
ಭಾರತದ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕತ್ವದ ಜೊತೆಗೆ ಟಿ20 ತಂಡದ ಉಪನಾಯಕನಾಗಿರುವ ಶುಭ್ಮನ್ ಗಿಲ್ (Shubman Gill) ಈ ಜವಾಬ್ದಾರಿಗಳನ್ನು ಹೊತ್ತ ಬಳಿಕ ಯಶಸ್ಸು ಸಾಧಿಸಿದ್ದಕ್ಕಿಂತ ಮುಗ್ಗರಿಸಿದ್ದೆ ಹೆಚ್ಚು. ಅದರಲ್ಲೂ ಆಟಗಾರನಾಗಿ ಹೀನಾಯ ಫಾರ್ಮ್ನಲ್ಲಿರುವ ಗಿಲ್, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವಾಸ್ತವವಾಗಿ ಶುಭ್ಮನ್ ಗಿಲ್ ಟಿ20 ಮಾದರಿಗೆ ಸರಿಹೊಂದುವ ಆಟಗಾರನಲ್ಲ ಎಂಬ ಮಾತುಗಳು ಬಹಳ ದಿನಗಳಿಂದಲೇ ಕೇಳಿಬರುತ್ತಿದೆ. ಇದೆಲ್ಲದರ ನಡುವೆಯೂ ಅವರಿಗೆ ಅವಕಾಶಗಳ ಮೇಲೆ ಅವಕಾಶ ಸಿಗುತ್ತಿದೆ. ಆದರೆ ಈ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಗಿಲ್ ಎಡವಿದ್ದಾರೆ. ಇದಕ್ಕೆ ಪೂರಕವೆಂಬಂತೆ, ಕಟಕ್ನಲ್ಲಿ ನಡೆದ ಮೊದಲ ಟಿ20ಯಲ್ಲಿ ಕೇವಲ 4 ರನ್ ಗಳಿಸಿದ್ದ ಗಿಲ್, ನ್ಯೂಚಂಡೀಗಢದಲ್ಲಿ ನಡೆದ ಎರಡನೇ ಟಿ20ಪಂದ್ಯದ ಮೊದಲ ಎಸೆತದಲ್ಲೇ ಔಟಾದರು.
ಎರಡನೇ ಟಿ20 ಪಂದ್ಯದಲ್ಲಿ ಶುಭ್ಮನ್ ಗಿಲ್ ಗೋಲ್ಡನ್ ಡಕ್‌ಗೆ ಔಟಾದರು. ಟಿ20ಮಾದರಿಯಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದು ಅವರ ಮೊದಲ ಗೋಲ್ಡನ್ ಡಕ್ ಆಗಿದೆ. ಅಂದರೆ ಮೊದಲ ಎಸೆತದಲ್ಲೇ ಶುಭ್ಮನ್ ಗಿಲ್ ಔಟಾದದ್ದು ಇದೇ ಮೊದಲು. ಅಲ್ಲದೆ ಗಿಲ್, ಈ ವರ್ಷ ಆಡಿರುವ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅರ್ಧಶತಕದ ಬರ ಎದುರಿಸುತ್ತಿದ್ದಾರೆ. ಈ ವರ್ಷ ಆಡಿರುವ 14 ಟಿ20 ಇನ್ನಿಂಗ್ಸ್‌ಗಳಲ್ಲಿ ಗಿಲ್, ಕೇವಲ 23.9 ಸರಾಸರಿಯಲ್ಲಿ 263 ರನ್ ಗಳಿಸಿದ್ದಾರೆ. ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್‌ರಂತಹ ಆಟಗಾರರನ್ನು ಬೆಂಚ್ ಮೇಲೆ ಕೂರಿಸಿ, ಗಿಲ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಲಾಗುತ್ತಿದೆ. ಅವರನ್ನು ಉಪನಾಯಕರನ್ನಾಗಿಯೂ ನೇಮಿಸಲಾಗಿದೆ, ಆದರೆ ಅವರ ಪ್ರದರ್ಶನ ಈ ಇಬ್ಬರು ಆಟಗಾರರ ಬಳಿಯೂ ಇಲ್ಲ.
ಇತ್ತ ಮೂರು ಅಂತರರಾಷ್ಟ್ರೀಯ ಟಿ20 ಶತಕಗಳನ್ನು ಬಾರಿಸಿದ್ದರೂ ಸಂಜು ಸ್ಯಾಮ್ಸನ್‌ಗೆ ಆಡಲು ಅವಕಾಶ ಸಿಗುತ್ತಿಲ್ಲ. ಇತ್ತ ಯಶಸ್ವಿ ಜೈಸ್ವಾಲ್ ಕೂಡ 160 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 723 ರನ್ ಗಳಿಸಿದ್ದಾರೆ. ಅವರು ಕೂಡ ಒಂದು ಟಿ20 ಶತಕ ಮತ್ತು 36 ಕ್ಕಿಂತ ಹೆಚ್ಚು ಸರಾಸರಿಯನ್ನು ಹೊಂದಿದ್ದಾರೆ, ಆದರೂ ಈ ಆಟಗಾರ ಇನ್ನೂ ತಂಡದಿಂದ ಹೊರಗಿದ್ದಾರೆ. ಆದರೆ ಪದೇ ಪದೇ ಎಡವುತ್ತಿರುವ ಗಿಲ್‌ಗೆ ಅವಕಾಶಗಳ ಮೇಲೆ ಅವಕಾಶ ನೀಡುತ್ತಿರುವುದು ಟೀಂ ಇಂಡಿಯಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:05 pm, Thu, 11 December 25