ಟೆಸ್ಟ್ ವೃತ್ತಿಜೀವನದ 9ನೇ ಮತ್ತು ಈ ಸರಣಿಯ 4ನೇ ಶತಕವಾಗಿದೆ.

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಶುಭ್‌ಮನ್ ಗಿಲ್ (Shubman Gill) ನಾಯಕತ್ವದಲ್ಲಿ ಎಡವಿರಬಹುದು. ಆದರೆ ಆಟಗಾರನಾಗಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಶತಕಗಳ ಮೇಲೆ ಶತಕ ಬಾರಿಸಿದ್ದ ಗಿಲ್, ಲಾರ್ಡ್ಸ್ ಟೆಸ್ಟ್‌ನಲ್ಲಿ ಮಾತ್ರ ರನ್‌ಗಳ ಬರ ಎದುರಿಸಿದ್ದರು. ಆದರೀಗ ಮ್ಯಾಂಚೆಸ್ಟರ್ ಟೆಸ್ಟ್ (Manchester Test) ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿರುವ ಗಿಲ್, ಎರಡನೇ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಸರಣಿಯಲ್ಲಿ ಇದು ಗಿಲ್ ಅವರ ನಾಲ್ಕನೇ ಶತಕ ಮತ್ತು ಅವರ ಟೆಸ್ಟ್ ವೃತ್ತಿಜೀವನದ 9ನೇ ಶತಕವಾಗಿದೆ. ಇದರ ಜೊತೆಗೆ 35 ವರ್ಷಗಳ ನಂತರ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಭಾರತೀಯ ನಾಯಕನೊಬ್ಬ ಶತಕ ಗಳಿಸಿದ ಸಾಧನೆಯನ್ನು ಗಿಲ್ ಮಾಡಿದ್ದಾರೆ. ಇದು ಮಾತ್ರವಲ್ಲದೆ, ಸಚಿನ್ ತೆಂಡೂಲ್ಕರ್ ನಂತರ ಈ ಮೈದಾನದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಗಿಲ್ ಪಾತ್ರರಾಗಿದ್ದಾರೆ.
ಮ್ಯಾಂಚೆಸ್ಟರ್‌ನಲ್ಲಿ ಗಿಲ್ ಮ್ಯಾಜಿಕ್
ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ, ಭಾರತ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಕಠಿಣ ಪರಿಸ್ಥಿತಿಯಲ್ಲಿತ್ತು. ಇಂಗ್ಲೆಂಡ್ ಮೊದಲ ಓವರ್ನಲ್ಲೇ 2 ವಿಕೆಟ್ ಉರುಳಿಸಿ ಟೀಂ ಇಂಡಿಯಾವನ್ನು ಹಿನ್ನಡೆಗೆ ತಳ್ಳಿತ್ತು. ಆದರೆ ನಾಯಕ ಶುಭ್‌ಮನ್ ಗಿಲ್, ಕೆಎಲ್ ರಾಹುಲ್ ಜೊತೆಗೂಡಿ 188 ರನ್‌ಗಳ ಸ್ಮರಣೀಯ ಜೊತೆಯಾಟವನ್ನು ಕಟ್ಟಿದರು. ಅಲ್ಲದೆ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ಗಿಲ್ 100 ರನ್‌ಗಳ ಗಡಿಯನ್ನು ತಲುಪಲು ಒಟ್ಟು 228 ಎಸೆತಗಳನ್ನು ಎದುರಿಸಿದ್ದು, ಅವರ ಜಾಣ್ಮೆಯ ಆಟಕ್ಕೆ ಹಿಡಿದ ಕೈಗನ್ನಡಿಯಾಗಿದೆ.
35 ವರ್ಷಗಳ ನಂತರ ಇತಿಹಾಸ ಸೃಷ್ಟಿ
ಗಿಲ್ ಗಿಂತ ಮೊದಲು, ಮ್ಯಾಂಚೆಸ್ಟರ್‌ನಲ್ಲಿ ಕೊನೆಯ ಶತಕ 1990 ರಲ್ಲಿ ಸಚಿನ್ ತೆಂಡೂಲ್ಕರ್ ಅವರ ಬ್ಯಾಟ್‌ನಿಂದ ಬಂದಿತ್ತು. ಅಂದರೆ, 35 ವರ್ಷಗಳ ನಂತರ ಭಾರತೀಯ ಆಟಗಾರನೊಬ್ಬ ಈ ಮೈದಾನದಲ್ಲಿ ಶತಕ ಸಿಡಿಸಿದ್ದಾನೆ. ಅದೇ ಸಮಯದಲ್ಲಿ, ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಶತಕ ಬಾರಿಸುವುದು ಟೀಂ ಇಂಡಿಯಾ ನಾಯಕರಿಗೆ ಯಾವಾಗಲೂ ಸವಾಲಿನ ಕೆಲಸವಾಗಿದೆ. 1990 ರ ಆರಂಭದಲ್ಲಿ ಅಂದಿನ ನಾಯಕ ಮೊಹಮ್ಮದ್ ಅಜರುದ್ದೀನ್ ಈ ಮೈದಾನದಲ್ಲಿ ಶತಕ ಬಾರಿಸಿದ್ದರು. ಇದೀಗ 35 ವರ್ಷಗಳ ನಂತರ ಈ ಬರಗಾಲವನ್ನು ಕೊನೆಗೊಳಿಸುವ ಮೂಲಕ ಗಿಲ್ ಇತಿಹಾಸ ಸೃಷ್ಟಿಸಿದ್ದಾರೆ.
IND vs ENG: ಆಂಗ್ಲರನ್ನು ಕಾಡಿದ ರಾಹುಲ್- ಗಿಲ್; 4ನೇ ದಿನದಾಟದಂತ್ಯಕ್ಕೆ ಭಾರತ 174/2
ಜೈಸ್ವಾಲ್ ದಾಖಲೆ ಧ್ವಂಸ
ಇದರೊಂದಿಗೆ ಗಿಲ್, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ದಾಖಲೆಯನ್ನು ಸಹ ಮಾಡಿದ್ದಾರೆ. ಇದಕ್ಕೂ ಮೊದಲು, ಯಶಸ್ವಿ ಜೈಸ್ವಾಲ್ 2024 ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 712 ರನ್ ಗಳಿಸಿದ್ದರು. ಗಿಲ್ ಈಗ ಅವರನ್ನು ಹಿಂದಿಕ್ಕಿದ್ದಾರೆ. ಇದು ಮಾತ್ರವಲ್ಲದೆ, ಡಾನ್ ಬ್ರಾಡ್ಮನ್ ಮತ್ತು ಸುನಿಲ್ ಗವಾಸ್ಕರ್ ನಂತರ ಟೆಸ್ಟ್ ಸರಣಿಯಲ್ಲಿ 4 ಶತಕಗಳನ್ನು ಗಳಿಸಿದ ಮೂರನೇ ನಾಯಕ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:16 pm, Sun, 27 July 25
