ಭರ್ಜರಿ ಸೆಂಚುರಿಯೊಂದಿಗೆ ಹಲವು ದಾಖಲೆ ಬರೆದ ಶುಭ್​ಮನ್ ಗಿಲ್

| Updated By: ಝಾಹಿರ್ ಯೂಸುಫ್

Updated on: Sep 16, 2023 | 4:39 PM

Shubman Gill Records: ಈ ಪಂದ್ಯದಲ್ಲಿ ಬಾಂಗ್ಲಾದೇಶ್ ನೀಡಿದ 265 ರನ್​ಗಳನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಶುಭ್​ಮನ್ ಗಿಲ್ ಶತಕ ಸಿಡಿಸಿ ಭರ್ಜರಿ ಆರಂಭ ಒದಗಿಸಿದ್ದರು. ಆದರೆ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 259 ರನ್​ಗಳಿಗೆ ಆಲೌಟ್ ಆಗುವ ಮೂಲಕ ಭಾರತ ತಂಡವು 6 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಭರ್ಜರಿ ಸೆಂಚುರಿಯೊಂದಿಗೆ ಹಲವು ದಾಖಲೆ ಬರೆದ ಶುಭ್​ಮನ್ ಗಿಲ್
Shubman Gill
Follow us on

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಟೀಮ್ ಇಂಡಿಯಾ ಆರಂಭಿಕ ಆಟಗಾರ ಶುಭ್​ಮನ್ ಗಿಲ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ 133 ಎಸೆತಗಳನ್ನು ಎದುರಿಸಿದ ಶುಭ್​ಮನ್ ಗಿಲ್ 5 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ಗಳನ್ನು ಒಳಗೊಂಡಂತೆ 121 ರನ್ ಬಾರಿಸಿದ್ದರು. ಈ ಶತಕದೊಂದಿಗೆ 2023 ರಲ್ಲಿ ಏಕದಿನ ಕ್ರಿಕೆಟ್​ನಲ್ಲಿ 5 ಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು.

ಅಷ್ಟೇ ಅಲ್ಲದೆ 2023 ರಲ್ಲಿ ಏಕದಿನ ಕ್ರಿಕೆಟ್​ನಲ್ಲಿ 1000 ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದರು. ಹಾಗೆಯೇ ಈ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1500 ರನ್ ಪೂರೈಸಿದ ಮೊದಲ ಬ್ಯಾಟರ್ ದಾಖಲೆಯನ್ನು ಶುಭ್​ಮನ್ ಗಿಲ್ ತಮ್ಮದಾಗಿಸಿಕೊಂಡರು.

ಹಾಗೆಯೇ ಮೊದಲ 32 ಏಕದಿನ ಇನಿಂಗ್ಸ್​ಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ನಿರ್ಮಿಸಿದರು. ಇದಕ್ಕೂ ಮುನ್ನ ಈ ದಾಖಲೆ ಹಾಶಿಮ್ ಆಮ್ಲ (1650) ಹೆಸರಿನಲ್ಲಿತ್ತು. ಇದೀಗ 1712 ರನ್ ಕಲೆಹಾಕುವ ಮೂಲಕ ಗಿಲ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇನ್ನು ಏಷ್ಯಾಕಪ್​ನಲ್ಲಿ ಬಾಂಗ್ಲಾದೇಶ್ ವಿರುದ್ಧ ಶತಕ ಬಾರಿಸಿದ ಮೂರನೇ ಭಾರತೀಯ ಆಟಗಾರ ಎಂಬ ಹಿರಿಮೆಗೂ ಶುಭ್​ಮನ್ ಗಿಲ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ (2012 ರಲ್ಲಿ) ಹಾಗೂ ವಿರಾಟ್ ಕೊಹ್ಲಿ (2014 ರಲ್ಲಿ) ಮಾತ್ರ ಈ ಸಾದನೆ ಮಾಡಿದ್ದರು.

ಇದಲ್ಲದೆ ಭಾರತದ ಪರ ಕಡಿಮೆ ಇನಿಂಗ್ಸ್​ಗಳಲ್ಲಿ 5 ಶತಕಗಳನ್ನು ಬಾರಿಸಿದ 2ನೇ ಬ್ಯಾಟರ್ ಎಂಬ ದಾಖಲೆಯನ್ನು ಗಿಲ್ ತಮ್ಮದಾಗಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ 28 ಇನಿಂಗ್ಸ್​ಗಳಲ್ಲಿ 5 ಶತಕ ಸಿಡಿಸಿದ ಶಿಖರ್ ಧವನ್ ಅಗ್ರಸ್ಥಾನದಲ್ಲಿದ್ದಾರೆ. ಇದೀಗ 32 ಇನಿಂಗ್ಸ್​ಗಳ ಮೂಲಕ ಶುಭ್​ಮನ್ ಗಿಲ್ 5 ಏಕದಿನ ಶತಕಗಳನ್ನು ಪೂರೈಸಿದ್ದಾರೆ.

ಇದನ್ನೂ ಓದಿ: ಯೋ ಯೋ ಟೆಸ್ಟ್​ನಲ್ಲಿ ವಿರಾಟ್ ಕೊಹ್ಲಿಯನ್ನೇ ಹಿಂದಿಕ್ಕಿದ ಶುಭ್​ಮನ್ ಗಿಲ್

ಈ ವರ್ಷ ಅತ್ಯಧಿಕ ಶತಕ ಸಿಡಿಸಿದ ಬ್ಯಾಟರ್​ಗಳ ಪಟ್ಟಿಯಲ್ಲೂ ಶುಭ್​ಮನ್ ಗಿಲ್ ಅಗ್ರಸ್ಥಾನದಲ್ಲಿದ್ದಾರೆ. ಗಿಲ್ ಒಟ್ಟು 6 ಶತಕಗಳನ್ನು ಬಾರಿಸಿದ ಅಗ್ರಸ್ಥಾನದಲ್ಲಿದ್ದರೆ, 2023 ರಲ್ಲಿ 5 ಶತಕ ಸಿಡಿಸಿರುವ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.

ಶುಭ್​ಮನ್ ಗಿಲ್ ಶತಕ ವ್ಯರ್ಥ:

ಈ ಪಂದ್ಯದಲ್ಲಿ ಬಾಂಗ್ಲಾದೇಶ್ ನೀಡಿದ 265 ರನ್​ಗಳನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಶುಭ್​ಮನ್ ಗಿಲ್ ಶತಕ ಸಿಡಿಸಿ ಭರ್ಜರಿ ಆರಂಭ ಒದಗಿಸಿದ್ದರು. ಆದರೆ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 259 ರನ್​ಗಳಿಗೆ ಆಲೌಟ್ ಆಗುವ ಮೂಲಕ ಭಾರತ ತಂಡವು 6 ರನ್​ಗಳಿಂದ ಸೋಲೊಪ್ಪಿಕೊಂಡಿತು.