ಏಕದಿನ ಇತಿಹಾಸದ ಅತಿ ವೇಗದ ದ್ವಿಶತಕ ಬಾರಿಸಿದ ಶುಭ್ಮನ್ ಗಿಲ್..!
ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ ತಮ್ಮ ಏಕದಿನ ವೃತ್ತಿಜೀವನದ ಎರಡನೇ ದ್ವಿಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದಾರೆ. ಗುವಾಹಟಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 200 ರನ್ ಗಳಿಸಿದ ಗಿಲ್, ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಎರಡು ದ್ವಿಶತಕಗಳನ್ನು ಬಾರಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಈ ಮೊದಲು ನ್ಯೂಜಿಲೆಂಡ್ ವಿರುದ್ಧ ದ್ವಿಶತಕ ಬಾರಿಸಿದ್ದ ಗಿಲ್, ರೋಹಿತ್ ಶರ್ಮಾ ಅವರಂತಹ ದಿಗ್ಗಜರ ಪಟ್ಟಿಗೆ ಸೇರಿದ್ದಾರೆ.

ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ ತಮ್ಮ ಏಕದಿನ ವೃತ್ತಿಜೀವನದ ಎರಡನೇ ದ್ವಿಶತಕ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ. ಗುವಾಹಟಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಶುಭ್ಮನ್ ಗಿಲ್ 200 ರನ್‌ಗಳ ಇನ್ನಿಂಗ್ಸ್ ಆಡಿದರು. ಈ ಮೂಲಕ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಎರಡು ದ್ವಿಶತಕಗಳನ್ನು ಬಾರಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಗಿಲ್ ಪಾತ್ರರಾಗಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಇದುವರೆಗೆ 3 ದ್ವಿಶತಕಗಳನ್ನು ಬಾರಿಸಿದ್ದಾರೆ. ಈ ಮೊದಲು ನ್ಯೂಜಿಲೆಂಡ್ ವಿರುದ್ಧ ತಮ್ಮ ಮೊಟ್ಟ ಮೊದಲ ದ್ವಿಶತಕವನ್ನು ಬಾರಿಸಿದ್ದ ಗಿಲ್, ಇದೀಗ ವಿಂಡೀಸ್ ವಿರುದ್ಧವೂ ದ್ವಿಶತಕ ಸಿಡಿಸಿದ್ದಾರೆ.
ಅತಿ ವೇಗದ ದ್ವಿಶತಕ
ವೆಸ್ಟ್ ಇಂಡೀಸ್ ನೀಡಿದ್ದ 406 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ಪರ ನಾಯಕತ್ವದ ಇನ್ನಿಂಗ್ಸ್ ಆಡಿದ ಗಿಲ್ ಕೇವಲ 117 ಎಸೆತಗಳಲ್ಲಿ ದ್ವಿಶತಕ ಸಿಡಿಸಿ, ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ ದ್ವಿಶತಕ ಬಾರಿಸಿದ ವಿಶ್ವ ದಾಖಲೆಯನ್ನು ನಿರ್ಮಿಸಿದರು. ಇಲ್ಲಿಯವರೆಗೆ, ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ ದ್ವಿಶತಕ ಸಿಡಿಸಿದ ದಾಖಲೆಯನ್ನು ಭಾರತದ ಇಶಾನ್ ಕಿಶನ್ ಹೊಂದಿದ್ದರು, ಅವರು ಬಾಂಗ್ಲಾದೇಶ ವಿರುದ್ಧ 126 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು. ಇದೀಗ ಆ ದಾಖಲೆ ಗಿಲ್ ಪಾಲಾಗಿದೆ.
ಏಕದಿನದಲ್ಲಿ ಅತಿ ವೇಗದ ದ್ವಿಶತಕ ಬಾರಿಸಿದವರ ಪಟ್ಟಿ
- 117 ಎಸೆತಗಳು- ಶುಭ್ಮನ್ ಗಿಲ್ vs ವೆಸ್ಟ್ ಇಂಡೀಸ್ (ಗುವಾಹಟಿ, 2026)*
- 126 ಎಸೆತಗಳು- ಇಶಾನ್ ಕಿಶನ್ vs ಬಾಂಗ್ಲಾದೇಶ (ಚಟ್ಟೋಗ್ರಾಮ್, 2022)
- 128 ಎಸೆತಗಳು- ಗ್ಲೆನ್ ಮ್ಯಾಕ್ಸ್‌ವೆಲ್ vs ಅಫ್ಘಾನಿಸ್ತಾನ (ಮುಂಬೈ, 2023)
- 136 ಎಸೆತಗಳು- ಪಾತುಮ್ ನಿಸ್ಸಾಂಕ vs ಅಫ್ಘಾನಿಸ್ತಾನ (ಪಲ್ಲೆಕೆಲೆ, 2024)
- 138 ಎಸೆತಗಳು- ಕ್ರಿಸ್ ಗೇಲ್ vs ಜಿಂಬಾಬ್ವೆ (ಕ್ಯಾನ್‌ಬೆರಾ, 2015)
ಕೊಹ್ಲಿ, ಧೋನಿ ದಾಖಲೆ ಉಡೀಸ್
ಇದರೊಂದಿಗೆ ಗಿಲ್ ಏಕದಿನ ಪಂದ್ಯವೊಂದರಲ್ಲಿ ಗುರಿ ಬೆನ್ನಟ್ಟುವಾಗ ಅತಿ ದೊಡ್ಡ ಇನ್ನಿಂಗ್ಸ್ ಆಡಿದ ಭಾರತೀಯ ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಮೂಲಕ ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ದಾಖಲೆಯನ್ನು ಗಿಲ್ ಮುರಿದಿದ್ದಾರೆ. ಇವರಿಬ್ಬರು ಗುರಿ ಬೆನ್ನಟ್ಟುವಾಗ ತಲಾ 183 ರನ್‌ಗಳ ಇನ್ನಿಂಗ್ಸ್ ಆಡಿದ್ದರು.
- 200+ ರನ್- ಶುಭ್ಮನ್ ಗಿಲ್ vs ವೆಸ್ಟ್ ಇಂಡೀಸ್ (ಗುವಾಹಟಿ, 2026)*
- 183 ರನ್- ಎಂಎಸ್ ಧೋನಿ vs ಶ್ರೀಲಂಕಾ (ಜೈಪುರ, 2005)
- 183 ರನ್- ವಿರಾಟ್ ಕೊಹ್ಲಿ vs ಪಾಕಿಸ್ತಾನ (ಢಾಕಾ, 2012)
- 175 ರನ್‌ಗಳು- ಸಚಿನ್ ತೆಂಡೂಲ್ಕರ್ vs ಆಸ್ಟ್ರೇಲಿಯಾ (ಹೈದರಾಬಾದ್, 2009)
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:48 pm, Wed, 30 September 26




